ADVERTISEMENT

ಕೇಂದ್ರ ಬಜೆಟ್ ಕುರಿತು ರಾಜಕೀಯ ನಾಯಕರು, ತಜ್ಞರು ನೀಡಿದ ಪ್ರತಿಕ್ರಿಯೆ ಏನು?

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 18:47 IST
Last Updated 1 ಫೆಬ್ರುವರಿ 2026, 18:47 IST
<div class="paragraphs"><p>ಕೇಂದ್ರ ಬಜೆಟ್</p></div>

ಕೇಂದ್ರ ಬಜೆಟ್

   

ಬೆಂಗಳೂರು: ‘ಕೇಂದ್ರ ಬಜೆಟ್‌ನಲ್ಲಿ ಪ‍್ರಸ್ತಾಪಿಸಿರುವ ವಿಶ್ವವಿದ್ಯಾಲಯ ಟೌನ್‌ಶಿಪ್‌ಗಳ ನಿರ್ಮಾಣ ಮತ್ತು 5 ಪ್ರಾದೇಶಿಕ ವೈದ್ಯಕೀಯ ಪ್ರವಾಸೋದ್ಯಮ ಹಬ್‌ಗಳ ಅಭಿವೃದ್ಧಿ ಯೋಜನೆಗಳು ನಮ್ಮ ಕ್ವಿನ್ ಸಿಟಿ ಪರಿಕಲ್ಪನೆಯಿಂದ ಪ್ರಭಾವಿತ ಆಗಿವೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

‘ದಾಬಸ್‌ಪೇಟೆ ಸಮೀಪ 5,000 ಎಕರೆಯಲ್ಲಿ ಕ್ವಿನ್‌ ಸಿಟಿ ಬರಲಿದೆ. ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳು, ಗುಣಮಟ್ಟದ ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು ಇರಲಿವೆ. ಇಂಥದ್ದೇ ಸೌಕರ್ಯಗಳಿರುವ ಟೌನ್‌ಶಿಪ್‌ ನಿರ್ಮಾಣಕ್ಕೆ ಕೇಂದ್ರವು ಮುಂದಾಗಿದೆ. ಬಯೋಫಾರ್ಮಾ ಹಬ್‌ ಸಹ ಕರ್ನಾಟಕ ಸರ್ಕಾರದ ಯೋಜನೆಗಳ ಪ್ರತಿಫಲನವೇ ಆಗಿದೆ. ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲ್ಲಿ ಕರ್ನಾಟಕದ ಅಭಿವೃದ್ಧಿ  ಮಾದರಿಗಳನ್ನು ಅನುಕರಿಸುತ್ತಿದೆ’ ಎಂದು ಪ್ರತಿಪಾದಿಸಿದ್ದಾರೆ.

ADVERTISEMENT

‘ತೆರಿಗೆ ಪಾಲು, ಕೈಗಾರಿಕಾ ಬೆಳವಣಿಗೆ ಇತ್ಯಾದಿಗಳಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರವು ಹೆಚ್ಚು ಲಾಭದಾಯಕ ಯೋಜನೆಗಳನ್ನು ಕೊಡಬೇಕು ಎಂದು ಅಪೇಕ್ಷಿಸುವುದು ನಮ್ಮ ನ್ಯಾಯಬದ್ಧ ಹಕ್ಕಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಘೋಷಿಸಿರುವ ₹ 5,600 ಕೋಟಿ ನೆರವು ಬಿಡುಗಡೆ ಮಾಡಬೇಕೆಂಬ ನಮ್ಮ ಬೇಡಿಕೆಯ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲ’ ಎಂದು ಅವರು ಹೇಳಿದ್ದಾರೆ.

