ಹೂಡಿಕೆ
(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)
ರಮೇಶ್ ಕೆಲ ವರ್ಷಗಳ ಹಿಂದೆ ಹೂಡಿಕೆ ಮಾಡಲು ಆರಂಭಿಸಿದರು. ಪರಿಚಯದವರೊಬ್ಬರು ಹೇಳಿದ್ದಕ್ಕೆ ಅವರು ಮೊದಲು ಯೂಲಿಪ್ (ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್) ಪಾಲಿಸಿಯೊಂದರಲ್ಲಿ ಹಣ ತೊಡಗಿಸಿದರು. ನಂತರ ಬ್ಯಾಂಕ್ ಸಿಬ್ಬಂದಿಯೊಬ್ಬರ ಸಲಹೆ ಪಡೆದು ಎಂಡೋಮೆಂಟ್ ಪಾಲಿಸಿ ಮತ್ತು ಎಫ್.ಡಿ.ಯಲ್ಲಿ ಹೂಡಿಕೆ ಮಾಡಿದರು. ಸ್ನೇಹಿತರೊಬ್ಬರು ಡಿಜಿಟಲ್ ಗೋಲ್ಡ್ ಬಗ್ಗೆ ತಿಳಿಸಿದರು ಎಂದು ಅದರಲ್ಲೂ ಹಣ ಹಾಕಿದರು. ಆಕರ್ಷಕ ಜಾಹಿರಾತು ನೋಡಿದ ಬಳಿಕ ಕ್ರಿಪ್ಟೊ ಕರೆನ್ಸಿಯಲ್ಲೂ ಹಣ ಹಾಕುವುದಕ್ಕೆ ರಮೇಶ್ ಹಿಂಜರಿಯಲಿಲ್ಲ.
ಯಾವುದೋ ಇನ್‌ಸ್ಟಾಗ್ರಾಂ ಸಲಹೆ ನೋಡಿ ಈಕ್ಟಿಟಿ ಮ್ಯೂಚುವಲ್ ಫಂಡ್‌ಗೂ ಒಂದಷ್ಟು ದುಡ್ಡನ್ನು ಅವರು ತೊಡಗಿಸಿದರು. ಅವೆಲ್ಲವನ್ನೂ ಮಾಡಿದ ಒಂದಷ್ಟು ವರ್ಷಗಳು ಕಳೆದಿವೆ. ಕೆಲವು ಹೂಡಿಕೆಗಳು ಅಲ್ಪ ಗಳಿಕೆ ತಂದುಕೊಟ್ಟಿವೆ, ಕೆಲವು ಯಾವುದೇ ಗಳಿಕೆ ಕಾಣದೆ ಅಲ್ಲೇ ಇವೆ. ಕೆಲವು ಹೂಡಿಕೆಗಳನ್ನು ಯಾವ ಉದ್ದೇಶಕ್ಕೆ ಮಾಡಲಾಗಿದೆ ಎಂಬುದೇ ರಮೇಶ್‌ಗೆ ಗೊತ್ತಿಲ್ಲ. ಇದು ರಮೇಶ್ ಒಬ್ಬರ ಕಥೆ ಅಲ್ಲ. ಹೂಡಿಕೆ ಮಾಡುವಾಗ ಹಲವರು ಲೆಕ್ಕಾಚಾರವಿಲ್ಲದೆ ಹೂಡಿಕೆಗೆ ಮುಂದಾಗುತ್ತಾರೆ. ಆ ಹೂಡಿಕೆ ಸರಿಯಿಲ್ಲ ಎಂದು ತಿಳಿಯುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ.
