
ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಆದರೆ ಅದಕ್ಕೆ ಹಣ ಹೊಂದಿಸುವುದು ಸುಲಭದ ಮಾತಲ್ಲ. ರಿಯಲ್ ಎಸ್ಟೇಟ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಈ ಹೊತ್ತಿನಲ್ಲಿ ಸ್ವಂತ ಸೂರು ಹೊಂದಬೇಕಾದರೆ ದೊಡ್ಡ ಮೊತ್ತ ಅಗತ್ಯ. ಮನೆಯ ಕನಸನ್ನು ಬೇಗ ಸಾಕಾರಗೊಳಿಸಿಕೊಳ್ಳಲು ಅನೇಕರು ಗೃಹಸಾಲದ ಮೊರೆ ಹೋಗುತ್ತಾರೆ. ಬೆಲೆ ಏರಿಕೆಯ ಈ ಕಾಲದಲ್ಲಿ ಸಾಲ ತೆಗೆದುಕೊಂಡು ಗೃಹ ಪ್ರವೇಶ ಮಾಡುವ ನಿರ್ಧಾರಕ್ಕೆ ಬಂದರೆ ಆರ್ಥಿಕ ಒತ್ತಡ ನಿಭಾಯಿಸುವ ಜೊತೆಗೆ ಅನೇಕ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕಾಗುತ್ತದೆ. ಮನೆ ಕೊಳ್ಳಲು ಸಾಲದ ಇಎಂಐ ಭಾರವನ್ನು ಹೆಗಲಿಗೇರಿಸಿಕೊಳ್ಳುವ ಪದ್ಧತಿ ಜನರಲ್ಲಿ ಹಲವು ದಶಕಗಳಿಂದ ರೂಢಿಯಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಲದ ಭಾರ ಹೊರುವ ಬದಲು ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆಯ ಮೂಲಕ ಸ್ವಂತ ಸೂರು ಕೊಳ್ಳಲು ತಯಾರಿ ನಡೆಸಬಹುದೇ ಎಂಬ ಚಿಂತನೆ ಶುರುವಾಗಿದೆ. ಹಾಗಾದರೆ ಸಾಲ ಮಾಡಿ ಮನೆ ಖರೀದಿಸುವುದು ಒಳ್ಳೆಯದೋ ಅಥವಾ ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆ ಮಾದರಿಯಲ್ಲಿ ಹೊಸ ಮನೆಯ ಆಸೆ ಈಡೇರಿಸಿಕೊಳ್ಳುವುದೋ ಎಂಬುದನ್ನು ತಿಳಿಯುವ ಪ್ರಯತ್ನ ಮಾಡೋಣ.
ಸಾಲದಿಂದ ಮನೆ ಖರೀದಿಸಿದರೆ: ಉದಾಹರಣೆಗೆ ₹50 ಲಕ್ಷದ ಗೃಹಸಾಲವನ್ನು ಶೇ 7.9ರ ಬಡ್ಡಿ ದರದಲ್ಲಿ 20 ವರ್ಷಕ್ಕೆ ಪಡೆಯುತ್ತೀರಿ ಎಂದು ಭಾವಿಸಿ. ಇದಕ್ಕೆ ಪ್ರತಿ ತಿಂಗಳು ₹41,511 ಇಎಂಐ ಪಾವತಿಸಬೇಕಾಗುತ್ತದೆ. ಈ ಅವಧಿಯಲ್ಲಿ ₹50 ಲಕ್ಷ ಅಸಲಿನ ಮೊತ್ತದ ಜೊತೆಗೆ ₹49.62 ಲಕ್ಷ ಬಡ್ಡಿ ಪಾವತಿಸಬೇಕಾಗುತ್ತದೆ. ಅಲ್ಲಿಗೆ ಅಸಲು ಮತ್ತು ಬಡ್ಡಿ ಸೇರಿ ಸುಮಾರು ₹99.62 ಲಕ್ಷ ಕಟ್ಟಬೇಕಾಗುತ್ತದೆ. ಸಾಲ ಮಾಡಿ ಮನೆ ಖರೀದಿಸಿದಾಗ ಬಾಡಿಗೆ ಮನೆಗೆ ಕಟ್ಟುವ ಬಾಡಿಗೆಯ ಬಾಬ್ತು ತಕ್ಷಣದಿಂದಲೇ ಉಳಿಯುತ್ತದೆ. ಮನೆಯ ಮಾಲೀಕರಾಗುವ ಜೊತೆಗೆ ತೆರಿಗೆ ವಿನಾಯಿತಿಯ ಅನುಕೂಲಗಳು ನಿಮಗೆ ಸಿಗುತ್ತವೆ. ಆದರೆ ಹೀಗೆ ಸಾಲ ಮಾಡಿ ಮನೆ ಖರೀದಿಸಿದಾಗ ಹಲವು ವರ್ಷ ಸಾಲದ ಇಎಂಐ ಪಾವತಿಸಬೇಕು, ಜೊತೆಗೆ ಪಡೆದ ಅಸಲಿನಷ್ಟೇ ಮೊತ್ತದ ಬಡ್ಡಿಯನ್ನು ಸಾಲಕ್ಕೆ ಕಟ್ಟಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ದೀರ್ಘಾವಧಿಯ ಉಳಿತಾಯ ಮತ್ತು ಹೂಡಿಕೆ ಗುರಿಗಳಿಗೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ.
