ADVERTISEMENT

ಬಂಡವಾಳ ಮಾರುಕಟ್ಟೆ: ನಿವೃತ್ತಿ ಜೀವನಕ್ಕೆ ಯಾವುದು ಉತ್ತಮ?

ನಿವೃತ್ತಿ ಜೀವನಕ್ಕೆ ಇಪಿಎಫ್ ಹೂಡಿಕೆಯೋ ಇಲ್ಲ ಎನ್ ಪಿಎಸ್ ಆಯ್ಕೆಯೋ?

ಕಾವ್ಯ ಡಿ.
Published 22 ಸೆಪ್ಟೆಂಬರ್ 2025, 0:30 IST
Last Updated 22 ಸೆಪ್ಟೆಂಬರ್ 2025, 0:30 IST
<div class="paragraphs"><p>ಹೂಡಿಕೆ</p></div>

ಹೂಡಿಕೆ

   

(ಐಸ್ಟೋಕ್ ಚಿತ್ರ)

ನಿವೃತ್ತಿ ನಂತರದ ಜೀವನಕ್ಕಾಗಿ ಯೋಜನೆ ರೂಪಿಸುವುದು ಹಣಕಾಸಿಗೆ ಸಂಬಂಧಿಸಿದ ತೀರ್ಮಾನಗಳಲ್ಲಿ ಪ್ರಮುಖವಾದದ್ದು. ನೆಮ್ಮದಿಯ ಇಳಿಗಾಲಕ್ಕಾಗಿ ಹೂಡಿಕೆ ಮಾಡಲು ಹತ್ತಾರು ಆಯ್ಕೆಗಳಿದ್ದರೂ ನೌಕರರ ಭವಿಷ್ಯ ನಿಧಿ (ಇಪಿಎಫ್) ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಅತ್ಯಂತ ಜನಪ್ರಿಯ ಆಯ್ಕೆಗಳಾಗಿವೆ. ಆದರೆ ಇಪಿಎಫ್ ಮತ್ತು ಎನ್‌ಪಿಎಸ್ ಪೈಕಿ ಯಾವ ಹೂಡಿಕೆಯು ದೀರ್ಘಾವಧಿಯಲ್ಲಿ ಹೆಚ್ಚು ಸ್ಥಿರತೆಯ ಜೊತೆಗೆ ಲಾಭ ತಂದು ಕೊಡುತ್ತದೆ? ಯಾವುದರಲ್ಲಿ ತಾತ್ಕಾಲಿಕ ಏರಿಳಿತವಿದ್ದರೂ ಗಳಿಕೆಯ ಸಾಧ್ಯತೆ ಹೆಚ್ಚಿದೆ? ಇಪಿಎಫ್ ಮತ್ತು ಎನ್‌ಪಿಎಸ್ ನಡುವೆ ನಿವೃತ್ತಿ ಜೀವನಕ್ಕೆ ಸರಿಹೊಂದುವ ಹೂಡಿಕೆ ಆಯ್ಕೆ ಯಾವುದು?

ADVERTISEMENT

ಇಪಿಎಫ್–ಎನ್‌ಪಿಎಸ್ ನಡುವಿನ ವ್ಯತ್ಯಾಸ: 

ಇಪಿಎಫ್ ಅಂದರೆ ಏನು?:

ಇದು ಭಾರತದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗಾಗಿ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ನಿವೃತ್ತಿ ಉಳಿತಾಯ ಯೋಜನೆ. ಉದ್ಯೋಗಿ ಮತ್ತು ಉದ್ಯೋಗದಾತರಿಬ್ಬರೂ ಇದಕ್ಕೆ ಪ್ರತಿ ತಿಂಗಳು ನಿಗದಿತ ಪ್ರಮಾಣದಲ್ಲಿ ಕೊಡುಗೆ ನೀಡುತ್ತಾರೆ. ಉದ್ಯೋಗಿಗಳು ನಿವೃತ್ತಿಯಾದಾಗ ಈ ನಿಧಿಯ ಮೂಲಕ ದೊಡ್ಡ ಮೊತ್ತವನ್ನು ಪಡೆದು ಆರ್ಥಿಕ ಭದ್ರತೆ ಪಡೆಯುತ್ತಾರೆ. ಇಪಿಎಫ್‌ನ ಬಡ್ಡಿ ದರವನ್ನು ಪ್ರತಿ ವರ್ಷ ಕೇಂದ್ರ ಅನುಮೋದಿಸುತ್ತದೆ. ಇಪಿಎಫ್‌ನ ಬಡ್ಡಿ ಶೇ 8ರಿಂದ ಶೇ 8.5ರ ಆಸುಪಾಸಿನಲ್ಲಿರುತ್ತದೆ. ಈ ಯೋಜನೆಯು ಉದ್ಯೋಗಿಗಳಿಗಾಗಿ ಉಳಿತಾಯ, ಪಿಂಚಣಿ ಹಾಗೂ ವಿಮೆ ಸೌಲಭ್ಯ ಒದಗಿಸುತ್ತದೆ.