ಮಾರುಕಟ್ಟೆಯಲ್ಲಿ ಸಾವಿರಾರು ಹೂಡಿಕೆ ಉತ್ಪನ್ನಗಳಿರುವಾಗ ಸರಿಯಾದ ಹೂಡಿಕೆ ಆಯ್ಕೆ ದೊಡ್ಡ ಸವಾಲು. ಯಾವುದೇ ಹೂಡಿಕೆ ಮಾಡುವ ಮುನ್ನ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ಹೂಡಿಕೆ ಆಯ್ಕೆ ಮಾಡುವಾಗ ಅದು ಹೇಗೆ ಹಣ ಗಳಿಸುತ್ತದೆ, ದುಡ್ಡನ್ನು ಯಾವುದರ ಮೇಲೆ ತೊಡಗಿಸುತ್ತದೆ ಎನ್ನುವುದನ್ನು ಮೊದಲು ಖಾತರಿಪಡಿಸಿಕೊಳ್ಳಿ. ಬಹುಪಾಲು ಹೂಡಿಕೆಗಳು ಷೇರು ಮಾರುಕಟ್ಟೆ, ಡೆಟ್ ಹೂಡಿಕೆ (ಎಫ್.ಡಿ, ಬಾಂಡ್ ಇತ್ಯಾದಿ) ಚಿನ್ನ, ರಿಯಲ್ ಎಸ್ಟೇಟ್‌ನಂತಹ ಉತ್ಪನ್ನಗಳ ಮೇಲೆ ಹಣ ತೊಡಗಿಸುತ್ತವೆ. ಷೇರು ಮಾರುಕಟ್ಟೆಗಳಲ್ಲಿ ಅಲ್ಪಾವಧಿಗೆ ಹೂಡಿಕೆ ಮಾಡಿದಾಗ ರಿಸ್ಕ್ ಇರುತ್ತದೆ. ಆದರೆ ದೀರ್ಘಾವಧಿಗೆ ಹೂಡಿಕೆ ಮಾಡಿದಾಗ ಗಳಿಕೆಯ ಸಾಧ್ಯತೆ ಹೆಚ್ಚಿರುತ್ತದೆ. ಡೆಟ್ ಹೂಡಿಕೆಗಳಲ್ಲಿ ಹೂಡಿಕೆ ರಿಸ್ಕ್ ಹೆಚ್ಚಿರುವುದಿಲ್ಲ, ಆದರೆ ಗಳಿಕೆ ಕಡಿಮೆ ಇರುತ್ತದೆ. ಯಾವ ಹೂಡಿಕೆ ಹೇಗೆ ದುಡ್ಡು ಗಳಿಸುತ್ತದೆ ಎನ್ನುವುದನ್ನು ತಿಳಿದಾಗ ಅತಿಯಾದ ಲಾಭದ ಆಸೆಗೆ ಸಿಲುಕುವ ಪ್ರಮೇಯ ಎದುರಾಗದು. ಯಾರಾದರೂ ನಿಮಗೆ ಅತಿಯಾದ ಲಾಭದ ಆಸೆ ತೋರಿಸಿದರೆ ಅದನ್ನು ನಂಬಬೇಡಿ. ಆ ಹೂಡಿಕೆ ಯಾವುದು, ಅದರಲ್ಲಿ ಹಣ ಹೇಗೆ ಬೆಳೆಯುತ್ತದೆ, ನಿಮ್ಮ ದುಡ್ಡನ್ನು ಎಲ್ಲಿ ತೊಡಗಿಸಲಾಗುತ್ತದೆ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಿ. ಇದರಿಂದ ಮೋಸ ಹೋಗುವುದು ತಪ್ಪುತ್ತದೆ.