ಇದು ದೂರದೃಷ್ಟಿ ಇಲ್ಲದ, ನಿರಾಶಾದಾಯಕ ಬಜೆಟ್.‌ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ರಾಜ್ಯಕ್ಕೆ ಬರೀ ಚೊಂಬು ಕೊಟ್ಟಿದೆ. ಕೇವಲ ಕರ್ನಾಟಕವಲ್ಲ, ಇಡೀ‌ ದಕ್ಷಿಣ ಭಾರತಕ್ಕೇ ಏನೂ ಕೊಟ್ಟಿಲ್ಲ. ಇಡೀ ಬಜೆಟ್‌ ತುಂಬ ವಿಕಸಿತ‌ ಭಾರತದ ಬಗೆಗೆ ಪ್ರಸ್ತಾಪವಿದೆ. ಅದು ಬರೀ‌ ಮಾತಿನಲ್ಲಿದೆ. ಅದನ್ನು ಕೃತಿಗೆ ಇಳಿಸುವ‌ ಯಾವುದೇ ಯೋಜನೆಗಳಿಲ್ಲ. ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸುವಂತೆ ನಾವು ಕೇಳಿದ್ದೆವು.‌ ಅದರ, ಬಗೆಗೆ ಒಂದೂ ಪದವಿಲ್ಲ. 2023–24ರಲ್ಲಿ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್, ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಘೋಷಿಸಿದ್ದರು. ಈತನಕ ಒಂದೂ ರೂಪಾಯಿ ಕೊಟ್ಟಿಲ್ಲ
- ಸಿದ್ದರಾಮಯ್ಯ, ಮುಖ್ಯಮಂತ್ರಿ
ವಿಕಸಿತ ಭಾರತ ಸಾಕಾರಕ್ಕೆ ಬಜೆಟ್ ಪೂರಕವಾಗಿದೆ. ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ರಾಜ್ಯಕ್ಕೆ ವರದಾನವಾಗಲಿದೆ. 16ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇ 4.13ರಷ್ಟು ತೆರಿಗೆ ಪಾಲು ಹಂಚಿಕೆಗೆ ಶಿಫಾರಸು ಮಾಡಿದೆ. 15ನೇ ಹಣಕಾಸು ಆಯೋಗವು ಶೇ 3.64 ಹಂಚಿಕೆ ಮಾಡಿತ್ತು. ಹೊಸದಾಗಿ ಹಂಚಿಕೆ ಆಗಿರುವುದರ ಮೂಲಕ ರಾಜ್ಯಕ್ಕೆ 2026–27ನೇ ಸಾಲಿನಲ್ಲಿ ₹63,049 ಕೋಟಿ ತೆರಿಗೆ ಪಾಲು ದೊರೆಯಲಿದೆ. ಇನ್ನು ಮುಂದೆ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ರಾಜಕೀಯವಾಗಿ ಕೇಂದ್ರವನ್ನು ಟೀಕೆ ಮಾಡುವುದನ್ನು ಬಿಡಬೇಕು..
– ಎಚ್.ಡಿ. ಕುಮಾರಸ್ವಾಮಿ, ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ
ಇದು ಜನಹಿತದ ಬಜೆಟ್‌. ಕೈಗಾರಿಕೆ, ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯ ನಿರ್ಮಿಸಲು ಕೇಂದ್ರ ಸರ್ಕಾರವೇ ಮುಂದೆ ಬಂದಿರುವುದು ಇದೇ ಮೊದಲು. ಈ ಬಜೆಟ್‌ನಿಂದ ರಾಜ್ಯಕ್ಕೆ ಸಾಕಷ್ಟು ಅನುಕೂಲಗಳಿವೆ. ಶ್ರೀಗಂಧ, ತೆಂಗಿನ ಬೆಳೆ ಉತ್ತೇಜನಕ್ಕೆ ಹಾಗೂ ಮೌಲ್ಯವರ್ಧನೆಗೆ ಹೊಸ ಕ್ರಮಗಳನ್ನು ಘೋಷಿಸಲಾಗಿದೆ. ಪ್ರವಾಸಿ ಮಾರ್ಗದರ್ಶಕರಿಗೆ ತರಬೇತಿ ನೀಡುವ ಯೋಜನೆಯಿಂದಲೂ ಕರ್ನಾಟಕಕ್ಕೆ ಲಾಭವಾಗಲಿದೆ.
