ADVERTISEMENT

ಬಂಡವಾಳ ಮಾರುಕಟ್ಟೆ | ಯಾರಿಗಿದೆ ಸಾಲ ಮರು ಹೊಂದಾಣಿಕೆ ಅವಕಾಶ?

ಅವಿನಾಶ್ ಕೆ.ಟಿ
Published 9 ಆಗಸ್ಟ್ 2020, 19:30 IST
Last Updated 9 ಆಗಸ್ಟ್ 2020, 19:30 IST
ನಗದು (ಸಾಂದರ್ಭಿಕ ಚಿತ್ರ)
ನಗದು (ಸಾಂದರ್ಭಿಕ ಚಿತ್ರ)   
""

ಸಾಲದ ಕಂತು ಮುಂದೂಡಿಕೆ (ಲೋನ್ ಮೊರಟೋರಿಯಂ) ಅವಕಾಶ ಆಗಸ್ಟ್‌ಗೆ ಕೊನೆಗೊಳ್ಳುತ್ತದೆ. ಒಂದಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ, ಮತ್ತೊಂದಷ್ಟು ಜನ ನಂಬಿಕೊಂಡಿದ್ದ ಬಿಸಿನೆಸ್ ನೆಲಕಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ತಿಂಗಳಿನಿಂದ ಸಾಲದ ಕಂತು ಕಟ್ಟುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಿಹಿ ಸುದ್ದಿ ನೀಡಿದೆ. ಹೌದು, 2020ರ ಮಾರ್ಚ್ 31ರವರೆಗೆ ಯಾರು ಸಾಲದ ಕಂತುಗಳನ್ನು (ಇಎಂಐ) ಬಾಕಿ ಉಳಿಸಿಕೊಂಡಿಲ್ಲವೋ ಅವರಿಗೆ ಒಂದು ಬಾರಿ ಸಾಲ ಮರು ಹೊಂದಾಣಿಕೆ (Loan Restructuring) ಮಾಡಿಕೊಳ್ಳುವ ಅವಕಾಶ ನೀಡಿದೆ. ಇದಲ್ಲದೆ, ಚಿನ್ನಾಭರಣಗಳ ಒಟ್ಟು ಮೌಲ್ಯದ ಮೇಲೆ ಈ ಮೊದಲು ನೀಡಲಾಗುತ್ತಿದ್ದ ಶೇಕಡ 75ರಷ್ಟು ಪ್ರಮಾಣದ ಸಾಲವನ್ನು ಶೇಕಡ 90ರಷ್ಟಕ್ಕೆ ಹೆಚ್ಚಳ ಮಾಡಲು ಸೂಚಿಸಿದೆ. ಇದು ನಗದು ಕೊರತೆ ಎದುರಿಸುತ್ತಿರುವ ಕುಟುಂಬಗಳ ಪಾಲಿಗೆ ಸಮಾಧಾನದ ಸುದ್ದಿಯಾಗಿದೆ.

