ADVERTISEMENT

ಬಂಡವಾಳ ಮಾರುಕಟ್ಟೆ | ಎಂಎಫ್‌ ಹೂಡಿಕೆ: ನಾಮಿನಿ ಮರೆಯದಿರಿ

ಅವಿನಾಶ್ ಕೆ.ಟಿ
Published 19 ಡಿಸೆಂಬರ್ 2021, 19:31 IST
Last Updated 19 ಡಿಸೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮ್ಯೂಚುಯಲ್ ಫಂಡ್ (ಎಂಎಫ್‌) ಹೂಡಿಕೆ ಮಾಡುವಾಗ ನಾಮಿನಿ (ನಾಮ ನಿರ್ದೇಶನ) ಮಾಡುವ ಬಗ್ಗೆ ಅನೇಕರು ತಲೆ ಕೆಡಿಸಿಕೊಳ್ಳುವುದಿಲ್ಲ. ನಾಮಿನಿ ಮಾಡದಿದ್ದರೆ ಏನಾಗುತ್ತದೆ ಎಂದು ಕೆಲವರು ಪ್ರಶ್ನೆ ಮಾಡಿದರೆ, ಕೆಲವರು ಆಮೇಲೆ ನಾಮಿನಿ ಸೇರಿಸಿದರಾಯಿತು ಎಂದು ಅಕೌಂಟ್ ಓಪನ್ ಮಾಡಿಬಿಡುತ್ತಾರೆ. ಹೀಗೆ ನಾಮಿನಿ ಮಾಡುವುದಕ್ಕೆ ಗಮನಕೊಡದಿದ್ದರೆ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಮಾನ್ಯ ಪ್ರಶ್ನೆಗಳು: ಎಂಎಫ್‌ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿರುವ ವ್ಯಕ್ತಿಯು ಸಾವನ್ನಪ್ಪಿದರೆ ಅದರಲ್ಲಿನ ಹೂಡಿಕೆ ಹಣ ಏನಾಗುತ್ತದೆ? ಆ ಬಗ್ಗೆ ಅವರ ಕುಟುಂಬಸ್ಥರಿಗೆ ತಿಳಿದಿರದಿದ್ದರೆ ಹೂಡಿಕೆ ಹಣ ನಷ್ಟವಾಗುವುದೇ? ನಾಮಿನಿ ಹೆಸರಿಸದೆ ಹೂಡಿಕೆ ಮಾಡಿದರೆ ಆಗುವ ಸಮಸ್ಯೆ ಏನು? ಜಂಟಿ ಖಾತೆ ಹೊಂದಿದ್ದರೆ ಅದರ ವರ್ಗಾವಣೆ ಸಾಧ್ಯವೆ ? ಹೀಗೆ ಎಂಎಫ್‌ ಹೂಡಿಕೆಯ ಮಾಲೀಕತ್ವದ ಸುತ್ತ ಇರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ. ಅದಕ್ಕಾಗಿ ನಾಲ್ಕು ಪ್ರಮುಖ ಸನ್ನಿವೇಶಗಳನ್ನು ಗಮನಿಸೋಣ.

ರವಿ(ಹೆಸರು ಬದಲಿಸಲಾಗಿದೆ) 10 ವರ್ಷಗಳ ಕಾಲ ನಿಯಮಿತವಾಗಿ ‘ಎಂಎಫ್‌’ನಲ್ಲಿ ಹೂಡಿಕೆ ಮಾಡಿ ₹ 30 ಲಕ್ಷ ಗಳಿಸಿಕೊಂಡಿದ್ದರು. ಆದರೆ ವಿಧಿಯಾಟ ಎನ್ನುವಂತೆ ರವಿ ಅಕಾಲಿಕ ಮರಣಕ್ಕೆ ತುತ್ತಾದರು. ಇದೀಗ ಎದುರಾಗುವ ಪ್ರಶ್ನೆ ಎಂದರೆ, ಆ ₹ 30 ಲಕ್ಷ ಯಾರ ಪಾಲಾಗುತ್ತದೆ ಎನ್ನುವುದು. ಈ ಪ್ರಶ್ನೆಗೆ ಉತ್ತರ ನೀಡಬೇಕಾದರೆ ವಿವಿಧ ಸಂದರ್ಭಗಳನ್ನು ವಿವರಿಸಬೇಕಾಗುತ್ತದೆ. ಸಂದರ್ಭಕ್ಕೆ ಅನುಗುಣವಾಗಿ ಉತ್ತರವೂ ಬೇರೆ ಬೇರೆ ಆಗುತ್ತದೆ.

