ADVERTISEMENT

ಜಿಡಿಪಿ ಶೇ 5ರ ವೃದ್ಧಿ ದರ ಅಚ್ಚರಿದಾಯಕ:ಶಕ್ತಿಕಾಂತ್‌ ದಾಸ್‌

ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ವಿಶ್ಲೇಷಣೆ

ಪಿಟಿಐ
Published 16 ಸೆಪ್ಟೆಂಬರ್ 2019, 20:19 IST
Last Updated 16 ಸೆಪ್ಟೆಂಬರ್ 2019, 20:19 IST
ಶಕ್ತಿಕಾಂತ್‌ ದಾಸ್‌
ಶಕ್ತಿಕಾಂತ್‌ ದಾಸ್‌   

ನವದೆಹಲಿ: ‘ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶಿ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಶೇ 5ರಷ್ಟು ಮಾತ್ರ ಹೆಚ್ಚಳಗೊಂಡಿರುವುದು ಅಚ್ಚರಿದಾಯಕ ವಿದ್ಯಮಾನವಾಗಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

‘ಆರ್ಥಿಕ ವೃದ್ಧಿ ದರವು ಶೇ 5.8ರಷ್ಟು ಇರಲಿದೆ ಎನ್ನುವುದು ನಮ್ಮ ಅಂದಾಜು ಆಗಿತ್ತು. ಇತರರು ಕೂಡ ವೃದ್ಧಿ ದರವು ಶೇ 5.5ಕ್ಕಿಂತ ಕಡಿಮೆ ಇರುವುದಿಲ್ಲ ಎಂದೇ ಅಂದಾಜಿಸಿದ್ದರು. ಆದರೆ, ವೃದ್ಧಿ ದರದ ಅಧಿಕೃತ ಅಂಕಿ ಅಂಶಗಳು ನಮ್ಮೆಲ್ಲ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದವು. ಶೇ 5ರಷ್ಟು ಬೆಳವಣಿಗೆ ದಾಖಲಿಸಿರುವುದು ಅಚ್ಚರಿದಾಯಕ ವಿದ್ಯಮಾನವಾಗಿದೆ.

‘ಅಭಿವೃದ್ಧಿ ಹೊಂದಿದ ದೇಶಗಳ ಎರಡನೆ ತ್ರೈಮಾಸಿಕದ ವೃದ್ಧಿ ದರವೂ ಮೊದಲ ತ್ರೈಮಾಸಿಕಕ್ಕಿಂತ ಕಡಿಮೆ ಇರಲಿದೆ. ಹೀಗಾಗಿ ಆರ್ಥಿಕತೆಯಲ್ಲಿ ಮಂದಗತಿ ಇನ್ನಷ್ಟು ಕಾಲ ಮುಂದುವರೆಯಲಿದೆ. ಜಾಗತಿಕ ಆರ್ಥಿಕತೆಯಲ್ಲಿನ ನಿಧಾನ ಪ್ರಗತಿಯ ಕಾರಣಕ್ಕೇನೆ ದೇಶಿ ಆರ್ಥಿಕತೆಯೂ ಕುಂಠಿತ ಬೆಳವಣಿಗೆ ಕಾಣುತ್ತಿದೆ ಎಂದೇನೂ ನಾನು ಹೇಳುವುದಿಲ್ಲ. ಈ ಪರಿಸ್ಥಿತಿಗೆ ಸ್ಥಳೀಯ ವಿದ್ಯಮಾನಗಳ ಸಾಕಷ್ಟು ಕೊಡುಗೆಯೂ ಇದೆ.

ADVERTISEMENT

‘ಈಗಲೂ ಹಲವಾರು ವಿದ್ಯಮಾನಗಳು ಅರ್ಥವ್ಯವಸ್ಥೆಯ ವಿವಿಧ ವಲಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಹೀಗಾಗಿ ಆರ್ಥಿಕತೆಯು ಯಾವಾಗ ಚೇತರಿಕೆ ಕಾಣಲಿದೆ ಎಂದು ಈ ಹಂತದಲ್ಲಿ ಅಂದಾಜು ಮಾಡುವುದು ಕಷ್ಟದ ಕೆಲಸವಾಗಿದೆ.

