ADVERTISEMENT

ಷೇರು ಚಿಂತೆ ಬಿಡಿ, ‘ಎಂಎಫ್‌’ನಲ್ಲಿ ಹೂಡಿ

ನರಸಿಂಹ ಬಿ
Published 11 ನವೆಂಬರ್ 2018, 20:01 IST
Last Updated 11 ನವೆಂಬರ್ 2018, 20:01 IST
   

‘ಅಯ್ಯೋ, ಅದೇನೋ ಗೂಳಿ ಜಿಗಿತ, ಕರಡಿ ಹಿಡಿತ ಅಂತಾರೆ. ನಾನಂತೂ ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡೋ ಸಹವಾಸಕ್ಕೆ ಹೋಗಲ್ಲ. ಹೀಗಂತ ಹಿಂಜರಿಯೋ ಅನೇಕ ಮಂದಿ ನಮ್ಮ ಮಧ್ಯೆ ಇದ್ದಾರೆ. ಅಂಥವರಿಗೆ ಮ್ಯೂಚುವಲ್ ಫಂಡ್ (ಎಂಎಫ್‌) ಸ್ಕೀಮ್‌ಗಳು ಅತ್ಯಂತ ಆಕರ್ಷಕ ಮತ್ತು ಸುಭದ್ರ ಹೂಡಿಕೆ ಸಾಧನಗಳು. ಮ್ಯೂಚುವಲ್ ಫಂಡ್ ಹೂಡಿಕೆಯನ್ನು ದೀರ್ಘಾವಧಿಯ (10 ರಿಂದ 15 ವರ್ಷ) ಉದ್ದೇಶದೊಂದಿಗೆ ಮಾಡಿದರೆ ಆರ್ಥಿಕ ಲಾಭ ನಿಶ್ಚಿತ.

ನಿಮ್ಮ ಹಣವನ್ನು ನಿಮ್ಮ ಪರವಾಗಿ ಮಾರುಕಟ್ಟೆಯಲ್ಲಿ ವೃತ್ತಿಪರವಾಗಿ ಹೂಡಿಕೆ ಮಾಡುವ ವ್ಯವಸ್ಥೆಯೇ ಮ್ಯೂಚುವಲ್ ಫಂಡ್. ನೀವು ಹೂಡಿದ ಹಣವನ್ನು ಮ್ಯೂಚುವಲ್ ಫಂಡ್‌ ಕಂಪನಿಯವರು ವಿವಿಧ ಷೇರು, ಬಾಂಡ್ ಮತ್ತಿತರ ಹೂಡಿಕೆಯ ಉತ್ಪನ್ನಗಳಲ್ಲಿ ತೊಡಗಿಸುತ್ತಾರೆ. ಹೂಡಿಕೆಯಿಂದ ಬಂದ ಲಾಭದಲ್ಲಿ ನಿಯುಕ್ತವಾದ ಕಮಿಷನ್ ಪಡೆದು ನಿವ್ವಳ ಲಾಭವನ್ನು ಹೂಡಿಕೆದಾರರಿಗೆ ಹಂಚಲಾಗುತ್ತದೆ. ಇಲ್ಲಿ ಹೂಡಿಕೆ ಮತ್ತು ಸಂಬಂಧಪಟ್ಟ ಕಂಟಕಗಳನ್ನು ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ನಿರ್ವಹಿಸುತ್ತಾರೆ. ಷೇರುಪೇಟೆಯ ಏರಿಳಿತ ಮತ್ತು ರಿಸ್ಕ್‌ಗೆ ಹೋಲಿಸಿದರೆ, ಮ್ಯೂಚುವಲ್ ಫಂಡ್‌ನಲ್ಲಿ ರಿಸ್ಕ್ ಕಡಿಮೆ. ಹೀಗಾಗಿ ನಷ್ಟದ ಭಯದಿಂದಾಗಿ ಷೇರಿನಿಂದ ದೂರ ಉಳಿದಿರುವ ಜನಸಾಮಾನ್ಯರಿಗೆ ಮ್ಯೂಚುವಲ್ ಫಂಡ್ ಸೂಕ್ತ ಆಯ್ಕೆ.

