
ವಿಮೆ
ನಮಗೆಲ್ಲ ಒಂದು ಬಲವಾದ ನಂಬಿಕೆ ಇರುತ್ತದೆ. ಎಲ್ಲವೂ ನಮ್ಮ ಹಿಡಿತದಲ್ಲಿದೆ ಅಂದುಕೊಂಡಿರುತ್ತೇವೆ. ಪ್ರತಿ ತಿಂಗಳೂ ಸಂಬಳ ಬರುತ್ತಿದೆ, ಮುಂದಿನ 10 ವರ್ಷಗಳಿಗೆ ಬೇಕಾದ ಹೂಡಿಕೆ ಗುರಿಗಳನ್ನು ಹೊಂದಿದ್ದೇವೆ, ಕುಟುಂಬ ಕೂಡ ನೆಮ್ಮದಿಯಾಗಿದೆ ಅಂತ ಭಾವಿಸಿರುತ್ತೇವೆ. ಆದರೆ, ಜೀವನ ಇದ್ದಕ್ಕಿದ್ದ ಹಾಗೆ ಸಂಕಷ್ಟದ ತಿರುವುಗಳನ್ನು ತಂದಿಟ್ಟಾಗ ಎಲ್ಲವೂ ಅಲ್ಲೋಲ ಕಲ್ಲೋಲ. ಮನೆಯ ಯಜಮಾನ/ಯಜಮಾನಿಯ ಜೀವಕ್ಕೆ ತೊಂದರೆ ಆದರೆ ಆ ಇಡೀ ಕುಟುಂಬದ ಹಣಕಾಸಿನ ಸ್ಥಿತಿ ಹಳಿತಪ್ಪುತ್ತದೆ. ಆಗ ಆತನ/ಆಕೆಯ ಅನುಪಸ್ಥಿತಿಯಲ್ಲಿ ಕುಟುಂಬ ಆರ್ಥಿಕವಾಗಿ ಸುರಕ್ಷಿತವಾಗಿರಬೇಕಾದರೆ ಏನು ಮಾಡಬೇಕು ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಉತ್ತರ ಅವಧಿ ವಿಮೆ (ಟರ್ಮ್ ಇನ್ಶೂರೆನ್ಸ್). ಈ ವಿಮೆ ತೆಗೆದುಕೊಳ್ಳುವಾಗ ಬಹಳಷ್ಟು ಜನ ತಪ್ಪು ಮಾಡುತ್ತಾರೆ. ಹಾಗಾದರೆ ಅವಧಿ ವಿಮೆ ತೆಗೆದುಕೊಳ್ಳುವಾಗ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳೇನು ಎನ್ನುವ ಬಗ್ಗೆ ತಿಳಿಯುವುದು ಅಗತ್ಯ.
ಅವಧಿ ವಿಮೆ ಅಂದರೆ ಏನು?: ಅವಧಿ ವಿಮೆ ಬಹಳ ಸರಳವಾದ ಒಂದು ವಿಮೆ. ವ್ಯಕ್ತಿ ಒಂದು ನಿರ್ದಿಷ್ಟ ಅವಧಿಗೆ (ಅಂದರೆ 30 ಅಥವಾ 40 ವರ್ಷಗಳವರೆಗೆ) ನಿಶ್ಚಿತ ಕಂತು ಪಾವತಿಸುತ್ತಾನೆ. ಈ ಅವಧಿಯಲ್ಲಿ ಆತ ಸಾವನ್ನಪ್ಪಿದರೆ, ಆತನ ಕುಟುಂಬಕ್ಕೆ ಒಟ್ಟಾಗಿ ಒಂದು ದೊಡ್ಡ ಮೊತ್ತದ ಹಣ ಸಿಗುತ್ತದೆ. ಇದು ಈ ವಿಮೆ ನೀಡುವ ರಕ್ಷೆ. ಇದರಲ್ಲಿ ಬೋನಸ್ ಇಲ್ಲ, ಮೆಚ್ಯೂರಿಟಿ ಮೊತ್ತ ಇಲ್ಲ. ಪಾಲಿಸಿ ಅವಧಿ ಮುಗಿದ ಮೇಲೆ ಪಾಲಿಸಿಯ ಕವರೇಜ್ ಮುಕ್ತಾಯವಾಗುತ್ತದೆ. ಅವಧಿ ವಿಮೆ ಇಷ್ಟೊಂದು ಕಡಿಮೆ ಬೆಲೆಯಲ್ಲಿ ಸಿಗಲು ಇದೇ ಕಾರಣ. ಒಂದು ಅರ್ಥದಲ್ಲಿ ಅವಧಿ ವಿಮೆ ಎಂಬುದು ಹಣಕಾಸಿನ ರಕ್ಷಣೆಯನ್ನು ಪಡೆಯುವ ಪ್ರಕ್ರಿಯೆ. ಇಲ್ಲಿ ವ್ಯಕ್ತಿಯು ಕಂತಿನ ಹಣ ಪಾವತಿಸುವುದು ಲಾಭಕ್ಕಾಗಿ ಅಲ್ಲ, ಬದಲಾಗಿ ಮನಸ್ಸಿನ ಶಾಂತಿಗಾಗಿ.