ಸಾಲ ಮರು ಹೊಂದಾಣಿಕೆಯಿಂದ ನಿಮಗೇನು ಅನುಕೂಲ?
2020ರ ಮಾರ್ಚ್ 1ರವರೆಗೆ ಯಾರು ಸಾಲದ ಮಾಸಿಕ ಕಂತುಗಳನ್ನು (ಇಎಂಐ) ಸರಿಯಾಗಿ ಪಾವತಿಸಿರುತ್ತಾರೋ ಅವರಿಗೆ ಆರ್‌ಬಿಐ ಒಂದು ಬಾರಿ ಸಾಲ ಮರು ಹೊಂದಾಣಿಕೆಗೆ (Loan Restructuring) ಅವಕಾಶ ನೀಡಿದೆ. ಸಾಲ ಪಡೆಯುವಾಗ ಕೆಲವು ನೀತಿ ನಿಬಂಧನೆಗಳನ್ನು ವಿಧಿಸಲಾಗಿರುತ್ತದೆ. ಸಾಲಗಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದಾಗ, ಸಾಲ ಮರುಪಾವತಿ ಕಷ್ಟವಾಗುತ್ತದೆ. ಸಾಲ ಮರುಪಾವತಿ ಆಗದೆ ಇದ್ದರೆ ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಹೆಚ್ಚಳವಾಗುತ್ತದೆ. ಇದನ್ನು ತಪ್ಪಿಸಲು ಸಾಲ ಮರು ಹೊಂದಾಣಿಕೆಗೆ ಅವಕಾಶ ನೀಡಲಾಗುತ್ತದೆ. ಮರು ಹೊಂದಾಣಿಕೆ ವೇಳೆ ಸಾಲದ ಕಂತುಗಳ ಮರುಪಾವತಿ ಅವಧಿಯನ್ನು ಮುಂದೂಡಬಹುದು. ಸಾಲದ ಕಂತು ಪಾವತಿ ಅವಧಿಯನ್ನು ಸುಮಾರು ಎರಡು ವರ್ಷಗಳವರೆಗೆ ವಿಸ್ತರಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ, ಬ್ಯಾಂಕ್ ಸಮ್ಮತಿಸಿದರೆ, ಸಾಲದ ಬಡ್ಡಿ ದರವೂ ಇಳಿಕೆಯಾಗಬಹುದು. ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ಕ್ರೆಡಿಟ್ ಕಾರ್ಡ್ ಸಾಲ, ಎಲೆಕ್ಟ್ರಾನಿಕ್ ಉಪಕರಣ ಖರೀದಿ ಸಾಲ, ಮನೆ ನವೀಕರಣ ಸಾಲ ಹೀಗೆ ಬಹುತೇಕ ಎಲ್ಲ ರೀತಿಯ ಸಾಲಗಳಿಗೆ ಮರು ಹೊಂದಾಣಿಕೆಯ ಅವಕಾಶವಿದೆ.

ಮರು ಹೊಂದಾಣಿಗೆ ಬಗ್ಗೆ ಸಾಲ ನೀಡಿರುವ ಬ್ಯಾಂಕ್ ಮತ್ತು ಸಾಲ ಪಡೆದಿರುವ ಗ್ರಾಹಕ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. 2020ರ ಡಿಸೆಂಬರ್ 31ರ ಒಳಗಾಗಿ ಮರು ಒಪ್ಪಂದ ಮಾಡಿಕೊಳ್ಳಬೇಕಿದೆ. ಕೆಲವು ದಿನಗಳಲ್ಲಿ ಬ್ಯಾಂಕ್‌ಗಳು ಮರು ಒಪ್ಪಂದಕ್ಕೆ ಸಂಬಂಧಿಸಿದಂತೆ ತಮ್ಮ ನಿಯಮಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಜನಸಾಮಾನ್ಯರಿಗೆ ಮರು ಹೊಂದಾಣಿಕೆ ನಿಯಮದಿಂದ ಸಾಕಷ್ಟು ಅನುಕೂಲ ಆಗಲಿದೆ.

ADVERTISEMENT

ಚಿನ್ನಾಭರಣಗಳ ಮೇಲೆ ಶೇಕಡ 90ರಷ್ಟು ಸಾಲ!
ನೀವು ಈ ಮೊದಲು ₹ 10 ಸಾವಿರ ಮೌಲ್ಯದ ಚಿನ್ನವನ್ನು ಅಡಮಾನ ಇಟ್ಟರೆ ₹ 7,500 ಸಾಲವಾಗಿ ಸಿಗುತ್ತಿತ್ತು. ಅಂದರೆ, ಚಿನ್ನದ ಒಟ್ಟು ಮೌಲ್ಯದ ಶೇಕಡ 75ರಷ್ಟನ್ನು ಸಾಲವಾಗಿ ನೀಡಲಾಗುತ್ತಿತ್ತು. ಈಗ ಚಿನ್ನದ ಮೌಲ್ಯದ ಮೇಲೆ ಶೇಕಡ 90ರಷ್ಟು ಸಾಲ ನೀಡುವಂತೆ ಆರ್‌ಬಿಐ ಸೂಚಿಸಿದೆ. ಮಾರ್ಚ್ 2021ರವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ಚಿನ್ನದ ಬೆಲೆ ಕೆಲವು ತಿಂಗಳ ಅವಧಿಯಲ್ಲಿ ಶೇಕಡ 30ಕ್ಕಿಂತ ಹೆಚ್ಚಳವಾಗಿರುವಾಗ, ತಾತ್ಕಾಲಿಕ ನಗದು ಕೊರತೆ ಎದುರಿಸುತ್ತಿರುವವರಿಗೆ ಚಿನ್ನದ ಮೇಲಿನ ಸಾಲದ ಮಿತಿ ಹೆಚ್ಚಳ ಮಾಡಿರುವುದು ಅನುಕೂಲ ಮಾಡಿಕೊಡಲಿದೆ. ಚಿನ್ನಾಭರಣಗಳ ಬೆಲೆ ಏರಿಳಿತ ಕಾಣುತ್ತಿರುವುದರಿಂದ ತೀರಾ ಅಗತ್ಯವಿದ್ದರೆ ಮಾತ್ರ ಚಿನ್ನದ ಮೇಲೆ ಸಾಲ ಪಡೆಯುವುದು ಸೂಕ್ತ.