ಎನ್‌ಪಿಎಸ್ ಅಂದರೆ ಏನು?:

ಇದು 2004ರಲ್ಲಿ ಪ್ರಾರಂಭವಾದ ಕೇಂದ್ರ ಸರ್ಕಾರದ ದೀರ್ಘಾವಧಿ ನಿವೃತ್ತಿ ಉಳಿತಾಯ ಯೋಜನೆ. ಈ ಯೋಜನೆಯು ವ್ಯಕ್ತಿಗಳಿಗೆ ನಿವೃತ್ತಿ ನಂತರದ ಆರ್ಥಿಕ ಭದ್ರತೆ ಒದಗಿಸಲು ರೂಪುಗೊಂಡಿದೆ. ಎನ್‌ಪಿಎಸ್‌ನಲ್ಲಿ ಹೂಡಿಕೆದಾರರು ತಮ್ಮ ಹಣವನ್ನು ವಿವಿಧ ಬಡ್ಡಿ ಸ್ತರಗಳಲ್ಲಿ ತೊಡಗಿಸಬಹುದು. ಇವುಗಳಲ್ಲಿ ಈಕ್ವಿಟಿ, ಕಾರ್ಪೊರೇಟ್ ಬಾಂಡ್ ಮತ್ತು ಸರ್ಕಾರಿ ಸಾಲಪತ್ರದಂತಹ ಹೂಡಿಕೆಗಳಿವೆ. ಎನ್‌ಪಿಎಸ್‌ನಲ್ಲಿ ಶೇ 75ರಷ್ಟು ಹೂಡಿಕೆ ಮೊತ್ತವನ್ನು ಷೇರು ಮಾರುಕಟ್ಟೆಗೆ ಮೀಸಲಿಡಲು ಅವಕಾಶವಿದೆ. ಹೂಡಿಕೆಯ ಒಂದಷ್ಟು ಭಾಗ ಷೇರು ಮಾರುಕಟ್ಟೆ ಆಧಾರಿತವಾಗುವ ಕಾರಣ ಎನ್‌ಪಿಎಸ್‌ನಲ್ಲಿ ಒಟ್ಟು ಗಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಹೆಚ್ಚು ರಿಸ್ಕ್ ತೆಗೆದುಕೊಂಡರೆ ಹೆಚ್ಚು ಗಳಿಕೆ ಸಾಧ್ಯ ಎನ್ನುವುದು ಇಲ್ಲಿನ ಲೆಕ್ಕಾಚಾರ.

ಹೂಡಿಕೆ ರಿಸ್ಕ್ ಮತ್ತು ಗಳಿಕೆ:

ಇಪಿಎಫ್‌ನಲ್ಲಿ ಹೂಡಿಕೆ ರಿಸ್ಕ್ ಇಲ್ಲವೇ ಇಲ್ಲ ಎನ್ನಬಹುದು. ಇಪಿಎಫ್‌ನಲ್ಲಿ ಶೇ 8.1ರಿಂದ ಶೇ 8.5ರವರೆಗೆ ಗಳಿಕೆ ನಿರೀಕ್ಷಿಸಬಹುದು. ಎನ್‌ಪಿಎಸ್‌ನಲ್ಲಿ ಹೂಡಿಕೆಯ ಒಂದಷ್ಟು ಭಾಗ ಷೇರು ಮಾರುಕಟ್ಟೆ ಆಧಾರಿತವಾಗಿರುವ ಕಾರಣ ಒಂದಷ್ಟು ಸ್ಕೀಂಗಳ 5 ವರ್ಷಗಳ ಸರಾಸರಿ ನೋಡಿದಾಗ ಶೇ 19.5ರ ವರೆಗೂ ಗಳಿಕೆ ಬಂದಿರುವ ಉದಾಹರಣೆಗಳಿವೆ. ಆದರೆ ಎನ್‌ಪಿಎಸ್ ಗಳಿಕೆ ತಾತ್ಕಾಲಿಕ ಮಾರುಕಟ್ಟೆ ಏರಿಳಿತಗಳಿಗೆ ಒಳಪಟ್ಟಿದೆ ಎನ್ನುವುದನ್ನು ಗಮನಿಸಬೇಕು. ಒಟ್ಟಿನಲ್ಲಿ ಇಪಿಎಫ್‌ನಲ್ಲಿ ರಿಸ್ಕ್ ಕಡಿಮೆ, ಗಳಿಕೆಯ ಸಾಧ್ಯತೆಯೂ ಕಡಿಮೆ. ಆದರೆ ಎನ್‌ಪಿಎಸ್‌ನಲ್ಲಿ ರಿಸ್ಕ್ ಜಾಸ್ತಿ ಮತ್ತು ಗಳಿಕೆಯ ಸಾಧ್ಯತೆ ಹೆಚ್ಚು.

