
ಸೈಬರ್ ವಂಚನೆ
ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಪ್ರತಿದಿನ ಜನರು ಯುಪಿಐ ಆ್ಯಪ್‌ಗಳು, ಸಾಲದ ನಕಲಿ ಆ್ಯಪ್‌ಗಳು, ಅಪರಿಚಿತ ಲಿಂಕ್‌ಗಳು (ಕೊಂಡಿ), ಡಿಜಿಟಲ್ ಅರೆಸ್ಟ್, ಸ್ಕ್ರೀನ್ ಷೇರಿಂಗ್ ಆ್ಯಪ್ ವಂಚನೆಗಳಿಗೆ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದು ಆತಂಕಕಾರಿ ವಿಷಯ ಅಂದರೆ ಜನರಿಗೆ ನಷ್ಟವಾಗುತ್ತಿರುವ ಮೊತ್ತ ಸಾವಿರ ರೂಪಾಯಿಗಳ ಲೆಕ್ಕದಲ್ಲಿ ಇಲ್ಲ; ಅದು ಲಕ್ಷ ಮತ್ತು ಕೋಟಿ ರೂಪಾಯಿಗಳ ಲೆಕ್ಕಾಚಾರಕ್ಕೆ ಬರುತ್ತಿದೆ. ಹೀಗೆ ಸೈಬರ್ ವಂಚನೆಗಳಲ್ಲಿ ಗಣನೀಯ ಏರಿಕೆ ಆಗುತ್ತಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2026ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಸಾಕಷ್ಟು ಬದಲಾವಣೆಗಳನ್ನು ತರುತ್ತಿದೆ. ಆರ್‌ಬಿಐ ತರುತ್ತಿರುವ ಮಹತ್ವದ ಸುಧಾರಣೆಗಳೇನು ಎನ್ನುವುದರ ಬಗ್ಗೆ ವಿವರವಾಗಿ ತಿಳಿಯುವುದು ಅಗತ್ಯ.
ಆತಂಕ ಹುಟ್ಟಿಸುವ ಆನ್‌ಲೈನ್ ವಂಚನೆಗಳು: 2022-23ರಲ್ಲಿ 13,494 ಆನ್‌ಲೈನ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಸುಮಾರು ₹18,981 ಕೋಟಿಯನ್ನು ಜನಸಾಮಾನ್ಯರು ಕಳೆದುಕೊಂಡಿದ್ದರು. 2023-24ರಲ್ಲಿ 35,060 ವಂಚನೆ ಪ್ರಕರಣಗಳಿಂದ ₹12,230 ಕೋಟಿ ಆನ್‌ಲೈನ್ ಕಳ್ಳರ ಪಾಲಾಗಿತ್ತು. ಇನ್ನು 2024-25ನೇ ಸಾಲಿನಲ್ಲಿ 23,953 ಡಿಜಿಟಲ್ ವಂಚನೆ ಪ್ರಕರಣಗಳಿಂದ ಜನರು ₹36,014 ಕೋಟಿ ಕಳೆದುಕೊಂಡಿದ್ದಾರೆ. ಅಂದರೆ ವಂಚನೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ ವಂಚನೆ ಮೊತ್ತದ ಪ್ರಮಾಣ ಕಳೆದ ಒಂದು ವರ್ಷದ ಅವಧಿಯಲ್ಲಿ ಶೇ 194ರಷ್ಟು ಹೆಚ್ಚಳವಾಗಿದೆ. ಆರ್‌ಬಿಐ ವಾರ್ಷಿಕ ವರದಿ 2025ರಲ್ಲೇ ಈ ಬಗ್ಗೆ ಉಲ್ಲೇಖವಿದೆ.