ಅನಿಶ್ಚಿತತೆಯ ನಡುವೆ ಸೂಚ್ಯಂಕಗಳ ಜಿಗಿತ
ಆಗಸ್ಟ್ 7ಕ್ಕೆ ಕೊನೆಯಾದ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಪುಟಿದೆದ್ದಿವೆ. ಮಾರುಕಟ್ಟೆಯಲ್ಲಿರುವ ಅನಿಶ್ಚಿತತೆಯ ನಡುವೆಯೂ ಸೆನ್ಸೆಕ್ಸ್ ಮತ್ತು ನಿಫ್ಟಿ ಸಕಾರಾತ್ಮಕವಾಗಿ ಕಂಡುಬಂದಿವೆ. ಆರ್‌ಬಿಐ ಘೋಷಿಸಿದ ಸಾಲ ಮರು ಹೊಂದಾಣಿಕೆ ಯೋಜನೆ, ವಿವಿಧ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು, ಕೋವಿಡ್–19 ಪ್ರಕರಣಗಳಲ್ಲಿ ಹೆಚ್ಚಳ, ಜುಲೈನ ವಾಹನ ಮಾರಾಟ ಅಂಕಿ-ಅಂಶದಲ್ಲಿ ಚೇತರಿಕೆ ಸೇರಿ ಜಾಗತಿಕ ಮಟ್ಟದಲ್ಲಿ ಆಗಿರುವ ಬೆಳವಣಿಗೆಗಳಿಗೆ ಷೇರುಪೇಟೆ ಮಿಶ್ರ ಪ್ರತಿಕ್ರಿಯೆ ನೀಡಿದೆ.

38,040 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 1.15ರಷ್ಟು ಜಿಗಿದಿದೆ. 11,214 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇಕಡ 1.26ರಷ್ಟು ಏರಿಕೆ ಕಂಡಿದೆ. ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕವು ಶೇಕಡ 4.1ರಷ್ಟು ಹೆಚ್ಚಳವಾಗಿದೆ. ಇನ್ನು, ವಲಯವಾರು ನೋಡಿದಾಗ ನಿಫ್ಟಿ ಲೋಹ ಶೇಕಡ 7.6ರಷ್ಟು, ವಾಹನ ಉತ್ಪಾದನೆ ಶೇಕಡ 3.7ರಷ್ಟು ಮತ್ತು ನಿಫ್ಟಿ ಫಾರ್ಮಾ ಶೇಕಡ 1.7ರಷ್ಟು ಜಿಗಿತ ಕಂಡಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 9,496.80 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 2,133.84 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಗಳಿಕೆ- ಇಳಿಕೆ: ನಿಫ್ಟಿಯಲ್ಲಿ ಟಾಟಾ ಮೋಟರ್ಸ್ ಶೇಕಡ 14ರಷ್ಟು, ಜೆಎಸ್‌ಡಬ್ಲ್ಯೂ ಸ್ಟೀಲ್ ಶೇಕಡ 9ರಷ್ಟು, ಹಿಂಡಾಲ್ಕೋ ಶೇಕಡ 9ರಷ್ಟು ಮತ್ತು ಜೀ ಎಂಟರ್‌ಟೇನ್ಮೆಂಟ್ ಶೇಕಡ 8ರಷ್ಟು ಏರಿಕೆ ಕಂಡಿವೆ. ಎಚ್‌ಡಿಎಫ್‌ಸಿ ಲೈಫ್ ಶೇಕಡ 3ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇಕಡ 3ರಷ್ಟು, ಟೆಕ್ ಮಹೀಂದ್ರ ಶೇಕಡ 3ರಷ್ಟು, ಅಲ್ಟ್ರಾಟೆಕ್ ಸಿಮೆಂಟ್ ಶೇ 3ರಷ್ಟು ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಶೇಕಡ 2.7ರಷ್ಟು ಕುಸಿದಿವೆ.