ಮ್ಯೂಚುವಲ್ ಫಂಡ್‌ನಲ್ಲಿ ಲಾರ್ಜ್, ಮಿಡ್, ಮತ್ತು ಸ್ಮಾಲ್ ಕ್ಯಾಪ್ ಎಂಬ ಮೂರು ವಿಧಗಳಿವೆ. 2017 ರಲ್ಲಿ ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳು ಕ್ರಮವಾಗಿ ಶೇ 27, ಶೇ 47 ಮತ್ತು ಶೇ 58 ಲಾಭಾಂಶ ತಂದುಕೊಟ್ಟಿವೆ. ಲಾರ್ಜ್ ಕ್ಯಾಪ್ ಎಂದರೆ ದೊಡ್ಡ ಮಟ್ಟದಲ್ಲಿ ವ್ಯವಹಾರ ನಡೆಸುವ ಕಂಪನಿಗಳು. ಅದೇ ರೀತಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಅಂದರೆ ಮಧ್ಯಮ ಮತ್ತು ಸಣ್ಣ ಗಾತ್ರದ ಕಂಪನಿಗಳು. ಭಾರಿ ಮೌಲ್ಯದ ಕಂಪನಿಗಳು ಮಾರುಕಟ್ಟೆಯ ಏರಿಳಿತಗಳಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗುವುದಿಲ್ಲ. ಮಿಡ್ ಮತ್ತು ಸ್ಮಾಲ್ ಕ್ಯಾಪ್ ಫಂಡ್‌ಗಳಲ್ಲಿ ಏರಿಳಿತ ಇರುತ್ತದೆ.

ADVERTISEMENT

ಹೂಡಿಕೆ ಹೇಗೆ?: ನಿಮ್ಮ ಸಮೀಪದ ಷೇರು ಬ್ರೋಕರೇಜ್ ಏಜೆಂಟ್ ಬಳಿ ಹೋಗಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದರ ಬಗ್ಗೆ ವಿಚಾರಿಸಿದರೆ ಸಹಾಯ ಮಾಡುತ್ತಾರೆ. ಆದರೆ, ಅವರಿಗೆ ಕಮಿಷನ್ ನೀಡಬೇಕಾಗುತ್ತದೆ. ನಿಮಗೆ ಆನ್‌ಲೈನ್ ವೆಬ್‌ಸೈಟ್‌ಗಳ ಪರಿಚಯವಿದ್ದರೆ ನೇರವಾಗಿ ಮ್ಯೂಚುವಲ್ ಫಂಡ್ ಕಂಪನಿಗಳಿಗೆ ಹಣ ಪಾವತಿಸಿ ಹೂಡಿಕೆ ಮಾಡಬಹುದು.

ಈಗಂತೂ ಆ್ಯಪ್‌ಗಳೂ ಇರುವುದರಿಂದ ಮೊಬೈಲ್‌ನಲ್ಲಿಯೇ ಹೂಡಿಕೆ ಆರಂಭಿಸಬಹುದು. ಮಧ್ಯವರ್ತಿಗಳ ನೆರವಿಲ್ಲದೆ ನೇರವಾಗಿ ಹೂಡಿಕೆ ಮಾಡಿದರೆ ಲಾಭ ಹೆಚ್ಚು. ಆದರೆ ನಿಮಗೆ ಸರಿಯಾದ ತಿಳುವಳಿಕೆ ಇದ್ದರೆ ಮಾತ್ರ ಆನ್‌ಲೈನ್ ಮೂಲಕ ಖರೀದಿ ಮಾಡಿ.