ದುಡ್ಡು ಬೇಕಾದಾಗ ಪಡೆಯುವುದು ಸುಲಭವೇ?:
ಯಾವುದೇ ಹೂಡಿಕೆ ಮಾಡುವ ಮುನ್ನ ನಗದೀಕರಣದ ಸಾಧ್ಯತೆ ಎಷ್ಟಿದೆ ಎನ್ನುವುದನ್ನು ನೋಡಿಕೊಳ್ಳಬೇಕು. ನಗದೀಕರಣ ಅಂದರೆ ಬೇಕಾದಾಗ ಹೂಡಿಕೆ ಮೊತ್ತವನ್ನು ಸುಲಭವಾಗಿ ಹಿಂಪಡೆಯಬಹುದೇ ಎಂಬ ಅಂಶ. ಮ್ಯೂಚುವಲ್ ಫಂಡ್, ಷೇರು, ಇಟಿಎಫ್ ಖರೀದಿ ಮತ್ತು ಮಾರಾಟ ಸುಲಭ. ಆದರೆ ಪಿಪಿಎಫ್, ಎನ್‌ಪಿಎಸ್, ಎನ್‌ಎಸ್‌ಸಿ, ಕಿಸಾನ್ ವಿಕಾಸ್ ಪತ್ರದಂತಹ (ಕೆವಿಪಿ) ಹೂಡಿಕೆಗಳಲ್ಲಿ ನಗದೀಕರಣ ಸುಲಭವಲ್ಲ. ಈ ಹೂಡಿಕೆಗಳಲ್ಲಿ ನಿರ್ದಿಷ್ಟ ವರ್ಷಗಳವರೆಗೆ ಹಣ ಹಿಂಪಡೆಯಲು ನಿರ್ಬಂಧ ಇರುತ್ತದೆ. ರಿಯಲ್ ಎಸ್ಟೇಟ್ ಆಸ್ತಿಯನ್ನು ತಕ್ಷಣಕ್ಕೆ ಮಾರಾಟ ಮಾಡಿ ನಗದೀಕರಣ ಮಾಡಲು ಸಾಧ್ಯವಿಲ್ಲ. ರಿಯಲ್ ಎಸ್ಟೇಟ್ ಆಸ್ತಿ ಮಾರಾಟಕ್ಕೆ ಕೆಲ ತಿಂಗಳಿಂದ ವರ್ಷಗಳೇ ಬೇಕಾಗಬಹುದು. ಹೂಡಿಕೆಯಲ್ಲಿ ಲಾಕ್–ಇನ್ ಅವಧಿ ಇರುವುದು ಕೆಟ್ಟದ್ದಲ್ಲ. ಆದರೆ ಅಲ್ಪಾವಧಿಯಲ್ಲಿ ಬೇಕಿರುವ ಮೊತ್ತವನ್ನು ಇಂತಹ ಹೂಡಿಕೆಗಳಲ್ಲಿ ತೊಡಗಿಸಬಾರದು.
ರಿಸ್ಕ್ ಎಷ್ಟು?:
‘ನೀವೇನು ಮಾಡುತ್ತಿದ್ದೀರಿ ಎಂಬುದು ಗೊತ್ತಿಲ್ಲದಿದ್ದರೆ ಅಲ್ಲಿ ರಿಸ್ಕ್ ಇರುತ್ತದೆ’ ಎಂದು ಹೂಡಿಕೆ ತಜ್ಞ ವಾರನ್ ಬಫೆಟ್ ಹೇಳುತ್ತಾರೆ. ಯಾವುದೇ ಹೂಡಿಕೆಗೆ ಮುನ್ನ ಅದು ಹೇಗೆ ಹಣ ಗಳಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಜೊತೆಗೆ ಅದರಲ್ಲಿರುವ ರಿಸ್ಕ್ ಅನ್ನು ನೀವು ನಿಭಾಯಿಸಲು ಸಾಧ್ಯವೇ ಎಂದು ನಿಮಗೆ ನೀವೇ ಕೇಳಿಕೊಳ್ಳಿ. ರಿಸ್ಕ್ ಅಂದರೆ ಬಂಡವಾಳದ ಮೊತ್ತವನ್ನು ಕಳೆದುಕೊಳ್ಳುವ ಸಾಧ್ಯತೆ ಎಷ್ಟಿದೆ ಎಂದು ಅಂದಾಜು ಮಾಡುವುದು. ಷೇರು ಮಾರುಕಟ್ಟೆಯಲ್ಲಿ ಏರಿಳಿತದ ರಿಸ್ಕ್ ಇರುತ್ತದೆ. ಇಲ್ಲಿ ಅಲ್ಪಾವಧಿಯಲ್ಲಿ ಬಂಡವಾಳ ನಷ್ಟದ ಸಾಧ್ಯತೆ ಇಲ್ಲದಿಲ್ಲ. ನಿಶ್ಚಿತ ಠೇವಣಿ, ಅಂಚೆ ಕಚೇರಿಯ ವಿವಿಧ ಹೂಡಿಕೆಗಳು, ಸರ್ಕಾರಿ ಬಾಂಡ್‌ಗಳು, ಲಿಕ್ಟಿಡ್ ಮ್ಯೂಚುವಲ್ ಫಂಡ್‌ಗಳಂತಹ ಡೆಟ್ ಹೂಡಿಕೆಗಳಲ್ಲಿ ರಿಸ್ಕ್ ಕಡಿಮೆ. ಆದರೆ ಇಲ್ಲಿ ಹಣದುಬ್ಬರ ಮೀರಿ ಉತ್ತಮ ಗಳಿಕೆ ಕಾಣಲು ಸಾಧ್ಯವಿಲ್ಲ. ಯಾವ ಹೂಡಿಕೆ ಉತ್ಪನ್ನವು ಕಾನೂನಿನ ನಿಯಂತ್ರಣಕ್ಕೆ ಒಳಪಟ್ಟಿಲ್ಲವೋ ಅಂಥವುಗಳಲ್ಲಿ ನಷ್ಟದ ಸಾಧ್ಯತೆ ಹೆಚ್ಚು, ಅವುಗಳಿಂದ ದೂರವಿರಿ.
