
ಬೆಲೆ ಏರಿಕೆಯ ಈ ಕಾಲದಲ್ಲಿ ಕೇವಲ ಹಣ ಉಳಿತಾಯ ಮಾಡಿದರೆ ಸಾಲದು. ಆ ಹಣವು ಹಣದುಬ್ಬರ ಪ್ರಮಾಣಕ್ಕಿಂತ ಹೆಚ್ಚಿನ ವೇಗದಲ್ಲಿ ಬೆಳೆಯಬೇಕು. ಮ್ಯೂಚುವಲ್ ಫಂಡ್ (ಎಂ.ಎಫ್) ಹೂಡಿಕೆದಾರರಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಎಂಬುದು ಈಗಾಗಲೇ ಜನಪ್ರಿಯವಾಗಿದೆ. ಆದರೆ, ಹೂಡಿಕೆ ಗುರಿಯನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ತಲುಪಲು ಮತ್ತು ಬೃಹತ್ ಮೊತ್ತವನ್ನು ಕ್ರೋಢೀಕರಿಸಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗ ಸ್ಟೆಪ್-ಅಪ್ ಎಸ್‌ಐಪಿ.
ಏನಿದು ಸ್ಟೆಪ್-ಅಪ್ ಎಸ್‌ಐಪಿ?: ಸಾಮಾನ್ಯ ಎಸ್‌ಐಪಿಯಲ್ಲಿ ಪ್ರತಿ ತಿಂಗಳು ಒಂದು ನಿಶ್ಚಿತ ಮೊತ್ತವನ್ನು (ಉದಾಹರಣೆಗೆ ₹5 ಸಾವಿರ) ದೀರ್ಘಕಾಲದವರೆಗೆ ಹೂಡಿಕೆ ಮಾಡಲಾಗುತ್ತದೆ. ಆದರೆ ಸ್ಟೆಪ್-ಅಪ್ ಎಸ್‌ಐಪಿಯಲ್ಲಿ, ಹೂಡಿಕೆಯ ಮೊತ್ತವನ್ನು ಪ್ರತಿ ವರ್ಷ ನಿರ್ದಿಷ್ಟ ಪ್ರಮಾಣದಲ್ಲಿ ಅಥವಾ ನಿರ್ದಿಷ್ಟ ಮೊತ್ತದಷ್ಟು ಹೆಚ್ಚಿಸಲಾಗುತ್ತದೆ. ಉದಾಹರಣೆಗೆ, ಈ ವರ್ಷ ಎಸ್‌ಐಪಿ ಮೊತ್ತ ₹5 ಸಾವಿರ ಇದ್ದರೆ, ಮುಂದಿನ ವರ್ಷ ಅದನ್ನು ಶೇ 10ರಷ್ಟು ಹೆಚ್ಚಿಸಿ ₹5,500 ಮಾಡುವುದು. ವಾರ್ಷಿಕ ಸಂಬಳದ ಏರಿಕೆ ಅಥವಾ ಬೋನಸ್‌ಗೆ ಅನುಗುಣವಾಗಿ ಹೂಡಿಕೆಯನ್ನು ಹೆಚ್ಚಿಸುವುದು ಇದರ ಹಿಂದಿನ ಉದ್ದೇಶ.
ಹೂಡಿಕೆಯ ಶೈಲಿಯಲ್ಲಿನ ವ್ಯತ್ಯಾಸ: ಒಂದೇ ಮೊತ್ತದಿಂದ ಹೂಡಿಕೆ ಆರಂಭಿಸಿದರೂ, ಸ್ಟೆಪ್-ಅಪ್ ಹೇಗೆ ಕೋಟಿಗಳ ಲೆಕ್ಕದಲ್ಲಿ ವ್ಯತ್ಯಾಸ ತರುತ್ತದೆ ಎಂಬುದನ್ನು ಇಬ್ಬರು ಸ್ನೇಹಿತರ ಉದಾಹರಣೆಯ ಮೂಲಕ ನೋಡೋಣ.
