ADVERTISEMENT

5ಜಿ ಹರಾಜು: ಜುಲೈ 26ರಂದು ತರಂಗಾಂತರ ಹರಾಜು ಪ್ರಕ್ರಿಯೆ – ಅದಾನಿ ಭಾಗಿ

ಪಿಟಿಐ
Published 10 ಜುಲೈ 2022, 0:30 IST
Last Updated 10 ಜುಲೈ 2022, 0:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವುದಾಗಿ ಅದಾನಿ ಸಮೂಹವು ಶನಿವಾರ ಖಚಿತಪಡಿಸಿದೆ.

‘ಈ ಹರಾಜಿನ ಮೂಲಕ ಭಾರತವು ಮುಂದಿನ ಪೀಳಿಗೆಯ 5ಜಿ ಸೇವೆಗಳಿಗೆ ಸಿದ್ಧತೆ ನಡೆಸುತ್ತಿದ್ದು, ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವವರಲ್ಲಿ ನಾವೂ ಒಬ್ಬರಾಗಿದ್ದೇವೆ’ ಎಂದು ಸಮೂಹವು ಪ್ರಕಟಣೆಯಲ್ಲಿ ತಿಳಿಸಿದೆ.

‘ವಿಮಾನ ನಿಲ್ದಾಣ, ಬಂದರು ಮತ್ತು ಸಾಗಣೆ, ವಿದ್ಯುತ್‌ ಉತ್ಪಾದನೆ, ವಿತರಣೆ ಮತ್ತು ವಿವಿಧ ತಯಾರಿಕಾ ಕೆಲಸಗಳಲ್ಲಿ ಸುಧಾರಿತ ಸೈಬರ್‌ ಭದ್ರತೆಯ ಜೊತೆಗೆ ಖಾಸಗಿ ನೆಟ್‌ವರ್ಕ್‌ ಪರಿಹಾರಗಳನ್ನು ಕಲ್ಪಿಸಲು ನಾವು ಹರಾಜಿನಲ್ಲಿ ಭಾಗವಹಿಸುತ್ತಿದ್ದೇವೆ’ ಎಂದು ಸಮೂಹದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೊ ಮತ್ತು ಸುನೀಲ್‌ ಮಿತ್ತಲ್‌ಗೆ ಸೇರಿದ ಭಾರ್ತಿ ಏರ್‌ಟೆಲ್‌ ಕಂಪನಿಗಳ ಎದುರು ನೇರ ಸ್ಪರ್ಧೆಗೆ ಇಳಿಯಲು ಗೌತಮ್ ಅದಾನಿ ಒಡೆತನದ ಅದಾನಿ ಸಮೂಹವು ಹರಾಜಿನಲ್ಲಿ ಭಾಗವಹಿಸುವ ಯೋಜನೆ ಹೊಂದಿದೆ ಎಂದು ಮೂಲಗಳು ಶುಕ್ರವಾರ ಹೇಳಿದ್ದವು.

ಜುಲೈ 26ರಂದು 5ಜಿ ತರಂಗಾಂತರ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೆ ಅರ್ಜಿ ಸಲ್ಲಿಸಲು ನೀಡಿದ್ದ ಗುಡುವು ಶುಕ್ರವಾರ ಅಂತ್ಯವಾಗಿದ್ದು ಒಟ್ಟಾರೆ ನಾಲ್ಕು ಅರ್ಜಿಗಳು ಸಲ್ಲಿಕೆ ಆಗಿವೆ.

ಜಿಯೊ, ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಕಂಪನಿಗಳು ಅರ್ಜಿ ಸಲ್ಲಿಸಿವೆ. ಅದಾನಿ ಸಮೂಹವು ನಾಲ್ಕನೇ ಅರ್ಜಿದಾರ ಆಗಿದೆ ಎಂದು ಮೂಲಗಳು ಹೇಳಿದ್ದವು.

ಹರಾಜಿನಲ್ಲಿ ಭಾಗವಹಿಸುವ ಮೂಲಕ ಇದೇ ಮೊದಲ ಬಾರಿಗೆ ಅದಾನಿ ಮತ್ತು ಅಂಬಾನಿ ಒಡೆತನದ ಕಂಪನಿಗಳು ನೇರವಾಗಿ ಸ್ಪರ್ಧೆಗೆ ಇಳಿಯಲಿವೆ. ಅದಾನಿ ಸಮೂಹವು ನವೀಕರಿಸುವ ಇಂಧನ, ಆರೋಗ್ಯ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನ ವಹಿವಾಟನ್ನು ವಿಸ್ತರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.