ಹೂಡಿಕೆ ಮೊತ್ತದಲ್ಲಿ ಮನೆ ಖರೀದಿಸಿದರೆ?: ₹50 ಲಕ್ಷ ಸಾಲವನ್ನು ಶೇ 7.9ರ ಬಡ್ಡಿ ದರದಲ್ಲಿ 20 ವರ್ಷಕ್ಕೆ ಪಡೆದಾಗ ಮಾಸಿಕ ₹41,511 ಇಎಂಐ ಬರುತ್ತದೆ. ನೀವು ಸಾಲ ತೆಗೆದುಕೊಳ್ಳುವುದಿಲ್ಲ. ಆದರೆ ಆ ಸಾಲದ ಮೊತ್ತಕ್ಕೆ ಬರುವ ಮಾಸಿಕ ಇಎಂಐ ಪಾಲನ್ನು ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ 20 ವರ್ಷ ಹೂಡಿಕೆ ಮಾಡುತ್ತಾ ಸಾಗುತ್ತೀರಿ ಎಂದುಕೊಳ್ಳಿ. ಹೀಗೆ ಮಾಡಿದಾಗ 20 ವರ್ಷಗಳಲ್ಲಿ ಒಟ್ಟು ₹99.60 ಲಕ್ಷ ಹೂಡಿಕೆಯಾಗಿರುತ್ತದೆ. ಶೇ 12ರ ಗಳಿಕೆ ಅಂದಾಜಿನಲ್ಲಿ ₹2.82 ಕೋಟಿ ಗಳಿಕೆ ಸಿಗುತ್ತದೆ. ಅಂದರೆ, ಹೂಡಿಕೆ ಮೊತ್ತ ಮತ್ತು ಗಳಿಕೆ ಸೇರಿ ಒಟ್ಟು ₹3.81 ಕೋಟಿ ಲಭಿಸುತ್ತದೆ. ಇಎಂಐಗೆ ಹೋಗುವ ಮೊತ್ತವನ್ನು ಮ್ಯೂಚುವಲ್ ಫಂಡ್ ಎಸ್ಐಪಿಗಳಲ್ಲಿ ಹೂಡಿಕೆ ಮಾಡಿದರೆ ನಾಲ್ಕೈದು ಪಟ್ಟು ಹೆಚ್ಚು ಹಣ ಗಳಿಸಲು ಸಾಧ್ಯ. ಮನೆ ಖರೀದಿಗೆ 20 ವರ್ಷ ಕಾಯುತ್ತ ಕುಳಿತುಕೊಳ್ಳಲು ಸಾಧ್ಯವೇ ಎಂದು ನೀವು ಪ್ರಶ್ನಿಸಬಹುದು. ನಿಮ್ಮ ಪ್ರಶ್ನೆ ಸರಿ ಇದೆ. ₹41,500 ಎಸ್ಐಪಿ ಮಾಡಿದಾಗ ₹50 ಲಕ್ಷ ಹೊಂದಿಸಲು 20 ವರ್ಷವರೆಗೆ ಕಾಯಬೇಕಿಲ್ಲ. ಪ್ರತಿ ತಿಂಗಳು ₹41,500 ಹೂಡಿಕೆ ಮಾಡುತ್ತಾ ಸಾಗಿ ಶೇ 12ರಷ್ಟು ಗಳಿಕೆ ಸಿಕ್ಕರೆ ಮೊದಲ ಏಳು ವರ್ಷಗಳಲ್ಲೇ ನಿಮಗೆ ₹53.45 ಲಕ್ಷ (₹18.59 ಲಕ್ಷ ಗಳಿಕೆ ಸೇರಿ) ಲಭಿಸುತ್ತದೆ. ಆಗ ಮನೆ ಖರೀದಿಸುವ ಬಗ್ಗೆ ಆಲೋಚನೆ ಮಾಡಬಹುದು.
