
ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಮುಂಬೈ: ಅದಾನಿ ಸಮೂಹವು ನಿರ್ವಹಣೆ ಮಾಡುತ್ತಿರುವ ವಿಮಾನ ನಿಲ್ದಾಣಗಳಿಂದ ಮುಂದಿನ ವರ್ಷದಲ್ಲಿ ಪ್ರಯಾಣಿಕರ ಸಂಚಾರವು 12 ಕೋಟಿಗೆ ತಲುಪುವ ನಿರೀಕ್ಷೆ ಇದೆ ಎಂದು ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನ (ಎಎಎಚ್‌ಎಲ್) ನಿರ್ದೇಶಕ ಜೀತ್ ಅದಾನಿ ಹೇಳಿದ್ದಾರೆ.
ಪ್ರಸ್ತುತ ಮುಂಬೈ, ಅಹಮದಾಬಾದ್, ತಿರುವನಂತಪುರ, ಜೈಪುರ, ಲಖನೌ, ಗುವಾಹಟಿ ಮತ್ತು ಮಂಗಳೂರು ವಿಮಾನ ನಿಲ್ದಾಣಗಳನ್ನು ಅದಾನಿ ಸಮೂಹವು ನಿರ್ವಹಣೆ ಮಾಡುತ್ತಿದೆ. ಡಿಸೆಂಬರ್ 25ರಂದು ನವಿ ಮುಂಬೈ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಚಟುವಟಿಕೆಗಳು ಆರಂಭವಾಗಲಿದೆ. ಈ ವಿಮಾನ ನಿಲ್ದಾಣದೊಂದಿಗೆ ಅದಾನಿ ಸಮೂಹವು ನಿರ್ವಹಣೆ ಮಾಡುವ ವಿಮಾನ ನಿಲ್ದಾಣಗಳ ಸಂಖ್ಯೆ 8ಕ್ಕೆ ತಲುಪಲಿದೆ.
ಕಳೆದ ವರ್ಷ ಅದಾನಿ ಸಮೂಹ ನಿರ್ವಹಣೆ ಮಾಡುತ್ತಿರುವ ಏಳು ವಿಮಾನ ನಿಲ್ದಾಣಗಳಿಂದ 9 ಕೋಟಿ ಪ್ರಯಾಣಿಕರು ಸಂಚರಿಸಿದ್ದರು. ಈ ವರ್ಷ ಇದು 10 ಕೋಟಿಯಷ್ಟಾಗಲಿದೆ. ನವಿ ಮುಂಬೈ ವಿಮಾನ ನಿಲ್ದಾಣ ಪ್ರಾರಂಭದ ಬಳಿಕ ಪ್ರಯಾಣಿಕರ ಸಂಚಾರವು 12 ಕೋಟಿ ಆಗಲಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ವರ್ಷದ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಎನ್‌ಎಂಐಎಎಲ್) ಉದ್ಘಾಟಿಸಿದ್ದರು. ಈ ವಿಮಾನ ನಿಲ್ದಾಣದಲ್ಲಿ ಅದಾನಿ ಸಮೂಹವು ಶೇ 74ರಷ್ಟು ಪಾಲು ಹೊಂದಿದೆ. ಉಳಿದ ಶೇ 26ರಷ್ಟು ಪಾಲನ್ನು ಮಹಾರಾಷ್ಟ್ರ ಸರ್ಕಾರದ ಸಿಐಡಿಸಿಒ ಹೊಂದಿದೆ ಎಂದು ಹೇಳಿದ್ದಾರೆ.
ಎನ್‌ಎಂಐಎಎಲ್ 1,160 ಹೆಕ್ಟೇರ್‌ನಷ್ಟು ವಿಸ್ತೀರ್ಣದಲ್ಲಿದೆ. ವಾರ್ಷಿಕ 9 ಕೋಟಿ ಪ್ರಯಾಣಿಕರ ಸಂಚಾರದ ಸಾಮರ್ಥ್ಯವನ್ನು ಹೊಂದಿದ್ದು, 32.5 ಲಕ್ಷ ಟನ್ ಸರಕು ಸಾಗಣೆ ಸಾಮರ್ಥ್ಯವಿದೆ. ಇದು ಏಷ್ಯಾದ ಅತಿದೊಡ್ಡ ವಿಮಾನಯಾನ ಕೇಂದ್ರಗಳಲ್ಲಿ ಒಂದಾಗಿದೆ.
ಭಾರತವು ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ದೇಶೀಯ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಭಾರತದ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳನ್ನು ಹೆಚ್ಚಿಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.