‘ಸೌದಿ ಅರೇಬಿಯಾದಲ್ಲಿ ಉದ್ಭವಿಸಿರುವ ಕಚ್ಚಾ ತೈಲದ ಬಿಕ್ಕಟ್ಟು ಸಂಪೂರ್ಣ ಅನಿರೀಕ್ಷಿತ ಬೆಳವಣಿಗೆಯಾಗಿದೆ. ವಿಶ್ವದ ಎರಡು ಬಲಾಢ್ಯ ಆರ್ಥಿಕತೆಗಳ ನಡುವಣ ವಾಣಿಜ್ಯ ಸಮರದ ಕುರಿತ ಅನಿಶ್ಚಿತತೆ ಕೊನೆಗೊಂಡಿಲ್ಲ. ಎಲ್ಲೆಡೆ ಅನಿಶ್ಚಿತತೆ ಕಂಡುಬರುತ್ತಿದೆ. ಎರಡನೆ ತ್ರೈಮಾಸಿಕದಲ್ಲಿ ಬೀರಬಹುದಾದ ಕಾರಣಗಳನ್ನು ವಿಶ್ಲೇಷಿಸಿ ಪರಿಸ್ಥಿತಿಯ ಅಂದಾಜು ಮಾಡಲಾಗುವುದು’ ಎಂದು ದಾಸ್‌ ಹೇಳಿದ್ದಾರೆ.

***

ಸರ್ಕಾರ ತ್ವರಿತವಾಗಿ ಸ್ಪಂದಿಸುತ್ತಿದೆ. ಸಮರ್ಪಕ ಕೊಡುಗೆಗಳಿಂದ ಆರ್ಥಿಕ ಪರಿಸ್ಥಿತಿ ಚೇತರಿಕೆಯ ಹಾದಿಗೆ ಮರಳುವ ಬಗ್ಗೆ ನನಗೆ ದೃಢ ಶ್ವಾಸ ಇದೆ

- ಶಕ್ತಿಕಾಂತ್‌ ದಾಸ್‌, ಆರ್‌ಬಿಐ ಗವರ್ನರ್‌

***

‘ಪ್ರಗತಿಯ ಹಾದಿಗೆ ಮರಳಲಿದೆ’

‘ಕೇಂದ್ರ ಸರ್ಕಾರ ಸರಣಿಯೋಪಾದಿಯಲ್ಲಿ ಪ್ರಕಟಿಸುತ್ತಿರುವ ಉತ್ತೇಜನಾ ಕೊಡುಗೆಗಳಿಂದ ಆರ್ಥಿಕತೆಯು ಶೀಘ್ರದಲ್ಲಿಯೇ ಪ್ರಗತಿಯ ಹಾದಿಗೆ ಮರಳಲಿದೆ. ಇದೊಂದು ನಿರಂತರ ಪ್ರಕ್ರಿಯೆಯಾಗಿರಲಿದೆ. ಸರ್ಕಾರ ಕೃಷಿ ಮಾರುಕಟ್ಟೆ ಸುಧಾರಣಾ ಕ್ರಮಗಳನ್ನು ಪ್ರಕಟಿಸಲಿದೆ ಎನ್ನುವುದೂ ನನ್ನ ನಿರೀಕ್ಷೆಯಾಗಿದೆ. ಸರ್ಕಾರ ಇತರ ಸವಾಲುಗಳನ್ನೂ ಖಂಡಿತವಾಗಿಯೂ ಸಮರ್ಥವಾಗಿ ನಿಭಾಯಿಸಲಿದೆ’ ಎಂದು ದಾಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಆರ್ಥಿಕತೆಯ ಪ್ರಗತಿ ನಿಧಾನಗೊಂಡಿರುವುದರಿಂದ ಆರ್‌ಬಿಐ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಕಡಿತಗೊಳಿಸುತ್ತ ಬಂದಿದೆ. ಈ ವರ್ಷದ ಜನವರಿಯಿಂದೀಚೆಗೆ ನಾಲ್ಕು ಬಾರಿ ರೆಪೊ ದರ (ಶೇ 1.10) ತಗ್ಗಿಸಿದೆ. ರಿಯಲ್‌ ಎಸ್ಟೇಟ್‌, ರಫ್ತು ವಲಯಕ್ಕೆ ಉತ್ತೇಜನೆ, ಬ್ಯಾಂಕ್‌ಗಳ ವಿಲೀನ, ಎಂಎಸ್‌ಎಂಇ ವಲಯಕ್ಕೆ ಕೊಡುಗೆ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.