ಎಷ್ಟು ಗಳಿಸಬಹುದು?:
ಹೂಡಿಕೆ ಮಾಡುವಾಗ ಅದರಲ್ಲಿನ ಗಳಿಕೆಯ ಅಂದಾಜು ಮಾಡುವುದು ಮುಖ್ಯ. ಆದರೆ ಯಾವುದೇ ಹೂಡಿಕೆಯಲ್ಲಿ ಗಳಿಕೆ ಎಷ್ಟು ಎಂದು ಕೇಳುವ ಮೊದಲು ಆ ಹೂಡಿಕೆ ಷೇರು ಮಾರುಕಟ್ಟೆ ಆಧಾರಿತವೋ ಅಥವಾ ಹೂಡಿಕೆ ಮೇಲೆ ನಿಖರವಾದ ಗಳಿಕೆ ತಂದುಕೊಡುವಂಥದ್ದೋ ಎನ್ನುವುದನ್ನು ಅಂದಾಜು ಮಾಡಿಕೊಳ್ಳಬೇಕಾಗುತ್ತದೆ. ಹೂಡಿಕೆಯ ಹಂತದಲ್ಲಿ ತೆರಿಗೆ ಅನ್ವಯಿಸುವುದೋ, ನಗದೀಕರಣದ ವೇಳೆ ತೆರಿಗೆ ಕಟ್ಟಬೇಕಾಗಿ ಬರುತ್ತದೋ ಎಂಬ ಸ್ಪಷ್ಟತೆ ಬೇಕಾಗುತ್ತದೆ. ಕೆಲ ಹೂಡಿಕೆಗಳಲ್ಲಿ ಗೋಪ್ಯ ಶುಲ್ಕಗಳಿರುತ್ತವೆ, ಮಾರಾಟ ಪ್ರತಿನಿಧಿಗಳು ಹೂಡಿಕೆ ವೇಳೆ ಅವುಗಳ ಬಗ್ಗೆ ಪ್ರಸ್ತಾಪ ಮಾಡುವುದೇ ಇಲ್ಲ.
ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವ ಮ್ಯೂಚುವಲ್ ಫಂಡ್ ಹೂಡಿಕೆಗಳು ವಾರ್ಷಿಕ ಸರಾಸರಿ ಶೇ 12ರಷ್ಚು ಗಳಿಕೆ ಕೊಟ್ಟಿವೆ ಎಂದು ದತ್ತಾಂಶ ಹೇಳುತ್ತದೆ. ಆದರೂ ಮಾರುಕಟ್ಟೆ ಆಧಾರಿತ ಈಕ್ಟಿಟಿ ಹೂಡಿಕೆಗಳಲ್ಲಿ ಇಂತಿಷ್ಟು ಬಂದೇ ಬರುತ್ತದೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ರಿಸ್ಕ್ ಬೇಡ ಎನ್ನುವ ಕಾರಣಕ್ಕೆ ಹಲವರು ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ನಿಶ್ಚಿತ ಠೇವಣಿಗಳ ಹೂಡಿಕೆಗಳ ಮೇಲಿನ ಗಳಿಕೆಗೆ ನಿಮ್ಮ ತೆರಿಗೆ ಸ್ಲ್ಯಾಬ್‌ಗೆ ತಕ್ಕಂತೆ ತೆರಿಗೆ ಕಟ್ಟಬೇಕಾಗುತ್ತದೆ. ಉದಾಹರಣೆಗೆ ನೀವು 30 ಪರ್ಸೆಂಟ್ ತೆರಿಗೆ ಸ್ಲ್ಯಾಬ್‌ನಲ್ಲಿದ್ದು ನಿಶ್ಚಿತ ಠೇವಣಿ ಬಡ್ಡಿ ದರ ಶೇ 7ರಷ್ಟಿದ್ದರೆ ತೆರಿಗೆಯ ನಂತರ ನಿಮಗೆ ಸಿಗುವ ಗಳಿಕೆ ಶೇ 4.9ರಷ್ಟು ಮಾತ್ರ. ಇನ್ನು ಯೂಲಿಪ್ ಪಾಲಿಸಿಗಳಲ್ಲಿ ಹೂಡಿಕೆ ಮಾಡಿದಾಗ ಆರಂಭಿಕ ಕೆಲ ವರ್ಷಗಳ ಕಂತು ಗೋಪ್ಯ ಶುಲ್ಕಗಳಿಗೇ ಹೋಗುತ್ತದೆ. ಆದ್ದರಿಂದ ಹೂಡಿಕೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ವಾಸ್ತವಿಕ ಲಾಭ ಗಳಿಕೆಯ ಅಂದಾಜು ಮಾಡುವುದು ಬಹಳ ಮುಖ್ಯ.
ಗುರಿಗಳಿಗೆ ತಕ್ಕಂತೆ ಇದೆಯೇ?:
25 ವರ್ಷ ವಯಸ್ಸಿನ ವ್ಯಕ್ತಿ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಹಣ ಗಳಿಸಲು 5 ವರ್ಷದ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಿದರೆ ಹಣ ಸುರಕ್ಷಿತವಾಗಿರುತ್ತದೆ. ಆದರೆ ಆ ಮೊತ್ತ ಹಣದುಬ್ಬರ ಪ್ರಮಾಣ ಮೀರಿ ಲಾಭ ತಂದುಕೊಡುವುದಿಲ್ಲ. ಹಾಗೆಯೇ 60 ವರ್ಷದ ವ್ಯಕ್ತಿ ಹೆಚ್ಚು ಲಾಭ ಗಳಿಸುವ ಉದ್ದೇಶದೊಂದಿಗೆ ನಿವೃತ್ತಿಯ ಹಣವನ್ನು (ರಿಟೈರ್‌ಮೆಂಟ್ ಫಂಡ್) ಷೇರು ಮಾರುಕಟ್ಟೆಯಲ್ಲಿ ಅಥವಾ ಕ್ರಿಪ್ಟೊ ಕರೆನ್ಸಿ ಮೇಲೆ ಹೂಡಿಕೆ ಮಾಡಿ ಪ್ರತಿ ತಿಂಗಳು ನಿಶ್ಚಿತ ಆದಾಯ ನಿರೀಕ್ಷಿಸುವುದು ಸರಿಯಾದ ಆಲೋಚನೆ ಅಲ್ಲ. ಯಾವುದೇ ಹೂಡಿಕೆಯನ್ನು ಪರಿಗಣಿಸುವಾಗ ಅದು ನಿಮ್ಮ ಗುರಿಗಳಿಗೆ ಪೂರಕವಾಗಿದೆಯೇ, ಅದರಲ್ಲಿರುವ ರಿಸ್ಕ್ ತೆಗೆದುಕೊಳ್ಳಲು ನೀವು ಸಿದ್ಧವಿರುವಿರೇ ಎನ್ನುವ ಪ್ರಶ್ನೆಗಳನ್ನು ಕೇಳಿಕೊಂಡು ಮುಂದುವರಿಯಬೇಕು.
(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.