ಬ್ರಾಡರ್ ಮಾರ್ಕೆಟ್ ಸೂಚ್ಯಂಕಗಳಲ್ಲಿ ಟಾಟಾ ಕನ್ಸ್ಯೂಮರ್ ಶೇಕಡ 21ರಷ್ಟು, ಯೆಸ್ ಬ್ಯಾಂಕ್ ಶೇಕಡ 18ರಷ್ಟು, ಗ್ರಾನುಯೆಲ್ಸ್ ಶೇಕಡ 16ರಷ್ಟು, ಅಪೋಲೊ ಟಯರ್ಸ್ ಶೇ. 13.5ರಷ್ಟು, ಆರ್‌ಬಿಎಲ್ ಬ್ಯಾಂಕ್ ಶೇ. 12.5ರಷ್ಟು ಮತ್ತು ಎಸ್‌ಎಐಎಲ್ ಶೇ. 11ರಷ್ಟು ಏರಿಕೆಯಾಗಿವೆ. ಲುಪಿನ್ ಶೇ. 5ರಷ್ಟು, ಪೇಜ್ ಇಂಡಸ್ಟ್ರೀಸ್ ಶೇಕಡ 4ರಷ್ಟು, ಇಂಡಿಗೋ ಶೇಕಡ 4ರಷ್ಟು ಮತ್ತು ಬಯೋಕಾನ್ ಶೇಕಡ 2.4ರಷ್ಟು ಕುಸಿದಿವೆ.

ಮುನ್ನೋಟ: ಕಳೆದ ವಾರ ಮಾರಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿ ಕಂಡುಬಂತು. ವಿವಿಧ ವಲಯಗಳಲ್ಲಾಗುವ ಬೆಳವಣಿಗೆಗಳಿಂದ ತ್ವರಿತ ಮತ್ತು ಹರಿತ ಏರಿಳಿತಗಳು ಸಾಮಾನ್ಯವಾಗಿದ್ದವು. ಈ ವಾರವೂ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಕಾದು ನೋಡುವ ತಂತ್ರ ಮುಂದುವರಿಸಲಿದ್ದಾರೆ. ಬ್ಯಾಂಕಿಂಗ್ ವಲಯದ ಸಣ್ಣ ಮತ್ತು ದೊಡ್ಡ ಸಂಸ್ಥೆಗಳು ಬಂಡವಾಳ ಸಂಗ್ರಹಕ್ಕೆ ಮುಂದಾಗಿರುವುದು ಸಹ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ. ಆಗಸ್ಟ್ 10ರಂದು ವೊಡಾಫೋನ್ ಐಡಿಯಾ ಎಜಿಆರ್ ಬಾಕಿ ಪಾವತಿಗೆ ಸಂಬಂಧಿಸಿದ ಪ್ರಕರಣ ವಿಚಾರಣೆಗೆ ಬರಲಿದೆ. ಇನ್ನು, ಅಮೆರಿಕದಲ್ಲಿ ಉದ್ಯೋಗಾವಕಾಶಗಳ ಕುರಿತ ದತ್ತಾಂಶ ಸಹ ಬಿಡುಗಡೆಯಾಗಲಿದೆ. ಈ ವಾರ ಬ್ಯಾಂಕ್ ಆಫ್ ಬರೋಡಾ, ಈಕ್ವಿಟಾಸ್, ಫೋರ್ಸ್ ಮೋಟರ್ಸ್, ಕೆಐಒಸಿಎಲ್, ಪವರ್ ಗ್ರಿಡ್, ಟೈಟಾನ್, ಉಜ್ಜೀವನ್, ಬಾಷ್ ಲಿ., ಅಶೋಕ್ ಲೇಲೆಂಡ್, ಗ್ರಾಫೈಟ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ.

ಅವಿನಾಶ್ ಕೆ.ಟಿ.,ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹೆ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.