ADVERTISEMENT

ಸಂದರ್ಭ -1: ರವಿ ಅವರು ‘ಎಂಎಫ್‌’ನಲ್ಲಿ ₹ 30 ಲಕ್ಷ ಹೂಡಿಕೆಯ ಬಗ್ಗೆ ತಮ್ಮ ಪತ್ನಿಗೆ ಯಾವುದೇ ಮಾಹಿತಿ ನೀಡಿರದಿದ್ದರೆ ಸಂಕಷ್ಟದ ಸ್ಥಿತಿ ಬಂದೊದಗುತ್ತದೆ. ಹೂಡಿರುವ ಹಣವನ್ನು ಕ್ಲೇಮ್ ಮಾಡಬೇಕು ಎನ್ನುವ ಬಗ್ಗೆ ಕುಟುಂಬದವರಿಗೆ ಮಾಹಿತಿಯೇ ಇಲ್ಲದಿದ್ದರೆ ಅದನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಕುಟುಂಬಸ್ಥರಿಗೆ ಆರ್ಥಿಕ ನಷ್ಟವಾಗುತ್ತದೆ.

ಸಂದರ್ಭ- 2: ರವಿ ಅವರು ತಮ್ಮ ಪತ್ನಿಯನ್ನು ನಾಮಿನಿಯಾಗಿಸಿದ್ದರೆ ₹ 30 ಲಕ್ಷ ಹಣದ ಬಗ್ಗೆ ಚಿಂತಿಸಬೇಕಿಲ್ಲ. ಶ್ರೀಮತಿ ರವಿ ಅವರು ಪತಿ ಹೆಸರಿನಲ್ಲಿರುವ ಹೂಡಿಕೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬಹುದು. ಎಂಎಫ್‌ ನಿರ್ವಹಣೆ ತಿಳಿದಿಲ್ಲ ಎಂದಾದರೆ ಹೂಡಿಕೆ ಸ್ಥಗಿತಗೊಳಿಸಿ ಲಾಭಾಂಶದ ಹಣವನ್ನು 3 ವಾರಗಳ ಒಳಗಾಗಿ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು.

ಸಂದರ್ಭ-3: ರವಿ ಅವರು ಜಂಟಿ ಖಾತೆ ಮಾಡಿಸಿ ತಮ್ಮ ಪತ್ನಿಯನ್ನು ಭಾಗಿದಾರರಾಗಿಸಿದ್ದರೆ ₹ 30 ಲಕ್ಷ ಹಣದ ಬಗ್ಗೆ ಚಿಂತಿಸಬೇಕಿಲ್ಲ. ಶ್ರೀಮತಿ ರವಿ ಅವರು ಪತಿ ಹೆಸರಿನಲ್ಲಿರುವ ಹೂಡಿಕೆಯನ್ನು ತಮ್ಮ ಹೆಸರಿಗೆ ಪೂರ್ಣಪ್ರಮಾಣದಲ್ಲಿ ವರ್ಗಾಯಿಸಿ
ಕೊಳ್ಳಬಹುದು. ಎಂಎಫ್‌ ನಿರ್ವಹಣೆ ತಿಳಿದಿಲ್ಲ ಎಂದಾದರೆ ಹೂಡಿಕೆ ಸ್ಥಗಿತಗೊಳಿಸಿ ಲಾಭಾಂಶದ ಹಣವನ್ನು 3 ವಾರಗಳ ಒಳಗಾಗಿ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು.

ಸಂದರ್ಭ-4: ರವಿ ಅವರು ಎಂಎಫ್‌ನಲ್ಲಿ ₹ 30 ಲಕ್ಷ ಹೂಡಿಕೆಯ ಬಗ್ಗೆ ತಮ್ಮ ಪತ್ನಿಗೆ ಮಾಹಿತಿ ನೀಡಿ, ಆದರ ನಾಮಿನಿಯಾಗಿ ಮಾಡದಿದ್ದರೂ ಸಮಸ್ಯೆಯಾಗುತ್ತದೆ. ₹ 30 ಲಕ್ಷವನ್ನು ಎಂಎಫ್‌ ಕಂಪನಿಯಿಂದ ಪಡೆದುಕೊಳ್ಳಲು ಸಾಕಷ್ಟು ಅಲೆದಾಡಬೇಕಾಗುತ್ತದೆ. ಪತಿಯ ಮ್ಯೂಚುಯಲ್ ಫಂಡ್ ಹಣಕ್ಕೆ ಕಾನೂನುಬದ್ಧ ಉತ್ತರಾಧಿಕಾರಿ ತಾವೇ ಎಂದು ಸಾಬೀತುಪಡೆಸಲು ಪತ್ನಿ ಹೆಣಗಾಡಬೇಕಾಗುತ್ತದೆ. ಕಂಪನಿ ಕೇಳುವ ಎಲ್ಲ ಪೂರಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇದು ಪ್ರಯಾಸದ ಕೆಲಸ ಎನಿಸಿದರೂ ಹಣ ಪಡೆದುಕೊಳ್ಳಲು ಸಾಧ್ಯವಿದೆ.