ವಿಮೆ ಕವರೇಜ್ ವ್ಯಾಪ್ತಿ: ಕಾಯಿಲೆಯಿಂದ ಆಗುವ ಸಾವು, ಅಪಘಾತಗಳು ಮತ್ತು ಸ್ವಾಭಾವಿಕ ಸಾವನ್ನು ಹೆಚ್ಚಿನ ಅವಧಿ ವಿಮೆಗಳು ಒಳಗೊಳ್ಳುತ್ತವೆ. ಆದರೆ ಅವಧಿ ವಿಮೆ ಪಡೆದವರು ಕ್ರಿಮಿನಲ್ ಚಟುವಟಿಕೆಗಳಿಂದ ಮೃತರಾದಲ್ಲಿ, ಪಾಲಿಸಿ ಪಡೆದ ಮೊದಲ ಒಂದು ವರ್ಷದೊಳಗೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ, ಮದ್ಯಪಾನ ಅಥವಾ ಡ್ರಗ್ಸ್ ಸೇವನೆಯಿಂದ ಆಗುವ ಸಾವುಗಳಿಗೆ ಕವರೇಜ್ ಸಿಗುವುದಿಲ್ಲ. ಇವು ಯಾವುದೋ ಒಂದು ಕಂಪನಿಯ ನಿಯಮಗಳಲ್ಲ, ಇವು ಇಡೀ ಉದ್ಯಮದ ನಿಯಮಗಳು.
ಯಾರಿಗೆ ಅವಧಿ ವಿಮೆ ಬೇಕು?: ವ್ಯಕ್ತಿಯ ಆದಾಯದ ಮೇಲೆ ಯಾರಾದರೂ ಅವಲಂಬಿತರಾಗಿದ್ದರೆ, ಅವರಿಗೆ ಅವಧಿ ವಿಮೆ ಬೇಕೇಬೇಕು. ಪತಿ ಅಥವಾ ಪತ್ನಿ, ಮಕ್ಕಳು, ವಯಸ್ಸಾದ ಪೋಷಕರು ಆತನ ಆದಾಯದ ಮೇಲೆ ಅವಲಂಬಿತರಾಗಿದ್ದಾರೆ ಅಂದರೆ ಅವಧಿ ವಿಮೆ ಅತಿ ಅಗತ್ಯ. ವ್ಯಕ್ತಿಯ ಅನುಪಸ್ಥಿತಿಯಿಂದ ಕುಟುಂಬಕ್ಕೆ ಹಣಕಾಸಿನ ಶೂನ್ಯತೆ ಅಥವಾ ಸಂಕಷ್ಟ ಸೃಷ್ಟಿಯಾಗುತ್ತದೆ ಎಂದಾದರೆ, ಅವಧಿ ವಿಮೆ ಮಾಡಿಸುವುದು ಆಯ್ಕೆಯಲ್ಲ, ಅದು ಅಗತ್ಯ ಮತ್ತು ಅನಿವಾರ್ಯ.
ಎಷ್ಟು ಕವರೇಜ್ ಅಗತ್ಯ?: ವ್ಯಕ್ತಿಯ ವಾರ್ಷಿಕ ಆದಾಯದ 15ರಿಂದ 20 ಪಟ್ಟು ಮೊತ್ತವನ್ನು ಅವಧಿ ವಿಮೆ ಕವರೇಜ್ ರೂಪದಲ್ಲಿ ಪಡೆದುಕೊಳ್ಳುವುದು ಉತ್ತಮ. ಉದಾಹರಣೆಗೆ ವ್ಯಕ್ತಿಯ ವಯಸ್ಸು 30 ವರ್ಷವಾಗಿದ್ದು ವಾರ್ಷಿಕ ಆದಾಯ ₹10 ಲಕ್ಷ ಎಂದಾದಲ್ಲಿ, ಕನಿಷ್ಠ ₹2 ಕೋಟಿ ಮೊತ್ತದ ಅವಧಿ ವಿಮೆ ಕವರೇಜ್ ಪಡೆಯಬೇಕು.