ವಂಚನೆ ನಡೆಯುತ್ತಿರುವುದು ಹೇಗೆ?: ಕಳ್ಳರ ಪಾಲಿಗೆ ನಿಮ್ಮ ಮೊಬೈಲ್ ಫೋನೇ ಯುದ್ಧಭೂಮಿ, ನಿಮ್ಮ ನಂಬಿಕೆ ದುರ್ಬಳಕೆ ಮಾಡಿಕೊಂಡು ವಂಚಿಸುವುದೇ ಅವರ ಗುರಿ. ಆನ್‌ಲೈನ್ ವಂಚಕರು ಈಗ ಒಟಿಪಿ ಬಳಸಿ ಮೋಸ ಎಸಗುವುದನ್ನಷ್ಟೇ ಮಾಡುತ್ತಿಲ್ಲ. ಎನಿಡೆಸ್ಕ್, ಟೀಮ್ ವೀವರ್ ತರಹದ ಷೇರಿಂಗ್ ಆ್ಯಪ್‌ಗಳು, ಗೂಗಲ್‌ನಲ್ಲಿ ಬರುತ್ತಿರುವ ನಕಲಿ ಬ್ಯಾಂಕ್ ಸೇವೆ ಸಂಖ್ಯೆಗಳು, ಡೀಪ್‌ಫೇಕ್ ವಾಯ್ಸ್ ಮೆಸೇಜ್‌ಗಳು, ಮಾಲ್‌ವೇರ್ ಆ್ಯಪ್‌ಗಳು, ಲೋನ್ ಆ್ಯಪ್ ಮೂಲಕ ಬ್ಲ್ಯಾಕ್‌ಮೇಲ್ ಮಾಡುವುದು ಸೇರಿ ಹಲವು ತಂತ್ರಗಳನ್ನು ಬಳಸುತ್ತಾರೆ.
ಕಿವಿಮಾತು: ಒಂದು ಕಡೆ ಸೈಬರ್ ವಂಚಕರು ಹೊಸ ಮಾರ್ಗಗಳನ್ನು ಕಂಡುಕೊಂಡು ಗ್ರಾಹಕರ ವಂಚನೆ ಮುಂದುವರಿಸುತ್ತಿದ್ದರೆ, ಮತ್ತೊಂದೆಡೆ ಅವರ ನಿಯಂತ್ರಣಕ್ಕೆ ಆರ್‌ಬಿಐ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ. ಇದರಿಂದ ಖಂಡಿತವಾಗಿಯೂ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಆದರೆ ಕಳ್ಳರಿಗೆ ಪಾಸ್‌ವರ್ಡ್, ಒಟಿಪಿ ಕೊಟ್ಟರೆ, ಗೊತ್ತಿಲ್ಲದ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಕಾರ್ಡ್ ವಿವರ ನೀಡಿದರೆ ಎಂತಹ ಶ್ರೇಷ್ಠ ಸುರಕ್ಷತಾ ಕ್ರಮವೂ ನಿಮ್ಮ ಹಣದ ರಕ್ಷಣೆಗೆ ನಿಲ್ಲುವುದಿಲ್ಲ. ಸೈಬರ್ ವಂಚನೆಗಳ ತಡೆಗೆ ಜಾಗೃತಿಯೇ ಉತ್ತಮ ಮದ್ದು.
ಏಪ್ರಿಲ್ 1ರಿಂದ ಹೊಸ ನಿಯಮಗಳು
ಸೈಬರ್ ವಂಚನೆ ತಡೆಯಲು ಆರ್‌ಬಿಐ ಕಠಿಣ ನಿಯಮಗಳನ್ನು ಎಲ್ಲ ಬ್ಯಾಂಕ್ ಮತ್ತು ಪೇಮೆಂಟ್ ಆ್ಯಪ್‌ಗಳಿಗೆ ಅನ್ವಯವಾಗುವಂತೆ ಜಾರಿಗೆ ತರುತ್ತಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಭೀಮ್, ನೆಟ್ ಬ್ಯಾಂಕಿಂಗ್ ಆ್ಯಪ್‌ಗಳು ಈ ವ್ಯಾಪ್ತಿಗೆ ಬರುತ್ತವೆ. ಈ ಬದಲಾವಣೆಗಳು ನಿಮ್ಮ ಬ್ಯಾಂಕ್ ಮತ್ತು ಯುಪಿಐ ಆ್ಯಪ್ ಬಳಕೆ ಮೇಲೆ ನೇರ ಪರಿಣಾಮ ಉಂಟು ಮಾಡುತ್ತವೆ.