ಇಪಿಎಫ್ ಮತ್ತು ಎನ್‌ಪಿಎಸ್ ಹೂಡಿಕೆ ವಿಂಗಡಣೆ: ಇಪಿಎಫ್‌ನಲ್ಲಿ ಹೂಡಿಕೆ ಮೊತ್ತವು ಉಳಿತಾಯ, ಪಿಂಚಣಿ ಮತ್ತು ಜೀವ ವಿಮೆಯ ನಡುವೆ ವಿಂಗಡಣೆಯಾಗುತ್ತದೆ. ಆದರೆ ಎನ್‌ಪಿಎಸ್‌ನಲ್ಲಿ ಟಿಯರ್–1 ಖಾತೆಯಲ್ಲಿ ಸುರಕ್ಷಿತ ಹೂಡಿಕೆಗಳಿಗೆ ಎಷ್ಟು ಮೊತ್ತ ಹೋಗಬೇಕು, ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಗಳಿಗೆ ಎಷ್ಟು ಮೊತ್ತ ನಿಗದಿಮಾಡಬೇಕು ಎನ್ನುವ ತೀರ್ಮಾನವನ್ನು ನೀವು ತೆಗೆದುಕೊಳ್ಳಲು ಅವಕಾಶವಿರುತ್ತದೆ. ಎನ್‌ಪಿಎಸ್ ಟಿಯರ್–2 ಖಾತೆಯಲ್ಲಿ ಹೂಡಿಕೆ ಮಾಡುವುದು ಕಡ್ಡಾಯವಲ್ಲ.

ಪಿಂಚಣಿ ಅನುಕೂಲ:

ಇಪಿಎಫ್‌ನಲ್ಲಿ ಕನಿಷ್ಠ ₹1 ಸಾವಿರ ಮತ್ತು ಗರಿಷ್ಠ ₹7,500ವರೆಗೆ ಪಿಂಚಣಿ ಸಿಗುತ್ತದೆ. ಇದಕ್ಕೆ ಕನಿಷ್ಠ 10 ವರ್ಷಗಳ ಸೇವಾವಧಿಯಲ್ಲಿ ಇಪಿಎಫ್ ಹೂಡಿಕೆಯಾಗಿರಬೇಕು. ಎನ್‌ಪಿಎಸ್‌ನಲ್ಲಿ ಪಿಂಚಣಿ ಪಡೆಯಲು ಮಿತಿಗಳಿಲ್ಲ. ಆದರೆ ನಿವೃತ್ತಿ ಸಮಯದಲ್ಲಿ, ನಿಮ್ಮ ಮೊತ್ತದ ಶೇ 40ರಷ್ಟನ್ನು ಆ್ಯನ್ಯೂಟಿ ಖರೀದಿಗೆ ಬಳಸಬೇಕಾಗುತ್ತದೆ. ಆ್ಯನ್ಯೂಟಿ ಮೊತ್ತಕ್ಕೆ ಬರುವ ಬಡ್ಡಿಯಿಂದ ನಿಮಗೆ ನಿವೃತ್ತಿ ನಂತರ ನಿಯಮಿತವಾಗಿ ಪಿಂಚಣಿ ಸಿಗುತ್ತದೆ. ನೀವು ಎಷ್ಟು ಹೂಡಿಕೆ ಮಾಡಿದ್ದೀರಿ ಎನ್ನುವುದರ ಆಧಾರದ ಮೇಲೆ ನಿಮ್ಮ ಆ್ಯನ್ಯೂಟಿ ಮೊತ್ತ ಮತ್ತು ಪಿಂಚಣಿ ನಿರ್ಧಾರವಾಗುತ್ತದೆ.

