ADVERTISEMENT

ಅಕ್ಟೋಬರ್‌ನಲ್ಲಿ ಎಫ್‌ಪಿಐ ಹೂಡಿಕೆ ₹6 ಸಾವಿರ ಕೋಟಿ

ಪಿಟಿಐ
Published 19 ಅಕ್ಟೋಬರ್ 2025, 14:15 IST
Last Updated 19 ಅಕ್ಟೋಬರ್ 2025, 14:15 IST
   

ನವದೆಹಲಿ: ಸತತ ಮೂರು ತಿಂಗಳುಗಳಿಂದ ಹಣವನ್ನು ಹಿಂಪಡೆಯುತ್ತಿದ್ದ ವಿದೇಶಿ ಹೂಡಿಕೆದಾರರು (ಎಫ್‌ಪಿಐ) ಅಕ್ಟೋಬರ್‌ನಲ್ಲಿ ಇದುವರೆಗೆ ದೇಶದ ಬಂಡವಾಳ ಮಾರುಕಟ್ಟೆಗಳಲ್ಲಿ ಒಟ್ಟು ₹6,480 ಕೋಟಿ ನಿವ್ವಳ ಹೂಡಿಕೆ ಮಾಡಿದ್ದಾರೆ.

ದೇಶದ ಅರ್ಥ ವ್ಯವಸ್ಥೆಯ ಹಲವು ಅಂಶಗಳು ಬಲಿಷ್ಠವಾಗಿರುವುದು ಈ ಹೂಡಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಫ್‌ಪಿಐಗಳು ಸೆಪ್ಟೆಂಬರ್‌ನಲ್ಲಿ ನಿವ್ವಳ ₹23,885 ಕೋಟಿ, ಆಗಸ್ಟ್‌ನಲ್ಲಿ ₹34,990 ಕೋಟಿ ಹಾಗೂ ಜುಲೈನಲ್ಲಿ ₹17,700 ಕೋಟಿ ಹೂಡಿಕೆ ಹಿಂಪಡೆದಿದ್ದರು. ಆದರೆ ಅಕ್ಟೋಬರ್‌ನಲ್ಲಿ ನಿವ್ವಳ ಹೂಡಿಕೆ ಹೆಚ್ಚಾಗಿರುವುದು ವಿದೇಶಿ ಹೂಡಿಕೆದಾರರ ಆಲೋಚನೆಗಳು ಬದಲಾಗಿರುವುದನ್ನು, ಭಾರತದ ಮಾರುಕಟ್ಟೆಗಳ ಬಗ್ಗೆ ಜಾಗತಿಕ ಹೂಡಿಕೆದಾರರಲ್ಲಿ ವಿಶ್ವಾಸ ಮತ್ತೆ ಮೂಡಿರುವುದನ್ನು ಹೇಳುತ್ತಿದೆ.

ADVERTISEMENT

ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ಹಲವು ದೇಶಗಳಿಗೆ ಹೋಲಿಸಿದರೆ ಭಾರತದ ಅರ್ಥ ವ್ಯವಸ್ಥೆಯು ಬಲಿಷ್ಠವಾಗಿದೆ. ಭಾರತದಲ್ಲಿ ಬೆಳವಣಿಗೆ ದರ ಸ್ಥಿರವಾಗಿದೆ, ಹಣದುಬ್ಬರ ಪ್ರಮಾಣವು ನಿಯಂತ್ರಣದಲ್ಲಿದೆ, ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆಯು ಕುಸಿದಿಲ್ಲ ಎಂದು ಮಾರ್ನಿಂಗ್‌ಸ್ಟಾರ್‌ ಇನ್ವೆಸ್ಟ್‌ಮೆಂಟ್‌ ರಿಸರ್ಚ್‌ ಇಂಡಿಯಾ ಸಂಸ್ಥೆಯ ಹಿಮಾಂಶು ಶ್ರೀವಾಸ್ತವ ಹೇಳಿದರು.

ಭಾರತದ ಮಾರುಕಟ್ಟೆಗಳು ಈಗ ಇತರ ಮಾರುಕಟ್ಟೆಗಳಿಗೆ ಹೋಲಿಸಿದರೆ ದುಬಾರಿ ಆಗಿ ಉಳಿದಿಲ್ಲ. ಇದು ಕೂಡ ವಿದೇಶಿ ಹೂಡಿಕೆದಾರರು ಮತ್ತೆ ಭಾರತದ ಕಡೆ ಮುಖ ಮಾಡಿರುವುದಕ್ಕೆ ಒಂದು ಕಾರಣ ಎಂದು ಜಿಯೋಜಿತ್‌ ಇನ್ವೆಸ್ಟ್‌ಮೆಂಟ್ಸ್‌ ಸಂಸ್ಥೆಯ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.