ADVERTISEMENT

ಪೆಟ್ರೋಲ್‌ಗೆ ₹ 100: ಈಗ ಮಧ್ಯಪ್ರದೇಶದ ಸರದಿ

ಪಿಟಿಐ
Published 18 ಫೆಬ್ರುವರಿ 2021, 14:05 IST
Last Updated 18 ಫೆಬ್ರುವರಿ 2021, 14:05 IST
   

ನವದೆಹಲಿ: ಮಧ್ಯಪ್ರದೇಶದಲ್ಲಿ ಲೀಟರ್ ಪೆಟ್ರೋಲ್ ದರ ಗುರುವಾರ ₹ 100ರ ಗಡಿ ದಾಟಿದೆ. ನಿರಂತರವಾಗಿ ಹತ್ತು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗುತ್ತಿದೆ.

ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ಬೆಲೆಯು ₹ 100ರ ಗಡಿಯನ್ನು ಬುಧವಾರ ದಾಟಿತ್ತು. ಈಗ ಮಧ್ಯಪ್ರದೇಶದ ಅನುಪ್ಪುರದಲ್ಲಿ ಕೂಡ ಪೆಟ್ರೋಲ್ ಬೆಲೆ ಈ ಗಡಿಯನ್ನು ದಾಟಿದ್ದು, ಲೀಟರ್ ಪೆಟ್ರೋಲ್ ₹ 100.25ಕ್ಕೆ ಮಾರಾಟವಾಗಿದೆ. ಅನುಪ್ಪುರದಲ್ಲಿ ಡೀಸೆಲ್ ಬೆಲೆ ₹ 90.35ಕ್ಕೆ ತಲುಪಿದೆ.

ರಾಜಸ್ಥಾನದಲ್ಲಿ ಪೆಟ್ರೋಲ್‌ ಮೇಲೆ ವಿಧಿಸಲಾಗಿರುವ ಮೌಲ್ಯವರ್ಧಿತ ತೆರಿಗೆಯ (ವ್ಯಾಟ್‌) ಪ್ರಮಾಣವು ದೇಶದಲ್ಲೇ ಅತಿ ಹೆಚ್ಚು. ಇದಾದ ನಂತರದ ಸ್ಥಾನದಲ್ಲಿ ಮಧ್ಯ‍ಪ್ರದೇಶ ಇದೆ.

ADVERTISEMENT

ಮುಂಬೈನಲ್ಲಿ ಪೆಟ್ರೋಲ್ ದರವು ಗುರುವಾರ ₹ 96.32ಕ್ಕೆ ತಲುಪಿದೆ. ‘ತೈಲ ಉತ್ಪಾದನೆ ಮಾಡುವ ರಾಷ್ಟ್ರಗಳು ಉತ್ಪಾದನೆಯ ಪ್ರಮಾಣವನ್ನು ತಗ್ಗಿಸಿರುವ ಕಾರಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾಗಿದೆ’ ಎಂದುರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಹೇಳಿದ್ದಾರೆ.

ಸೌದಿ ಅರೇಬಿಯಾ ಮತ್ತು ತೈಲ ಉತ್ಪಾದಿಸುವ ಇತರ ರಾಷ್ಟ್ರಗಳು ಉತ್ಪಾದನೆಯ ಪ್ರಮಾಣ ಹೆಚ್ಚಿಸಬೇಕು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚುತ್ತಿರುವುದರಿಂದ ಆರ್ಥಿಕ ಪುನಶ್ಚೇತನಕ್ಕೆ ಅಡ್ಡಿ ಉಂಟಾಗುತ್ತದೆ ಎಂದೂ ಪ್ರಧಾನ್ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.