1. ಎರಡು ಹಂತದ ಪರಿಶೀಲನೆ: ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನಿಮ್ಮ ಮೊಬೈಲ್, ಲೊಕೇಷನ್ ಮತ್ತು ಪಾವತಿ ಮೊತ್ತ ಆಧರಿಸಿ ಎರಡು ಹಂತದ ಪರಿಶೀಲನೆ (ಟೂ ಫ್ಯಾಕ್ಟರ್ ಅಥೆಂಟಿಕೇಷನ್) ಜಾರಿಗೆ ಬರಲಿದೆ.
2. ಬ್ಯಾಂಕಿಂಗ್ ಆ್ಯಪ್‌ಗಳಲ್ಲಿ ಸ್ಕ್ರೀನ್ ಶಾಟ್ ರದ್ದು: ಯಾವುದೇ ಪೇಮೆಂಟ್ ಆ್ಯಪ್ ಮತ್ತು ಬ್ಯಾಂಕಿಂಗ್ ಆ್ಯಪ್‌ಗಳಲ್ಲಿ ಸ್ಕ್ರೀನ್ ಶಾಟ್, ಸ್ಕ್ರೀನ್ ರೆಕಾರ್ಡ್ ಮತ್ತು ಸ್ಕ್ರೀನ್ ಷೇರ್ ಮಾಡುವ ಅವಕಾಶವಿರುವುದಿಲ್ಲ. ವಂಚನೆಗಳನ್ನು ತಡೆಯುವ ದೃಷ್ಟಿಯಿಂದ ಈ ಕಟ್ಟುನಿಟ್ಟಿನ ನಿಯಮ ತರಲಾಗುತ್ತಿದೆ.
3. ರಾತ್ರಿ ವೇಳೆ ಪಾವತಿ ನಿರ್ಬಂಧಕ್ಕೆ ಅವಕಾಶ: ನಿಮ್ಮ ಮೊಬೈಲ್ ಮತ್ತು ಯುಪಿಐ ಪೇಮೆಂಟ್ ಆ್ಯಪ್‌ಗಳಲ್ಲಿ ರಾತ್ರಿ ವೇಳೆ ಪಾವತಿಗಳನ್ನು ತಡೆ ಹಿಡಿಯಲು ಅವಕಾಶ ಕಲ್ಪಿಸಲಾಗುತ್ತದೆ. ಉದಾಹರಣೆಗೆ ರಾತ್ರಿ 11ರಿಂದ ಬೆಳಗ್ಗೆ 6 ಗಂಟೆವರೆಗೆ ನಿಮ್ಮ ಖಾತೆಯಿಂದ ಯಾವುದೇ ಮೊತ್ತ ಹೊರ ಹೋಗದಂತೆ ತಡೆಯಲು ಇದರಿಂದ ಸಾಧ್ಯವಾಗುತ್ತದೆ. ಆನ್‌ಲೈನ್ ವಂಚಕರ ಭಯದಿಂದ ಮುಕ್ತರಾಗಿ ನೆಮ್ಮದಿಯಾಗಿ ನಿದ್ರೆ ಮಾಡಲು ಇದು ನೆರವಾಗುತ್ತದೆ.