ವಿಶಾಲ್ (ಸಾಮಾನ್ಯ ಎಸ್‌ಐಪಿ ಹೂಡಿಕೆದಾರ): ವಿಶಾಲ್ ಪ್ರತಿ ತಿಂಗಳು ₹7 ಸಾವಿರ ಮೊತ್ತವನ್ನು ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸಲು ಆರಂಭಿಸುತ್ತಾರೆ. ಅವರು ಮುಂದಿನ 20 ವರ್ಷ ಯಾವುದೇ ಬದಲಾವಣೆ ಮಾಡದೆ ಅದೇ ₹7 ಸಾವಿರ ಮೊತ್ತವನ್ನು ಮುಂದುವರಿಸುತ್ತಾರೆ. ವಾರ್ಷಿಕ ಸರಾಸರಿ ಶೇ 12ರಷ್ಟು ಲಾಭದ ಪ್ರಕಾರ, 20 ವರ್ಷಗಳ ನಂತರ ವಿಶಾಲ್ ಅವರ ಕೈ ಸೇರುವ ಒಟ್ಟು ಮೊತ್ತ ಅಂದಾಜು ₹69.24 ಲಕ್ಷ. ಇದರಲ್ಲಿ ಅವರ ಅಸಲು ಮೊತ್ತ ₹16.80 ಲಕ್ಷ ಮಾತ್ರ.
ವಿಕಾಸ್ (ಸ್ಟೆಪ್-ಅಪ್ ಎಸ್‌ಐಪಿ ಹೂಡಿಕೆದಾರ): ವಿಕಾಸ್ ಕೂಡ ಅದೇ ₹7 ಸಾವಿರ ಮೊತ್ತದಿಂದ ಹೂಡಿಕೆ ಆರಂಭಿಸುತ್ತಾರೆ. ಆದರೆ ಅವರು ಪ್ರತಿ ವರ್ಷ ತಮ್ಮ ಎಸ್‌ಐಪಿ ಮೊತ್ತವನ್ನು ಶೇ 10ರಷ್ಟು ಹೆಚ್ಚಿಸುತ್ತಾ ಹೋಗುತ್ತಾರೆ. ಅಂದರೆ ಎರಡನೇ ವರ್ಷ ₹7,700, ಮೂರನೇ ವರ್ಷ ₹8,470 ಹೀಗೆ ಹೂಡಿಕೆ ಹೆಚ್ಚಾಗುತ್ತಾ ಹೋಗುತ್ತದೆ. 20 ವರ್ಷಗಳ ನಂತರ ವಿಕಾಸ್ ಪಡೆಯುವ ಒಟ್ಟು ಮೊತ್ತ ಬರೋಬ್ಬರಿ ₹1.38 ಕೋಟಿ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ವಿಕಾಸ್ ಕೇವಲ ಶೇ 10ರಷ್ಟು ಮೊತ್ತವನ್ನು ಹೆಚ್ಚಿಸಿದ ಪರಿಣಾಮವಾಗಿ ವಿಶಾಲ್‌ಗಿಂತ ದುಪ್ಪಟ್ಟು ಮೊತ್ತ ಒಗ್ಗೂಡಿಸಿದ್ದಾರೆ. ಇದುವೇ ಸ್ಟೆಪ್ ಅಪ್ ಹೂಡಿಕೆಯ ಪರಿಣಾಮ.
ದೀರ್ಘಾವಧಿಯ ಗುರಿ ತಲುಪಲು ಸ್ಟೆಪ್-ಅಪ್ ಮ್ಯೂಚುವಲ್ ಫಂಡ್ ಹೇಗೆ ಸಹಕಾರಿ?
ಉದ್ದೇಶ;ಆರಂಭಿಕ ಎಸ್‌ಐಪಿ;ವಾರ್ಷಿಕ ಸ್ಟೆಪ್-ಅಪ್;ಅವಧಿ;ಅಂದಾಜು ನಿಧಿ (ಶೇ 12 ಲಾಭ ನಿರೀಕ್ಷೆ)
ಮಕ್ಕಳ ಉನ್ನತ ಶಿಕ್ಷಣ;₹5 ಸಾವಿರ;ಶೇ 10;15 ವರ್ಷ;₹44.50 ಲಕ್ಷ
ನಿವೃತ್ತಿ ಯೋಜನೆ;₹10 ಸಾವಿರ;ಶೇ 10;25 ವರ್ಷ;₹3.10 ಕೋಟಿ
ಸ್ವಂತ ಮನೆ ಕನಸು;₹15 ಸಾವಿರ;ಶೇ 5;10 ವರ್ಷ;₹36.50 ಲಕ್ಷ
ಸೂಚನೆ: ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಏರಿಳಿತಕ್ಕೆ ಒಳಪಟ್ಟಿರುತ್ತವೆ. ಇದು ಹೂಡಿಕೆ ಶಿಫಾರಸು ಅಲ್ಲ.