– ಆರ್‌.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಸಂಕಲ್ಪಕ್ಕೆ ಪೂರಕವಾಗಿ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಿದ್ದಾರೆ. ಮೂರು ಕರ್ತವ್ಯ ಶಕ್ತಿಗಳ ಆಧಾರದ ಮೇಲೆ ಮಂಡಿಸಿದ ಬಜೆಟ್ ಇದಾಗಿದೆ. ಕೈಗಾರಿಕೆ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಘೋಷಿಸಿದ್ದಾರೆ. ಉತ್ಪಾದನೆ ಹೆಚ್ಚಳ, ಜನರ ಆಶೋತ್ತರಗಳ ಈಡೇರಿಕೆ ಹಾಗೂ ಎಲ್ಲರ ಜತೆ ಎಲ್ಲರ ವಿಕಾಸದ ಅಂಶಗಳಿಗೆ ಒತ್ತು ನೀಡಲಾಗಿದೆ.
– ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿಸುವ ಬಜೆಟ್‌ ಇದು. ವಿಶ್ವದ ಬಹುತೇಕ ದೇಶಗಳು ಆರ್ಥಿಕ ಬಿಕ್ಕಟ್ಟಿನಲ್ಲಿ ಇರುವಂತಹ ಸಂದರ್ಭದಲ್ಲಿ, ಭಾರತವು ಆರ್ಥಿಕ ಪ್ರಗತಿಯಲ್ಲಿ ಮುಂದುವರಿಯುವಂತಹ ಅಭಿವೃದ್ಧಿ ಪರವಾದ ಬಜೆಟ್‌ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಸರ್ವರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಶೇ 7.4ರಷ್ಟು ಆರ್ಥಿಕ ಬೆಳವಣಿಗೆ ದರ ಕಾಯ್ದುಕೊಳ್ಳುವುದು ಮತ್ತು ವಿತ್ತೀಯ ಕೊರತೆಯನ್ನು ಶೇ4.3ಕ್ಕೆ ನಿಯಂತ್ರಿಸುವುದು ಸಾಧನೆಯೇ ಸರಿ. ಆರ್ಥಿಕ ಶಿಸ್ತನ್ನು ಕಾಯ್ದುಕೊಂಡಿರುವ ಬಜೆಟ್‌ ಇದು.
– ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದ
ಬೆಲೆ ಏರಿಕೆಯನ್ನು ತಹಬಂದಿಗೆ ತರುವ, ರೂಪಾಯಿಯ ಅಪಮೌಲ್ಯ ತಡೆಗಟ್ಟುವ, ಉದ್ಯೋಗ ಸೃಷ್ಟಿಯ ಯಾವ ಮುನ್ನೋಟಗಳೂ ಇಲ್ಲದ ಬಜೆಟ್‌. ಜನರ ಸಂಬಳ ಏರಿಕೆಯಾಗದ, ಅವಕಾಶಗಳು ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲೂ ಆದಾಯ ಹೆಚ್ಚಿಸುವ ಯಾವ ಕ್ರಮವನ್ನು ಬಜೆಟ್‌ ಒಳಗೊಂಡಿಲ್ಲ. ಮಧ್ಯಮ ವರ್ಗ, ರೈತರು ಮತ್ತು ಸಣ್ಣ–ಮಧ್ಯಮ ಕೈಗಾರಿಕೆಗಳಿಗೆ ಯಾವುದೇ ಪರಿಹಾರಗಳಿಲ್ಲ. ಆಕರ್ಷಕ ಘೋಷಣೆಗಳ ವೇಷದಲ್ಲಿ ಈ ಎಲ್ಲವನ್ನೂ ಕಡೆಗಣಿಸಿರುವ ಬಜೆಟ್‌ ಇದು.
– ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ

ಹಳೆ ಬಾಟಲಿ, ಹೊಸ ದ್ರಾಕ್ಷಾರಸ: ಈಶ್ವರ​ ಖಂಡ್ರೆ

‘ಕೇಂದ್ರ ಬಜೆಟ್​ನಲ್ಲಿ ಯಾವುದೇ ಗಣನೀಯ ಸುಧಾರಣೆ ಆಗಿಲ್ಲ. ಸರ್ಕಾರಿ ವೆಚ್ಚಗಳ ಮೇಲೆ ಯಾವುದೇ ನಿಯಂತ್ರಣವೂ ಇಲ್ಲ. ಕರ್ನಾಟಕಕ್ಕಂತೂ ಹೇಳಿಕೊಳ್ಳುವಂತಹ ಪ್ರಯೋಜನ ಬಜೆಟ್​ನಲ್ಲಿ ಆಗಿಲ್ಲ’ ಎಂದು ಅರಣ್ಯ ಸಚಿವ ಸಚಿವ ಈಶ್ವರ​ ಖಂಡ್ರೆ ಟೀಕಿಸಿದ್ದಾರೆ.

‘ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ನುಡಿದಂತೆ ನಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಬಜೆಟ್​ನಲ್ಲಿಯೂ ರಾಜ್ಯದಲ್ಲಿ ಯುವಜನರಿಗೆ ಉದ್ಯೋಗ ಸೃಷ್ಟಿಸುವಂತಹ ಯಾವುದೇ ಯೋಜನೆ ಕಾಣುತ್ತಿಲ್ಲ. ಹಳೆಯ ಬಾಟಲಿಯಲ್ಲಿ ಹೊಸ ದ್ರಾಕ್ಷಾರಸ ತುಂಬಿದಂತಿದೆ’ ಎಂದಿದ್ದಾರೆ.

‘ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್​ನಲ್ಲಿ ಶ್ರೀಗಂಧ ಬೆಳೆಗೆ ಉತ್ತೇಜನದ ಮಾತು ಆಡಿದೆ. ಆದರೆ, ಅದು ಹೇಗೆ ಕಾರ್ಯಗತವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಕಡಲ ಆಮೆಗಳ ಸಂರಕ್ಷಣೆಯನ್ನು ಪ್ರವಾಸೋದ್ಯಮದಲ್ಲಿ ಸೇರಿಸಲಾಗಿದೆ. ಕರ್ನಾಟಕದ ಮಂಗಳೂರು ಮತ್ತು ಕಾರವಾರದಲ್ಲಿ ಈಗಾಗಲೇ ಈ ಯೋಜನೆಯಿದೆ’ ಎಂದೂ ಹೇಳಿದ್ದಾರೆ.

‘ಕರ್ನಾಟಕ ವಿರೋಧಿ ಬಜೆಟ್’

‘ಪ್ರತಿ ಬಾರಿಯೂ ದೊಡ್ಡ ದೊಡ್ಡ ಅಂಕಿ ಅಂಶಗಳನ್ನು ಹೊತ್ತು ತರುವ ನಿರ್ಮಲಾ ಸೀತಾರಾಮನ್ ಅವರು, ತಾವು ಮಂಡಿಸಿದ ಬಜೆಟ್ ಅನ್ನು ಸಮರ್ಪಕವಾಗಿ ಜಾರಿ ಮಾಡದೆ ಇನ್ನೊಂದು ಬಜೆಟ್ ಅನ್ನು ಮಂಡಿಸುವುದು ಅತ್ಯಂತ ಹಾಸ್ಯಾಸ್ಪದ ಸಂಗತಿ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಹೇಳಿದ್ದಾರೆ.

‘ಬಜೆಟ್ ಶ್ರೀಮಂತರ ಅನುಕೂಲಕ್ಕಾಗಿ ಇರುವ ವ್ಯವಸ್ಥೆ ಎಂದುಕೊಂಡೇ ಕೇಂದ್ರ ಸರ್ಕಾರವು ಬಜೆಟ್ ತಯಾರಿಸುತ್ತದೆ. ಹಾಗಾಗಿ ಕಾರ್ಪೊರೇಟ್ ಉದ್ಯಮಿಗಳಿಗೆ, ಎನ್‌ಆರ್‌ಐಗಳಿಗೆ ಮತ್ತು ಶ್ರೀಮಂತರಿಗೆ ಪೂರಕವಾಗಿ ಬಜೆಟ್ ರೂಪಿಸುತ್ತಿದೆ. ಜನ ಸಾಮಾನ್ಯರ ಪರವಾಗಿ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸದೇ ಇರುವುದು ಇವರ ಜನ ವಿರೋಧಿ ನೀತಿಗೆ ಹಿಡಿದ ಕನ್ನಡಿ’ ಎಂದಿದ್ದಾರೆ.

‘ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ, ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಬಹು ನಿರೀಕ್ಷಿತ ಮೇಕೆದಾಟು ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳನ್ನು ಕಡೆಗಣಿಸುವ ಮೂಲಕ ತಮ್ಮ ಕರ್ನಾಟಕ ವಿರೋಧಿ ನೀತಿ ಮುಂದುವರೆಸಿದ್ದಾರೆ’ ಎಂದೂ ಹೇಳಿದ್ದಾರೆ.