4. ವೈರಸ್ ಕಂಡರೆ ಆ್ಯಪ್ ಕಾರ್ಯನಿರ್ವಹಣೆ ಸ್ಥಗಿತ: ಬ್ಯಾಂಕಿಂಗ್ ಅಥವಾ ಪೇಮೆಂಟ್ ಆ್ಯಪ್‌ಗಳಲ್ಲಿ ವೈರಸ್ ಕಂಡು ಬಂದರೆ ಅದರ ಕಾರ್ಯನಿರ್ವಹಣೆ ಸ್ವಯಂ ಚಾಲಿತವಾಗಿ ನಿಲ್ಲಲಿದೆ. ನಿಮ್ಮ ಮೊಬೈಲ್‌ನಲ್ಲಿ ವಿಶ್ವಾಸಾರ್ಹವಲ್ಲದ ಆ್ಯಪ್‌ಗಳು ಕಂಡು ಬಂದರೆ ಅವನ್ನು ತೆಗೆಯುವ (ಅನ್‌ಇನ್‌ಸ್ಟಾಲ್) ತನಕ ಬ್ಯಾಂಕಿಂಗ್ ಮತ್ತು ಪೇಮೆಂಟ್ ಆ್ಯಪ್ ಕೆಲಸ ಮಾಡುವುದಿಲ್ಲ.
5. ಒಟಿಪಿ ಎಸ್‌ಎಂಎಸ್ ರೂಪದಲ್ಲಿ ಬರಲ್ಲ: ಸದ್ಯ ಯಾವುದೇ ಪಾವತಿ ಮಾಡಬೇಕಾದರೆ ಎಸ್‌ಎಂಎಸ್ ಮೂಲಕ ಒಟಿಪಿ ಬರುತ್ತದೆ. ಆದರೆ ಏಪ್ರಿಲ್ 1ರಿಂದ ಒಟಿಪಿ ನಿಮ್ಮ ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ಗಳಿಗೆ ಬರಲಿದೆ. ಇದರಿಂದಾಗ ಆನ್‌ಲೈನ್ ವಂಚಕರು ಒಟಿಪಿ ಕದಿಯುವುದು ಅಷ್ಟು ಸುಲಭವಾಗುವುದಿಲ್ಲ.
6. ಅನುಮಾನಾಸ್ಪದ ವಹಿವಾಟಿಗೆ ಹೆಚ್ಚುವರಿ ಪ್ರಶ್ನೆಗಳು: ಆ್ಯಪ್‌ಗಳನ್ನು ಬಳಸಿ ನಿಮ್ಮ ಬ್ಯಾಂಕ್ ಖಾತೆಯಿಂದ ಅನುಮಾನಾಸ್ಪದ ವಹಿವಾಟುಗಳು ನಡೆಯುತ್ತಿವೆ ಎಂದಾದಲ್ಲಿ ಪಾವತಿಗೆ ತಾತ್ಕಾಲಿಕ ತಡೆಬೀಳುತ್ತದೆ. ಹೆಚ್ಚುವರಿ ಪ್ರಶ್ನೆಗಳಿಗೆ ಉತ್ತರಿಸಿ ಮರುಖಾತರಿಯಾದ ಬಳಿಕ ಪಾವತಿ ಮುಂದುವರಿಸಲು ಸಾಧ್ಯವಾಗುತ್ತದೆ.
7. ದೊಡ್ಡ ಮೊತ್ತದ ಪಾವತಿಗೆ ಬಯೊಮೆಟ್ರಿಕ್: ನೀವು ಬ್ಯಾಂಕಿಂಗ್ ಆ್ಯಪ್‌ಗಳನ್ನು ಬಳಸುವಾಗ ಟೈಪಿಂಗ್ ವೇಗ, ಸ್ವೈಪ್ ಪ್ಯಾಟರ್ನ್ ಮತ್ತು ಟಚ್ ಪ್ರೆಶರ್‌ಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ. ಯಾವುದೇ ಸಂದರ್ಭದಲ್ಲಿ ಈ ವಿಧಾನಗಳಲ್ಲಿ ಅನುಮಾನಾಸ್ಪದ ನಡೆ ಕಂಡುಬಂದರೆ ವಹಿವಾಟು ಸ್ಥಗಿತಗೊಳಿಸಲಾಗುತ್ತದೆ. ದೊಡ್ಡ
ಮೊತ್ತದ ಪಾವತಿಗಳಿಗೆ ಆಧಾರ್ ಬಯೊಮೆಟ್ರಿಕ್ ಪರಿಶೀಲನೆ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.