ಏಕೆ ₹2 ಕೋಟಿ?: ₹2 ಕೋಟಿಯ ಕವರೇಜ್ ಪಡೆದುಕೊಂಡಾಗ ವಾರ್ಷಿಕ ಶೇ 6ರ ಬಡ್ಡಿ ಗಳಿಕೆ ಲೆಕ್ಕಾಚಾರದಲ್ಲಿ ನಿಶ್ಚಿತ ಠೇವಣಿ ಇರಿಸಿದರೂ ವ್ಯಕ್ತಿಯ ಕುಟುಂಬಕ್ಕೆ ವರ್ಷಕ್ಕೆ ₹12 ಲಕ್ಷ ಆದಾಯ ಸಿಗುತ್ತದೆ. ಈ ಆದಾಯದಿಂದ ಮನೆ ಖರ್ಚು, ಶಾಲಾ ಶುಲ್ಕ, ಇಎಂಐ, ಆಸ್ಪತ್ರೆ ವೆಚ್ಚಗಳನ್ನು ನಿಭಾಯಿಸಲು ಆಗುತ್ತದೆ.
₹1 ಕೋಟಿಯ ಕವರೇಜ್ ಪಡೆದರೆ ವಾರ್ಷಿಕ ಶೇ 6ರ ಬಡ್ಡಿ ಗಳಿಕೆ ಲೆಕ್ಕದಲ್ಲಿ ₹6 ಲಕ್ಷ ಮಾತ್ರ ಸಿಗುತ್ತದೆ. ಬೆಲೆ ಏರಿಕೆಯ ಈ ಕಾಲದಲ್ಲಿ ಮಕ್ಕಳ ಉನ್ನತ ಶಿಕ್ಷಣ, ಮನೆ ಖರ್ಚು, ಈಗಾಗಲೇ ಇರುವ ಸಾಲಗಳು ಮತ್ತು ತುರ್ತು ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸಲು ಕಷ್ಟವಾಗುತ್ತದೆ. ಹೆಚ್ಚಿನ ಜನ ದೊಡ್ಡ ತಪ್ಪು ಮಾಡುವುದು ಈ ಹಂತದಲ್ಲಿ. ಅವರು ತಮಗೆ ಬೇಕಾದ ಕವರೇಜ್ ಮೊತ್ತವನ್ನು ಬಹಳ ಕಡಿಮೆ ಅಂದಾಜು ಮಾಡುತ್ತಾರೆ.
ಸರಿಯಾದ ಪಾಲಿಸಿ ಅವಧಿ: ಅವಧಿ ವಿಮೆಯಲ್ಲಿ ಪಾಲಿಸಿಯ ಅವಧಿ ಅಥವಾ ಟೆನ್ಯೂರ್ ಎನ್ನುವುದು ಒಮ್ಮೆ ನಿರ್ಧಾರ ಮಾಡಿದ ನಂತರ ಬದಲಾಯಿಸಲು ಸಾಧ್ಯವಾಗದು. ಹೆಚ್ಚಿನ ಅವಧಿ ವಿಮೆ ಯೋಜನೆಗಳು 10 ವರ್ಷದಿಂದ 40 ವರ್ಷಗಳವರೆಗಿನ ಅವಧಿಯನ್ನು ನೀಡುತ್ತವೆ. ವ್ಯಕ್ತಿಗೆ 60 ವರ್ಷ ಅಥವಾ 70 ವರ್ಷ ವಯಸ್ಸಿನವರೆಗೆ ಕವರೇಜ್ ಇರಲಿ. ಏಕೆಂದರೆ ಆ ವಯಸ್ಸಿಗೆ ಸಾಮಾನ್ಯವಾಗಿ ಮಕ್ಕಳು ಆರ್ಥಿಕವಾಗಿ ಸ್ವತಂತ್ರರಾಗಿರುತ್ತಾರೆ. ದೊಡ್ಡ ಸಾಲಗಳು ತೀರಿರುತ್ತವೆ. ವ್ಯಕ್ತಿಯ ನಿವೃತ್ತಿ ನಿಧಿ ಕೈಗೆ ಬಂದಿರುತ್ತದೆ. ಒಂದು ವೇಳೆ ಆ ವ್ಯಕ್ತಿಗೆ ತಡವಾಗಿ ಮದುವೆಯಾಗಿದ್ದರೆ, ವಿಶೇಷ ಕಾಳಜಿ ಬೇಕಾದ ಅವಲಂಬಿತರಿದ್ದರೆ, ಆದಾಯ ಸ್ಥಿರವಾಗಿಲ್ಲದಿದ್ದರೆ, ಅಂತಹ ಸಂದರ್ಭಗಳಲ್ಲಿ ಪಾಲಿಸಿ ಅವಧಿಯನ್ನು ಕಡಿಮೆ ಅಂದಾಜು ಮಾಡುವ ಬದಲು ಸ್ವಲ್ಪ ಹೆಚ್ಚಿಗೆ ಇಟ್ಟುಕೊಳ್ಳುವುದು ಜಾಣತನ. ಏಕೆಂದರೆ ಒಮ್ಮೆ ಪಾಲಿಸಿ ಅವಧಿ ಮುಗಿದರೆ, ಹೊಸ ಪಾಲಿಸಿ ತೆಗೆದುಕೊಳ್ಳುವುದು ದುಬಾರಿ ಕೆಲಸವಾಗುತ್ತದೆ. ಕೆಲವು ಸಲ ಹೊಸ ಪಾಲಿಸಿ ಸಿಗುವುದು ಅಸಾಧ್ಯವೂ ಆಗಬಹುದು.