ತೆರಿಗೆ ಅನುಕೂಲ:

ಇಪಿಎಫ್‌ನಲ್ಲಿ ಹೂಡಿಕೆ ಮಾಡಿದಾಗ ಹಳೆಯ ತೆರಿಗೆ ಪದ್ಧತಿ ಅಡಿಯಲ್ಲಿ ಸೆಕ್ಷನ್ 80 ಸಿ ವಿನಾಯಿತಿ ಸಿಗುತ್ತದೆ. ಅಲ್ಲದೆ, ಹೂಡಿಕೆ ಮೇಲೆ ಸಿಗುವ ಬಡ್ಡಿ ಮೊತ್ತಕ್ಕೆ ತೆರಿಗೆ ವಿನಾಯಿತಿ ಕೂಡ ಲಭ್ಯ. ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿದಾಗ ಹಳೆಯ ತೆರಿಗೆ ಪದ್ಧತಿಯಲ್ಲಿ ಸೆಕ್ಷನ್ 80 ಸಿ ವಿನಾಯಿತಿ ಸಿಗುವ ಜೊತೆಗೆ ಹೆಚ್ಚುವರಿಯಾಗಿ ₹50 ಸಾವಿರ ಮೊತ್ತಕ್ಕೆ ಸೆಕ್ಷನ್ 80ಸಿಸಿಡಿ (1 ಬಿ) ಅಡಿಯಲ್ಲಿ ವಿನಾಯಿತಿ ಲಭ್ಯ.

ನಗದೀಕರಣ:

ಇಪಿಎಫ್‌ನಲ್ಲಿ ಅನಾರೋಗ್ಯ, ಮನೆ ನಿರ್ಮಾಣ ಸೇರಿದಂತೆ ನಿರ್ದಿಷ್ಟ ಕಾರಣ ನೀಡಿ ಹೂಡಿಕೆಯ ಭಾಗಶಃ ಹಣ ವಾಪಸ್ ಪಡೆಯಲು ಅವಕಾಶವಿದೆ. ವೃತ್ತಿ ನಂತರ ಅಥವಾ ಉದ್ಯೋಗ ನಷ್ಟದಂತಹ ಸಂದರ್ಭಗಳಲ್ಲಿ ಪೂರ್ತಿ ಹಣ ಹಿಂಪಡೆಯಬಹುದು. ಆದರೆ ಎನ್‌ಪಿಎಸ್‌ನಲ್ಲಿ ನಗದೀಕರಣಕ್ಕೆ ಹಲವು ನಿರ್ಬಂಧಗಳಿವೆ. ಎನ್‌ಪಿಎಸ್ ಮೆಚ್ಯೂರಿಟಿ ವೇಳೆ ಕಡ್ಡಾಯವಾಗಿ ಆ್ಯನ್ಯೂಟಿ ಖರೀದಿಸಬೇಕು. ಭಾಗಶಃ ನಗದೀಕರಣಕ್ಕೂ ಎನ್‌ಪಿಎಸ್‌ನಲ್ಲಿ ಹಲವು ಮಿತಿಗಳನ್ನು ಹೇರಲಾಗಿದೆ. ಎನ್‌ಪಿಎಸ್‌ಗೆ ಹೋಲಿಸಿದರೆ ಇಪಿಎಫ್‌ನಲ್ಲಿ ನಗದೀಕರಣ ಸುಲಭ.

ಯಾರಿಗೆ ಯಾವುದು ಸೂಕ್ತ?

ಹೆಚ್ಚು ರಿಸ್ಕ್ ಬೇಡ ಹೆಚ್ಚು ಲಾಭ ಬರದಿದ್ದರೂ ಪರವಾಗಿಲ್ಲ ಗಳಿಕೆಯಲ್ಲಿ ಸ್ಥಿರತೆ ಇರಬೇಕು ಎನ್ನುವವರಿಗೆ ಇಪಿಎಫ್ ಸೂಕ್ತ. ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧ ಆದರೆ ಹೂಡಿಕೆ ವೈವಿಧ್ಯತೆ ಜೊತೆ ಷೇರು ಮಾರುಕಟ್ಟೆ ಆಧಾರಿತ ಲಾಭ ಬೇಕು ಎನ್ನುವವರಿಗೆ ಎನ್‌ಪಿಎಸ್ ಉತ್ತಮ ಆಯ್ಕೆ. ವಿಶೇಷ ಅಂದರೆ ಹಲವು ಹೂಡಿಕೆದಾರರು ಈ ಎರಡೂ ಹೂಡಿಕೆಗಳನ್ನು ತಮ್ಮ ನಿವೃತ್ತಿ ಜೀವನಕ್ಕಾಗಿ ದೊಡ್ಡ ಮೊತ್ತ ಪೇರಿಸಲು ಬಳಸಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.