ಮ್ಯೂಚುವಲ್ ಫಂಡ್ ಎಸ್‌ಐಪಿ: ಎಸ್ಐಪಿ ಅಂದರೆ ವ್ಯವಸ್ಥಿತ ಹೂಡಿಕೆ ಯೋಜನೆ. ಇದರಲ್ಲಿ ನಿಯಮಿತವಾಗಿ ತಿಂಗಳಿಗೊಮ್ಮೆ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಬಹುದು. ನೀವು ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಲು ನಿರ್ಧಾರ ಮಾಡಿ, ಬ್ಯಾಂಕ್ ಖಾತೆಯಿಂದ ನಿರ್ದಿಷ್ಟ ಮೊತ್ತವನ್ನು ಮ್ಯೂಚುವಲ್ ಫಂಡ್‌ಗೆ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ (ECS) ಮೂಲಕ ನಿಗದಿಪಡಿಸಿದಲ್ಲಿ ಮಾಸಿಕವಾಗಿ ಹಣವನ್ನು ಹೂಡಲೇಬೇಕು. ನಿಗದಿತ ಮೊತ್ತ ನಿರ್ದಿಷ್ಟ ದಿನ ಬ್ಯಾಂಕ್ ಖಾತೆಯಲ್ಲಿ ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಒಂದೊಮ್ಮೆ ಮ್ಯೂಚುವಲ್ ಫಂಡ್ ಖರೀದಿ ನಿಲ್ಲಿಸಬೇಕು ಎಂದರೆ ಬ್ಯಾಂಕ್‌ಗೆ ಮೊದಲೇ ಮಾಹಿತಿ ನೀಡಬೇಕು. ಇಷ್ಟೇ ಅಲ್ಲ, ನಿಮಗೆ ಅಗತ್ಯವೆನಿಸಿದಾಗ ಕೆಲ ಕಾಲ ಮ್ಯೂಚುವಲ್ ಫಂಡ್ ಎಸ್‌ಐಪಿ ಖರೀದಿಸುವುದನ್ನು ನಿಲ್ಲಿಸಲು ಮತ್ತು ಕೆಲವೊಮ್ಮೆ ಹೆಚ್ಚು ಹಣ ಹೂಡಿಕೆ ಮಾಡಲು ಅವಕಾಶವಿದೆ.

ದೀರ್ಘಾವಧಿ ಹೂಡಿಕೆ: ಉದಾಹರಣೆ 1 : ನೀವು ಪ್ರತಿ ತಿಂಗಳೂ 20 ವರ್ಷಗಳ ಕಾಲ ₹ 500 ಹೂಡಿಕೆ ಮಾಡುತ್ತಾ ಸಾಗಿದರೆ ವಾರ್ಷಿಕ ಶೇ 12 ರಷ್ಟು ಬಡ್ಡಿ ಸಿಕ್ಕರೂ ನಿಮ್ಮ ಬಳಿ ₹ 4.94 ಲಕ್ಷ ಇರುತ್ತದೆ.

ಉದಾಹರಣೆ 2 : ನಿಮ್ಮ 5 ವರ್ಷದ ಮಗುವಿನ ಹೆಸರಿನಲ್ಲಿ ಪ್ರತಿ ತಿಂಗಳೂ 5 ಸಾವಿರ ಉಳಿಸುತ್ತಾ ಬಂದು ಶೇ 15 ರಷ್ಟು ಲಾಭ ಸಿಕ್ಕರೆ 18 ವರ್ಷ ತುಂಬುವಷ್ಟರಲ್ಲಿ ನಿಮ್ಮ ಕೈಯಲ್ಲಿ ₹ 22.3 ಲಕ್ಷ ಇರುತ್ತದೆ.

ಅನುಕೂಲತೆಗಳು– ನಗದೀಕರಣ ಸುಲಭ: ಯಾವಾಗ ಬೇಕಾದರೂ ನಿಮ್ಮ ಹೂಡಿಕೆಯನ್ನು ನಗದೀಕರಣ ಮಾಡುವ ಅವಕಾಶವನ್ನು ಮ್ಯೂಚುವಲ್ ಫಂಡ್ ನೀಡುತ್ತದೆ. ನಿವ್ವಳ ಸಂಪತ್ತು ಮೌಲ್ಯ (ಎನ್‌ಎವಿ) ಆಧರಿಸಿ ಕೆಲವೇ ನಿಮಿಷಗಳಲ್ಲಿ ಹಣವನ್ನು ಪಡೆಯುವ ಅವಕಾಶ ಹೆಚ್ಚಿನ ಮ್ಯೂಚುವಲ್ ಫಂಡ್‌ಗಳಲ್ಲಿದೆ.

ಸುರಕ್ಷಿತ: ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಮ್ಯೂಚುವಲ್ ಫಂಡ್‌ಗಳ ಮೇಲೆ ನಿಗಾ ಇಟ್ಟಿರುತ್ತದೆ. ಹೀಗಾಗಿ ಇದು ಹೆಚ್ಚು ಸುರಕ್ಷಿತ ಹೂಡಿಕೆ.