1. ಪ್ರಸ್ತಾವನೆ ಮತ್ತು ವಿವರ ಒದಗಿಸುವುದು: ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರ, ಆದಾಯದ ವಿವರ, ಆರೋಗ್ಯ ಸ್ಥಿತಿಗತಿ ಮತ್ತು ಜೀವನಶೈಲಿ ಬಗ್ಗೆ ನಿಖರವಾಗಿ ಮಾಹಿತಿ ಒದಗಿಸುವುದು ಇಲ್ಲಿ ಮುಖ್ಯ. ಅರ್ಜಿಯಲ್ಲಿ ಎಲ್ಲವನ್ನೂ ಪ್ರಾಮಾಣಿಕವಾಗಿ ತಿಳಿಸಿ, ಯಾವುದೇ ವಿಷಯ ಮುಚ್ಚಿಡಬೇಡಿ. ಒಂದೊಮ್ಮೆ ಧೂಮಪಾನ, ಮದ್ಯಪಾನ ಮಾಡುತ್ತಿದ್ದರೆ, ಸಕ್ಕರೆ ಕಾಯಿಲೆ, ಬಿ.ಪಿ ಅಥವಾ ಇನ್ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಅದರ
ಬಗ್ಗೆ ಉಲ್ಲೇಖಿಸಿ. ಮಾಹಿತಿ ಮುಚ್ಚಿಟ್ಟಿರುವುದು ವೈದ್ಯಕೀಯ ಪರೀಕ್ಷೆ ವೇಳೆ ಕಂಡುಬಂದರೆ ವಿಮೆ ಅರ್ಜಿಯೇ ತಿರಸ್ಕಾರಗೊಳ್ಳುವ ಸಾಧ್ಯತೆ ಇರುತ್ತದೆ.
2. ವೈದ್ಯಕೀಯ ಪರೀಕ್ಷೆಗಳು: ವಿಮೆ ಕೊಡುವ ಮುನ್ನ ವಿಮಾ ಕಂಪನಿ ರಕ್ತ ಪರೀಕ್ಷೆ, ಅಗತ್ಯವಿದ್ದರೆ ಇಸಿಜಿ ಮತ್ತು ಒತ್ತಡ ಪರೀಕ್ಷೆ ಮಾಡಿಸುತ್ತದೆ. ಸಾಮಾನ್ಯವಾಗಿ ಈ ಪರೀಕ್ಷೆಗಳನ್ನು ನಿಮ್ಮ ಮನೆಯಲ್ಲೇ ಅಥವಾ ಹತ್ತಿರದ ಯಾವುದಾದರೂ ಲ್ಯಾಬ್‌ನಲ್ಲಿ ಮಾಡಿಕೊಡುತ್ತಾರೆ.
3. ಅಂಡರ್‌ರೈಟಿಂಗ್ ನಿರ್ಧಾರ: ನಿಮ್ಮ ದಾಖಲೆ ಮತ್ತು ವೈದ್ಯಕೀಯ ವರದಿ ನೋಡಿ ಕಂಪನಿಯು ಈ ಮೂರರಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ. ಒಂದನೆಯದ್ದು ಮಾನ್ಯ ಮಾಡುವುದು, ಎರಡನೆಯದ್ದು ಏನಾದರೂ ರಿಸ್ಕ್ ಇದ್ದರೆ ಕಂತು ಸ್ವಲ್ಪ ಜಾಸ್ತಿ ಮಾಡಿ ಕೌಂಟರ್-ಆಫರ್ ಮಾಡುವುದು.
ಮೂರನೆಯದ್ದು, ಒಂದು ವೇಳೆ ಕಂಪನಿ ನೀಡಿದ ಕೌಂಟರ್-ಆಫರ್ ನಿಮಗೆ ಇಷ್ಟವಾಗದಿದ್ದರೆ, ನೀವು ಅದನ್ನು ತಿರಸ್ಕರಿಸಬಹುದು. ಆಗ ನೀವು ಕಟ್ಟಿದ ಹಣ ನಿಮಗೆ ವಾಪಸ್ ಸಿಗುತ್ತದೆ. ಈ ಇಡೀ ಪ್ರಕ್ರಿಯೆಗೆ ಸಾಮಾನ್ಯವಾಗಿ 3 ರಿಂದ 4 ವಾರಗಳು ಬೇಕಾಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.