ಸ್ಟೆಪ್-ಅಪ್ ಎಸ್‌ಐಪಿಯ ಪ್ರಮುಖ ಅನುಕೂಲಗಳು:
* ಹಣದುಬ್ಬರದ ವಿರುದ್ಧ ರಕ್ಷಣೆ: ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುವಂತೆ ನಿಮ್ಮ ಹೂಡಿಕೆಯೂ ಏರುವುದರಿಂದ ಭವಿಷ್ಯದಲ್ಲಿ ಹಣದ ಕೊರತೆಯಾಗುವುದಿಲ್ಲ.
* ಶಿಸ್ತಿನ ಉಳಿತಾಯ: ಸಂಬಳ ಹೆಚ್ಚಾದಾಗ ಅನಗತ್ಯ ಖರ್ಚುಗಳು ಹೆಚ್ಚಾಗುವುದು ಸಹಜ. ಸ್ಟೆಪ್-ಅಪ್ ಮಾಡುವುದರಿಂದ ಆ ಹೆಚ್ಚುವರಿ ಹಣ ನೇರವಾಗಿ ಹೂಡಿಕೆಗೆ ಹೋಗುತ್ತದೆ.
* ಗುರಿ ತಲುಪಲು ವೇಗ: ಸಾಮಾನ್ಯ ಎಸ್‌ಐಪಿ ಮೂಲಕ 20 ವರ್ಷಗಳಲ್ಲಿ ತಲುಪಬಹುದಾದ ಗುರಿಯನ್ನು ಸ್ಟೆಪ್-ಅಪ್ ಮೂಲಕ 15 ವರ್ಷಗಳಲ್ಲೇ ತಲುಪಲು ಸಾಧ್ಯ.
* ಸರಳ ನಿರ್ವಹಣೆ: ಈಗಿನ ಬಹುತೇಕ ಮ್ಯೂಚುವಲ್ ಫಂಡ್ ಆಪ್‌ಗಳಲ್ಲಿ ಸ್ವಯಂಚಾಲಿತ ಸ್ಟೆಪ್–ಅಪ್ ಸೌಲಭ್ಯವಿದ್ದು, ಪ್ರತಿ ವರ್ಷ ಸ್ಟೆಪ್ ಅಪ್ ಎಸ್‌ಐಪಿ ಮಾಡುವ ಗೋಜಿಗೆ ಹೋಗಬೇಕಿಲ್ಲ.
ಹೂಡಿಕೆಗೂ ಮುನ್ನ ಗೊತ್ತಿರಲಿ: ಮ್ಯೂಚುವಲ್ ಫಂಡ್‌ಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಈಕ್ವಿಟಿ ಫಂಡ್‌ಗಳು, ಇವು ಹೂಡಿಕೆದಾರರ ಹಣವನ್ನು ಕಂಪನಿಗಳ ಷೇರುಗಳಲ್ಲಿ ತೊಡಗಿಸುತ್ತವೆ ಮತ್ತು ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ನೀಡುವ ಸಾಮರ್ಥ್ಯ ಹೊಂದಿದ್ದರೂ ಮಾರುಕಟ್ಟೆಯ ರಿಸ್ಕ್ ಹೊಂದಿರುತ್ತವೆ.
