ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಪಿಎಫ್ ಖಾತೆಯಿಂದ ಸದಸ್ಯರು ಪಡೆಯಬಹುದಾದ ಆಟೊ ಸೆಟ್ಲ್‌ಮೆಂಟ್ ಮೊತ್ತದ ಪ‍್ರಮಾಣವನ್ನು ಹೆಚ್ಚಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ವ್ಯವಹಾರಗಳ ಸಚಿವ ಮನಸುಖ್ ಮಾಂಡವೀಯ ತಿಳಿಸಿದ್ದಾರೆ.
ಆಟೊ ಸೆಟ್ಲ್‌ಮೆಂಟ್ ಮೊತ್ತದ ಪ‍್ರಮಾಣವನ್ನು ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವ ಮಾಂಡವೀಯ ಸಭೆಯ ನಂತರ ಸುದ್ದಿಗಾರರಿಗೆ ವಿವರಿಸಿದರು.
ಈ ಹೊಸ ನಿಯಮ ಲಕ್ಷಾಂತರ ಇಪಿಎಫ್‌ಒ ಸದ್ಯರಿಗೆ ಅವರ ತುರ್ತು ಹಣಕಾಸಿನ ಅಗತ್ಯಗಳಿಗೆ ಸಹಾಯವಾಗಲಿದೆ ಎಂದು ಅವರು ಹೇಳಿದರು.
ಆಟೊ ಸೆಟ್ಲ್‌ಮೆಂಟ್ ಎಂಬುದು ಯಾವುದೇ ಕಚೇರಿ ಅಲೆದಾಟ ಇಲ್ಲದೇ ಆನ್‌ಲೈನ್ ಮೂಲಕ ಮೂರು ದಿನಗಳೊಳಗೆ ಖಾತೆದಾರ ತನ್ನ ಪಿಎಫ್ ಖಾತೆಯಿಂದ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದಾಗಿದೆ ಪಡೆಯಬಹುದಾದ ಗರಿಷ್ಠ ಮೊತ್ತವಾಗಿದೆ.
ಕೋವಿಡ್ ಸಾಂಕ್ರಾಮಿಕದ ಮೊದಲು ಪಿಎಫ್ ಖಾತೆದಾರರು ಅನಾರೋಗ್ಯದ ಕಾರಣಕ್ಕಾಗಿ ತಮ್ಮ ಪಿಎಫ್ ಖಾತೆಯಲ್ಲಿನ ಹಣವನ್ನು ತೆಗೆದುಕೊಳ್ಳಲು ಕಚೇರಿಗಳಿಗೆ ಅಲೆಡಾಡಬೇಕಿತ್ತು. ಇದನ್ನು ತಪ್ಪಿಸಲು 2021ರಲ್ಲಿ ಆಟೊ ಸೆಟ್ಲ್‌ಮೆಂಟ್ ಎಂಬ ಆನ್‌ಲೈನ್ ವಿಧಾನದ ಮೂಲಕ ₹50 ಸಾವಿರದಿಂದ ಗರಿಷ್ಠ ₹1 ಲಕ್ಷ ಹಣವನ್ನು ತೆಗೆದುಕೊಳ್ಳಲು ಅನುಕೂಲ ಕಲ್ಪಿಸಲಾಗಿತ್ತು. ಇದೀಗ ಅದನ್ನು ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಮೊದಲು ಅನಾರೋಗ್ಯದ ಕಾರಣಕ್ಕೆ ಮಾತ್ರ ಆಟೊ ಸೆಟ್ಲ್‌ಮೆಂಟ್‌ನಲ್ಲಿ ಹಣ ಪಡೆಯಬಹುದಿತ್ತು. ಸದ್ಯ ಮದುವೆ, ಮನೆ ಕಟ್ಟಲು, ಶಿಕ್ಷಣದ ಉದ್ದೇಶಕ್ಕೂ ಹಣ ಪಡೆಯಬಹುದಾಗಿದೆ.
2024–25 ನೇ ಹಣಕಾಸಿನ ವರ್ಷದಲ್ಲಿ 2.34 ಕೋಟಿ ಕ್ಲೈಮ್‌ಗಳನ್ನು ಆಟೊ ಸೆಟ್ಲ್‌ಮೆಂಟ್ ಮೂಲಕ ಬಗೆಹರಿಸಲಾಗಿದೆ. ಇದು ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 161 ರಷ್ಟು ಹೆಚ್ಚು ಎಂದು ಇಲಾಖೆಯ ಅಂಕಿ–ಅಂಶಗಳು ಹೇಳಿವೆ.
ಇಪಿಎಫ್‌ಒನಲ್ಲಿ 7 ಕೋಟಿಗೂ ಅಧಿಕ ಪಿಎಫ್ ಖಾತೆಗಳಿವೆ. ತ್ವರಿತ ಹಾಗೂ ಪಾರದರ್ಶಕತೆಯ ಕಾರಣಕ್ಕೆ ಆಟೊ ಸೆಟ್ಲ್‌ಮೆಂಟ್ ಜಾರಿಗೊಳಿಸಲಾಗಿದೆ ಎಂದು ಇಲಾಖೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.