ಇವು ಗಮನದಲ್ಲಿರಲಿ: ಮ್ಯೂಚುವಲ್ ಫಂಡ್ ಮಾರ್ಗದಲ್ಲಿ ಹೂಡಿಕೆ ಮಾಡಿ ಹಣ ಹೊಂದಿಸಿಕೊಂಡು ಮನೆ ಖರೀದಿಸುವ ಮಾದರಿಯಲ್ಲಿ ಕೊರತೆಗಳೇ ಇಲ್ಲ ಎಂದಲ್ಲ. ಇಲ್ಲೂ ಕೆಲ ಮಿತಿಗಳಿವೆ. 2025ರಲ್ಲಿ ₹50 ಲಕ್ಷ ಕೊಟ್ಟು ಖರೀದಿಸುವ ಮನೆಯ ಬೆಲೆ ಇನ್ನು 20 ವರ್ಷದ ಬಳಿಕ ಮತ್ತಷ್ಟು ಏರಿಕೆ ಕಂಡಿರುತ್ತದೆ ಎನ್ನುವುದು ಗಮನದಲ್ಲಿರಲಿ.
ಉದಾಹರಣೆಗೆ ಬೆಂಗಳೂರಿನ ಹೊರ ವಲಯದಲ್ಲಿ ಏಳೆಂಟು ವರ್ಷದ ಹಿಂದೆ ₹50 ಲಕ್ಷಕ್ಕೆ ಸಿಗುತ್ತಿದ್ದ ‘2 ಬಿಎಚ್‌ಕೆ’ ಅಪಾರ್ಟ್‌ಮೆಂಟ್‌ಗಳ ಬೆಲೆ ಈಗ ಸುಮಾರು ₹80 ಲಕ್ಷದಿಂದ ₹85 ಲಕ್ಷದ ಆಸುಪಾಸಿಗೆ ಬಂದಿದೆ. ಮನೆ ಖರೀದಿಗಾಗಿ ಹಣ ಹೊಂದಿಸಲು ಮ್ಯೂಚುವಲ್ ಫಂಡ್ ಹೂಡಿಕೆ ಮಾಡುತ್ತಿದ್ದಾಗ ಅದು ಹೇಗೆ ವೃದ್ಧಿಸುವುದೋ ಅದೇ ಮಾದರಿಯಲ್ಲಿ ರಿಯಲ್ ಎಸ್ಟೇಟ್ ಬೆಲೆಯೂ ಹೆಚ್ಚುತ್ತಿರುತ್ತದೆ ಎನ್ನುವುದನ್ನು ಪರಿಗಣಿಸಬೇಕಾಗುತ್ತದೆ. ಇನ್ನು ಈಕ್ವಿಟಿ ಮ್ಯೂಚುವಲ್ ಫಂಡ್ ಹೂಡಿಕೆಗಳು ಷೇರು ಮಾರುಕಟ್ಟೆ ಏರಿಳಿತಕ್ಕೆ ಒಳಪಟ್ಟಿರುವುದರಿಂದ ಗಳಿಕೆಯ ಖಾತರಿ ಇರುವುದಿಲ್ಲ. ಇಂತಿಷ್ಟೇ ಲಾಭ ಗಳಿಸಬಹುದು ಎಂದು ಖಂಡಿತವಾಗಿ ಹೇಳಲು ಸಾಧ್ಯವಿಲ್ಲ.
ನೆನಪಿಡಿ: ಮನೆ ಖರೀದಿಗೆ ಸಾಲ ಮಾಡಬೇಕೋ ಇಲ್ಲ ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆ ಮಾದರಿ ಅನುಸರಿಸಬೇಕೋ ಎನ್ನುವುದಕ್ಕೆ ‘ಇದೇ ಸರಿ’ ಎನ್ನುವ ಸ್ಪಷ್ಟ ಉತ್ತರವಿಲ್ಲ. ಮೇಲಿನ ವಿಶ್ಲೇಷಣೆ ಇರುವುದು ಎರಡೂ ಮಾದರಿಗಳಲ್ಲಿ ಏನು ಅನುಕೂಲ ಮತ್ತು ಏನು ಅನನುಕೂಲ ಇದೆ ಎನ್ನುವುದನ್ನು ತಿಳಿಸಲಷ್ಟೇ. ಯಾವ ದಾರಿಯಲ್ಲಿ ಸ್ವಂತ ಮನೆ ಹೊಂದಬೇಕು ಎನ್ನುವುದು ವ್ಯಕ್ತಿಯ ಆರ್ಥಿಕ ಸ್ಥಿತಿ ಮತ್ತು ಆದ್ಯತೆಗಳನ್ನು ಅವಲಂಬಿಸಿರುತ್ತದೆ. ಯಾವುದೇ ತೀರ್ಮಾನ ಮಾಡುವ ಮುನ್ನ ಸೆಬಿ ನೋಂದಾಯಿತ ಹಣಕಾಸು ತಜ್ಞರ ಸಲಹೆ ಪಡೆಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.