ಮಾರಾಟದ ಒತ್ತಡಕ್ಕೆ ಕುಸಿದ ಸೂಚ್ಯಂಕಗಳು
ಎರಡು ವಾರಗಳಿಂದ ಗಳಿಕೆಯ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಮತ್ತೆ ನಾಕಾರಾತ್ಮಕ ಹಾದಿ ತುಳಿದಿವೆ. ಡಿಸೆಂಬರ್ 17 ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕುಸಿತ ಕಂಡಿವೆ. 57,011 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ಶೇ 3 ರಷ್ಟು ಕುಸಿದಿದ್ದರೆ, 16,985 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 3 ರಷ್ಟು ಇಳಿಕೆಯಾಗಿದೆ. ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಶೇ 4 ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 3.6 ರಷ್ಟು ಕುಸಿದಿವೆ.

ಜಾಗತಿಕವಾಗಿ ಆಯಾ ದೇಶದ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಳಕ್ಕೆ ಮುಂದಾಗಿರುವುದು, ಒಮೈಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಿರುವುದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಲಾಭ ಗಳಿಕೆಗೆ ಮುಂದಾಗಿರುವುದು ಸೇರಿ ಪ್ರಮುಖ ಅಂಶಗಳು ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಗಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಡಿಸೆಂಬರ್‌ನಲ್ಲಿ ಈವರೆಗೆ ₹ 26,687 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಹೊರತುಪಡಿಸಿ ಎಲ್ಲ ಸೂಚ್ಯಂಕಗಳು ಕುಸಿತ ಕಂಡಿವೆ. ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 8 ರಷ್ಟು, ಮಾಧ್ಯಮ ಸೂಚ್ಯಂಕ ಶೇ 8, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 7.7 ಮತ್ತು ಎಫ್ ಎಂಸಿಜಿ ಶೇ 4.6 ರಷ್ಟು ಇಳಿಕೆಯಾಗಿವೆ.

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ವಿಪ್ರೊ ಶೇ 5, ಪವರ್ ಗ್ರಿಡ್ ಶೇ 4, ಇನ್ಫೊಸಿಸ್ ಶೇ 3, ಟೆಕ್ ಮಹೀಂದ್ರ ಶೇ 2.5 ಮತ್ತು ಸನ್ ಫಾರ್ಮಾ ಶೇ 1 ರಷ್ಟು ಗಳಿಸಿಕೊಂಡಿವೆ. ಬಜಾಜ್ ಫಿನ್‌ಸರ್ವ್ ಶೇ 8, ಐಟಿಸಿ ಶೇ 8, ಬಜಾಜ್ ಫೈನಾನ್ಸ್ ಶೇ 7, ಎಚ್‌ಡಿಎಫ್‌ಸಿ ಶೇ 6.5 ಮತ್ತು ಏರ್‌ಟೆಲ್ ಶೇ 6 ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಜಾಗತಿಕವಾಗಿ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳ ಬಡ್ಡಿ ದರ ಹೆಚ್ಚಳ ಯಾವ ದಿಕ್ಕಿನಲ್ಲಿ ಸಾಗಲಿದೆ ಮತ್ತು ಒಮೈಕ್ರಾನ್‌ ಪ್ರಕರಣಗಳ ಸ್ಥಿತಿಗತಿ ಏನಾಗಲಿದೆ ಎನ್ನುವುದು ಷೇರು ಮಾರುಕಟ್ಟೆ ಸೂಚ್ಯಂಕಗಳ ಗತಿ ನಿರ್ಧರಿಸಲಿದೆ. ಷೇರು ಮಾರುಕಟ್ಟೆ ಈ ವರ್ಷ ಅನಿರೀಕ್ಷಿತವಾದ ಬೆಳವಣಿಗೆ ಕಂಡಿರುವುದರಿಂದ ಒಂದಿಷ್ಟು ಇಳಿಕೆ (ಮಾರ್ಕೆಟ್ ಕರೆಕ್ಷನ್) ನಿರೀಕ್ಷಿಸಬಹುದು. ಸದ್ಯದ ಸ್ಥಿತಿಯಲ್ಲಿ ಉತ್ತಮ ಆಂತರಿಕ ಮೌಲ್ಯವಿರುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವುದನ್ನು ಮಾತ್ರ ಹೂಡಿಕೆದಾರರು ಪರಿಗಣಿಸುವುದು ಉತ್ತಮ.

–ಅವಿನಾಶ್ ಕೆ.ಟಿ., ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.