ತೆರಿಗೆ ಉಳಿತಾಯ: ಮ್ಯೂಚುವಲ್ ಫಂಡ್ ಇಎಲ್ಎಸ್‌ಎಸ್ ಸ್ಕೀಂಗಳಲ್ಲಿ 3 ವರ್ಷದ ಅವಧಿಗೆ ಹೂಡಿದರೆ ಆದಾಯ ತೆರಿಗೆ ವಿನಾಯ್ತಿ ಸಿಗಲಿದೆ.

ಹಣದುಬ್ಬರಕ್ಕೆ ಸಡ್ಡು: ಹಣದುಬ್ಬರಕ್ಕೆ ಸಡ್ಡು ಹೊಡೆದು ಶೇ 11 ರಿಂದ ಶೇ 15 ರಷ್ಟು ಆದಾಯ ತಂದುಕೊಡುವ ಶಕ್ತಿ ಮ್ಯೂಚುವಲ್ ಫಂಡ್‌ಗಳಿಗಿದೆ.

ಷೇರುಪೇಟೆ ತಲೆನೋವಿಲ್ಲ: ಹೂಡಿಕೆದಾರರು ಕಂಪನಿಗಳ ಸ್ಥಿತಿಗತಿಗಳನ್ನು ಪ್ರತಿದಿನ ಪರಿಶೀಲಿಸಬೇಕಾದ ಅಗತ್ಯ ಇರುವುದಿಲ್ಲ.

ಸಗಟು ದರ ಸೂಚ್ಯಂಕದತ್ತ ಪೇಟೆ ನೋಟ

ಚೇತರಿಕೆ ಕಾಣದ ಜಾಗತಿಕ ಮಾರುಕಟ್ಟೆ, ಸದ್ಯದಲ್ಲೇ ಪ್ರಕಟವಾಗಲಿರುವ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮತ್ತು ಸಗಟು ದರ ಸೂಚ್ಯಂಕ (ಡಬ್ಲ್ಯುಪಿಎ), ವಿವಿಧ ರಾಜ್ಯಗಳಲ್ಲಿನ ಚುನಾವಣೆ, 2019-20 ರಲ್ಲಿ ದೇಶದ ಅಭಿವೃದ್ಧಿ ದರ ಶೇ 7.3 ರಷ್ಟಿರಲಿದೆ ಎಂದು ರೇಟಿಂಗ್ ಏಜೆನ್ಸಿ ‘ಮೂಡಿಸ್‌’ ಹೇಳಿರುವುದು, ಅಮೆರಿಕ ಸೆಂಟ್ರಲ್ ಬ್ಯಾಂಕ್ ನಿಂದ ಬಡ್ಡಿ ದರ ಹೆಚ್ಚಳದ ಮುನ್ಸೂಚನೆ ಸೇರಿ ಹಲವು ಕಾರಣಗಳಿಂದ ವಾರಾಂತ್ಯದಲ್ಲಿ ದೇಶೀಯ ಮಾರುಕಟ್ಟೆ ಕುಸಿತ ಕಂಡಿದೆ.

‘ಸಿಪಿಐ’ ಮತ್ತು ‘ಡಬ್ಲ್ಯುಪಿಎ’ ಆಧರಿಸಿ ಹಣದುಬ್ಬರ ಲೆಕ್ಕಹಾಕಲಾಗುತ್ತದೆ. ಸೋಮವಾರ ಈ ದತ್ತಾಂಶ ಹೊರಬೀಳುವ ನಿರೀಕ್ಷೆಯಿದೆ. ‘ಸಿಪಿಐ’ ನೇರವಾಗಿ ಗ್ರಾಹಕನ ಮೇಲೆ ಪರಿಣಾಮ ಬೀರಿದರೆ, ‘ಡಬ್ಲ್ಯುಪಿಎ’ ಒಟ್ಟಾರೆ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ. ರೂಪಾಯಿ ಮೌಲ್ಯ ಚೇತರಿಕೆ ಮತ್ತು ಕಚ್ಚಾ ತೈಲ ಬೆಲೆ ಇಳಿಕೆ ಕೂಡ ದತ್ತಾಂಶದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ಸಂಭವ ಇರುವುದರಿಂದ ಹೂಡಿಕೆದಾರರು ಕಾತುರರಾಗಿದ್ದಾರೆ.

(ಲೇಖಕ: ಇಂಡಿಯನ್‌ ಮನಿ ಡಾಟ್‌ಕಾಂನ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.