‘ದೂರದೃಷ್ಟಿ ಇಲ್ಲದ ಘೋಷಣೆಗಳ ಬಜೆಟ್’

‘ದೂರದೃಷ್ಟಿ ಇಲ್ಲದ ಘೋಷಣೆಗಳ ಬಜೆಟ್ ಇದು. ಕೇವಲ ಪದಗಳಿಂದ ತುಂಬಿದೆ. ದೇಶದ ಅಭಿವೃದ್ಧಿ ಬಗ್ಗೆ ಸ್ಪಷ್ಟ ದಿಕ್ಸೂಚಿಯಿಲ್ಲ’ ಎಂದು ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ.

‘ಈ ಬಜೆಟ್‌ನಲ್ಲಿ ದಕ್ಷಿಣ ಭಾರತ ಹಾಗೂ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ರೈತರಿಗೆ ಮತ್ತು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಇಲ್ಲ. ರಾಜ್ಯದ ನೀರಾವರಿ ಯೋಜನೆ ಬಗ್ಗೆ ಪ್ರಸ್ತಾಪವಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ಭರವಸೆ ಇಲ್ಲ. ಒಟ್ಟಾರೆಯಾಗಿ ದೇಶದ, ರಾಜ್ಯದ ಹಿತದೃಷ್ಟಿಯಿಂದ ಯಾವುದೇ ಮಹತ್ವವಿಲ್ಲದ ಬಜೆಟ್’ ಎಂದಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೇವಲ ಅನುದಾನ ಹಂಚಿಕೆ ಮಾಡದೇ ಫಲಿತಾಂಶ ಆಧರಿತ ಚಟುವಟಿಕೆಗಳಿಗೆ ಒತ್ತು ನೀಡಿರುವುದು ಶ್ಲಾಘನೀಯ. ಮೂಲಸೌಕರ್ಯ, ಕೌಶಲ ಅಭಿವೃದ್ದಿಗೆ ಮಹತ್ವವನ್ನು ನೀಡಲಾಗಿದೆ. ಪಿಇಎಸ್‌ ಸಂಸ್ಥೆಯು ಐದು ದಶಕಕ್ಕೂ ಹೆಚ್ಚು ಕಾಲದಿಂದ ಇದೇ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
– ಜವಾಹರ್‌ ದೊರೆಸ್ವಾಮಿ, ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ.
ಬಜೆಟ್ ಹಲವು ಅಂಶಗಳಿಗೆ ಒತ್ತು ನೀಡಿದೆ. ಎಐ ಸಾಧನವಾದ ಭಾರತ್ ವಿಸ್ತಾರ್ ಸಣ್ಣ ರೈತರೊಂದಿಗಿನ ಮಾಹಿತಿ ಅಂತರ ತಗ್ಗಿಸಲಿದೆ. ‘ಶೀ ಮಾರ್ಟ್ಸ್’ ಮಹಿಳಾ ಉದ್ಯಮಿಗಳಿಗೆ ತಳಮಟ್ಟದ ಆರ್ಥಿಕ ಸಬಲೀಕರಣದ ಭರವಸೆ ನೀಡಲಿದೆ. ಸ್ವಾವಲಂಬಿ ಭಾರತ ನಿಧಿಗೆ ₹ 2,000 ಕೋಟಿ ಹೆಚ್ಚುವರಿ ಅನುದಾನವು ಉದ್ಯಮಗಳಿಗೆ ಬಲ ನೀಡಬಹುದು.
– ನಾರಾಯಣಿ ರಾಮಚಂದ್ರನ್, ಅರ್ಥಶಾಸ್ತ್ರ ಪ್ರಾಧ್ಯಾಪಕಿ, ಎಸ್‌ವಿಕೆಂ, ಎನ್‌ಎಂಐಎಂಎಸ್‌, ಬೆಂಗಳೂರು
ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಕೇಂದ್ರ ಬಜೆಟ್‌ ದೇಶದ ನೈಜ ಆರ್ಥಿಕ ಪರಿಸ್ಥಿತಿಯ ಪ್ರತಿಬಿಂಬವಾಗಿರದೇ, ಪ್ರಶ್ನಾರ್ಹ ರೀತಿಯಲ್ಲಿ ಸಂಗ್ರಹಿಸಲಾದ ನಕಲಿ ಅಂಕಿ–ಅಂಶಗಳಿಂದ ಕೂಡಿದೆ. ಇದು ಬಿಜೆಪಿ ಸರ್ಕಾರದ ‘ಅದ್ಭುತ’ ಕಾರ್ಯಕ್ಷಮತೆಯ ಬಗ್ಗೆ ಅಂದವಾಗಿ ರೂಪಿಸಿರುವ ಸ್ವಯಂ ಪ್ರಶಂಸೆಯ ದಾಖಲೆಯಾಗಿದೆ. ವಲಯವಾರು ಅನುದಾನದ ಹಂಚಿಕೆಯನ್ನು ವಿವರಿಸಿಲ್ಲ. ದೊಡ್ಡ ಉದ್ಯಮಿಗಳಿಗೆ ಮತ್ತು ತೆರಿಗೆ ಕಳ್ಳರಿಗೆ ಹೆಚ್ಚಿನ ರಿಯಾಯಿತಿ ಮತ್ತು ಸೌಲಭ್ಯಗಳನ್ನು ನೀಡುವ ಸ್ಪಷ್ಟ ಸೂಚನೆ ನೀಡಿದೆ. 
– ಕೆ. ಉಮಾ, ರಾಜ್ಯ ಕಾರ್ಯದರ್ಶಿ, ಎಸ್‌ಯುಸಿಐ (ಕಮ್ಯುನಿಸ್ಟ್‌) 
ಕೃಷಿ ಮತ್ತು ಅದಕ್ಕೆ ಪೂರಕವಾದ  ವಲಯಗಳ ಬಲವರ್ಧನೆಗೆ ಕೇಂದ್ರ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಸಣ್ಣ ಮತ್ತು ಅತಿಸಣ್ಣ ರೈತರ ಆದಾಯ ಭದ್ರತೆ, ಉತ್ಪಾದಕತೆ ಹೆಚ್ಚಳ ಮತ್ತು ಸುಸ್ಥಿರ ಗ್ರಾಮೀಣ ಜೀವನೋಪಾಯಕ್ಕೆ ಒತ್ತು ನೀಡಲಾಗಿದೆ. ಪ್ರಸ್ತುತ ಕೃಷಿ ವಲಯದಿಂದ ದೇಶದ ಜಿಡಿಪಿಗೆ ಶೇ 18ರಷ್ಟು ಕೊಡುಗೆ ನೀಡಲಾಗುತ್ತಿದೆ. ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಶೇ 3ರಷ್ಟು ಅನುದಾನ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ವಲಯಕ್ಕೆ ಹೆಚ್ಚು ಅನುದಾನ ಒದಗಿಸಬೇಕು.
– ಎಸ್.ವಿ. ಸುರೇಶ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ 
ಗ್ರಾಮೀಣ ಮತ್ತು ಕರಾವಳಿ ಪ್ರದೇಶಗಳ ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ಸ್ಯೋದ್ಯಮ, ಪಶುಪಾಲನೆ ಮತ್ತು ಕೃಷಿ ಕ್ಷೇತ್ರಗಳಿಗೆ ವಿಶೇಷ ಪ್ರೋತ್ಸಾಹ ನೀಡಿದೆ. ಅಮೃತ್ ಸರೋವರಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದು, ಕರಾವಳಿ ಪ್ರದೇಶಗಳಲ್ಲಿ ಮತ್ಸ್ಯ ಮೌಲ್ಯ ಸರಪಳಿಯನ್ನು ಬಲಪಡಿಸಿ, ಸ್ಟ್ರಾರ್ಟ್‌ಅಪ್‌ಗಳು, ಮಹಿಳಾ ನೇತೃತ್ವದ ಸಂಘ–ಸಂಸ್ಥೆಗಳು ಹಾಗೂ ಮತ್ಸ್ಯ ಕೃಷಿಕ ಉತ್ಪಾದಕರ ಸಂಘಗಳು (ಎಫ್‌ಪಿಒ) ಭಾಗವಹಿಸುವಂತೆ ಮಾರುಕಟ್ಟೆ ಸಂಪರ್ಕಗಳ ಸುಧಾರಣೆಗೆ ಆದ್ಯತೆ ನೀಡಿದೆ.
– ಹುಸೇನಸಾಬ ನದಾಫ್, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ, ಕೆಎಲ್‌ಇ ಸೊಸೈಟಿಯ ಎಸ್. ನಿಜಲಿಂಗಪ್ಪ ಕಾಲೇಜು ರಾಜಾಜಿನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.