ADVERTISEMENT

14 ವರ್ಷಗಳ ನಂತರ ಬೆಂಕಿಪೊಟ್ಟಣದ ಬೆಲೆ ಹೆಚ್ಚಳ: ₹2ಕ್ಕೆ ಏರಿಕೆ

ಪಿಟಿಐ
Published 24 ಅಕ್ಟೋಬರ್ 2021, 13:47 IST
Last Updated 24 ಅಕ್ಟೋಬರ್ 2021, 13:47 IST
ವಿವಿಧ ರೀತಿಯ ಬೆಂಕಿ ಪಟ್ಟಣಗಳ ಸಂಗ್ರಹ
ವಿವಿಧ ರೀತಿಯ ಬೆಂಕಿ ಪಟ್ಟಣಗಳ ಸಂಗ್ರಹ   

ಚೆನ್ನೈ: ಡಿಸೆಂಬರ್ 1ರಿಂದ ಅನ್ವಯ ಆಗುವಂತೆ ಬೆಂಕಿಪೊಟ್ಟಣದ ಬೆಲೆಯು ₹ 2ಕ್ಕೆ ಹೆಚ್ಚಳ ಕಾಣಲಿದೆ. ಈಗ ಒಂದು ಬೆಂಕಿಪೊಟ್ಟಣದ ಬೆಲೆಯು ₹ 1ರಷ್ಟು ಇದೆ. ಬೆಂಕಿಕಡ್ಡಿ ಉತ್ಪಾದನೆಯ ವೆಚ್ಚ ಹೆಚ್ಚಾಗಿರುವ ಕಾರಣ, ಬೆಂಕಿಪೊಟ್ಟಣ ಉತ್ಪಾದನಾ ಕಂಪನಿಗಳು ಈ ಕ್ರಮಕ್ಕೆ ಮುಂದಾಗಿವೆ.

ಆದರೆ, ಬೆಲೆ ಹೆಚ್ಚಳದ ಜೊತೆಯಲ್ಲೇ ಗ್ರಾಹಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಕಿಕಡ್ಡಿಗಳನ್ನು ನೀಡಲು ಕಂಪನಿಗಳು ತೀರ್ಮಾನ ಮಾಡಿವೆ. ₹ 1 ಬೆಲೆಯ ಬೆಂಕಿಪೊಟ್ಟಣದಲ್ಲಿ ಈಗ 36 ಬೆಂಕಿಕಡ್ಡಿಗಳು ಇರುತ್ತವೆ. ₹ 2ಕ್ಕೆ ಬೆಲೆ ಏರಿಕೆ ಆದ ನಂತರದಲ್ಲಿ, ಒಂದು ಪೊಟ್ಟಣದಲ್ಲಿ 50 ಬೆಂಕಿಕಡ್ಡಿಗಳು ಇರಲಿವೆ.‌‌

14 ವರ್ಷಗಳ ನಂತರದಲ್ಲಿ ಬೆಂಕಿಪೊಟ್ಟಣಗಳ ಬೆಲೆ ಹೆಚ್ಚಾಗಲಿದೆ ಎಂದು ರಾಷ್ಟ್ರೀಯ ಸಣ್ಣ ಬೆಂಕಿಪೊಟ್ಟಣ ತಯಾರಕರ ಸಂಘದ ಕಾರ್ಯದರ್ಶಿ ವಿ.ಎಸ್. ಸೇತುರತ್ನಂ ತಿಳಿಸಿದ್ದಾರೆ. ಬೆಂಕಿಕಡ್ಡಿ ಹಾಗೂ ಬೆಂಕಿಪೊಟ್ಟಣ ತಯಾರಿಕೆಯಲ್ಲಿ ಬಳಸುವ ಕೆಂಪು ರಂಜಕ, ಮೇಣ, ಪೊಟಾಸಿಯಂ ಕ್ಲೋರೇಟ್, ಕಡ್ಡಿ ಬೆಲೆಯು ಹೆಚ್ಚಳ ಆಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ತೈಲ ಬೆಲೆ ಹೆಚ್ಚಾಗಿರುವ ಕಾರಣ ಸರಕು ಸಾಗಣೆಗೆ ಮಾಡುವ ವೆಚ್ಚ ಜಾಸ್ತಿ ಆಗಿದೆ. ಬೆಲೆ ಹೆಚ್ಚಿಸುವ ತೀರ್ಮಾನಕ್ಕೆ ಇದೂ ಒಂದು ಕಾರಣ’ ಎಂದು ಅವರು ತಿಳಿಸಿದ್ದಾರೆ. 2007ರಲ್ಲಿ ಬೆಂಕಿಪೊಟ್ಟಣದ ಬೆಲೆಯನ್ನು 50 ಪೈಸೆಯಿಂದ ₹ 1ಕ್ಕೆ ಹೆಚ್ಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.