ಡೆಟ್ ಫಂಡ್‌ಗಳು, ಇವು ಸರ್ಕಾರಿ ಸಾಲಪತ್ರಗಳು ಮತ್ತು ಡಿಬೆಂಚರ್‌ಗಳಲ್ಲಿ ಹೂಡಿಕೆ ಮಾಡುತ್ತವೆ. ಇಲ್ಲಿ ರಿಸ್ಕ್ ಕಡಿಮೆ ಇರುತ್ತದೆ ಮತ್ತು ಸ್ಥಿರ ಆದಾಯವನ್ನು ನಿರೀಕ್ಷಿಸುವವರಿಗೆ ಇದು ಸೂಕ್ತ. ಇನ್ನು ಹೈಬ್ರಿಡ್ ಫಂಡ್‌ಗಳು, ಷೇರು ಮತ್ತು ಸಾಲಪತ್ರ ಎರಡರಲ್ಲೂ ಹಣವನ್ನು ಹಂಚಿಕೆ ಮಾಡುವುದರಿಂದ ರಿಸ್ಕ್ ಮತ್ತು ಲಾಭದ ನಡುವೆ ಸಮತೋಲನ ಕಾಯ್ದುಕೊಳ್ಳಲು ಸಹಾಯ ಮಾಡುತ್ತವೆ. ಇವುಗಳಲ್ಲದೆ, ಮಾರುಕಟ್ಟೆಯ ಸೂಚ್ಯಂಕವನ್ನು ಅನುಸರಿಸುವ ಇಂಡೆಕ್ಸ್ ಫಂಡ್‌ಗಳು ಕೂಡ ಹೂಡಿಕೆದಾರರಿಗೆ ಲಭ್ಯವಿವೆ.
ಡೈರೆಕ್ಟ್ ಅಥವಾ ರೆಗ್ಯೂಲರ್?: ಮ್ಯೂಚುವಲ್ ಫಂಡ್‌ಗಳಲ್ಲಿ ಡೈರೆಕ್ಟ್ ಮತ್ತು ರೆಗ್ಯುಲರ್ ಎಂಬ ಎರಡು ವಿಧದ ಯೋಜನೆಗಳಿರುತ್ತವೆ. ಡೈರೆಕ್ಟ್ ಯೋಜನೆಯಲ್ಲಿ ಯಾವುದೇ ಮಧ್ಯವರ್ತಿ ಅಥವಾ ಏಜೆಂಟ್ ಸಹಾಯವಿಲ್ಲದೆ ನೇರವಾಗಿ ಮ್ಯೂಚುವಲ್ ಫಂಡ್ ಕಂಪನಿಯಲ್ಲಿ ಹೂಡಿಕೆ ಆಗುತ್ತದೆ. ಇದರಿಂದಾಗಿ ಕಮಿಷನ್ ಉಳಿತಾಯವಾಗಿ ಲಾಭದ ಪ್ರಮಾಣ ತುಸು ಹೆಚ್ಚಿರುತ್ತದೆ. ರೆಗ್ಯುಲರ್ ಯೋಜನೆಯಲ್ಲಿ ಬ್ರೋಕರ್ ಅಥವಾ ವಿತರಕರ ಮೂಲಕ ಹೂಡಿಕೆ ಆಗುತ್ತದೆ. ಇಲ್ಲಿ ಅವರಿಗೆ ಕಮಿಷನ್ ನೀಡಬೇಕಾಗಿರುವುದರಿಂದ ಫಂಡ್ ನಿರ್ವಹಣಾ ವೆಚ್ಚ ಹೆಚ್ಚಿರುತ್ತದೆ. ಆದರೆ, ಇದಕ್ಕೆ ಬದಲಾಗಿ ಅವರು ಹೂಡಿಕೆಯ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಾರೆ. ಸ್ವತಂತ್ರವಾಗಿ ಅಧ್ಯಯನ ಮಾಡಿ ಹೂಡಿಕೆ ಮಾಡಬಲ್ಲವರಿಗೆ ಡೈರೆಕ್ಟ್ ಯೋಜನೆ ಉತ್ತಮ ಆಯ್ಕೆ.
ಕಿವಿಮಾತು: ಹೂಡಿಕೆ ಎನ್ನುವುದು ಕೇವಲ ಹಣ ಉಳಿಸುವುದಲ್ಲ, ಅದನ್ನು ಬುದ್ಧಿವಂತಿಕೆಯಿಂದ ಬೆಳೆಸುವುದು. ಇಂದು ನೀವು ಮಾಡುವ ಸಣ್ಣ ಪ್ರಮಾಣದ ಸ್ಟೆಪ್-ಅಪ್ ನಿಮ್ಮ ನಾಳೆಗಳನ್ನು ಉತ್ತಮಗೊಳ್ಳಿಸಿಕೊಳ್ಳಲು ನೆರವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.