ADVERTISEMENT

Startups 2024: ಅನಿಶ್ಚಿತತೆಯಿಂದ ಭರವಸೆಯ ಹೊಸ ವರ್ಷದೆಡೆಗೆ...

ಪಿಟಿಐ
Published 31 ಡಿಸೆಂಬರ್ 2024, 10:34 IST
Last Updated 31 ಡಿಸೆಂಬರ್ 2024, 10:34 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>
   

ರಾಯಿಟರ್ಸ್ ಚಿತ್ರ

ನವದೆಹಲಿ: ಭಾರತೀಯ ಸ್ಟಾರ್ಟ್‌ಅಪ್‌ಗಳು 2024ರಲ್ಲಿ ಹಲವು ಏರಿಳಿತಗಳೊಂದಿಗೆ ಅನಿಶ್ಚಿತತೆಯ ವರ್ಷವನ್ನು ಕಳೆದಿವೆ. ಹೂಡಿಕೆದಾರರ ಮನಸ್ಥಿತಿಯಲ್ಲಿ ಬದಲಾವಣೆಯಿಂದಾಗಿ ಬಂಡವಾಳ ಆಕರ್ಷಿಸುವ ಹಾಗೂ ಯೂನಿಕಾರ್ನ್‌ ಸ್ಥಾನಮಾನಕ್ಕಾಗಿ ಸ್ಟಾರ್ಟ್‌ಅಪ್‌ಗಳು ಈಗಲೂ ಅದೇ ವಿಶ್ವಾಸದೊಂದಿಗೆ ಹೊಸ ವರ್ಷದತ್ತ ಭರವಸೆ ಹಾಗೂ ನಿರೀಕ್ಷೆಯ ನೋಟ ನೆಟ್ಟಿವೆ.

ಜಾಗತಿಕ ಆರ್ಥಿಕ ಸವಾಲುಗಳ ನಡುವೆಯೂ ಭಾರತದ ಸ್ಟಾರ್ಟ್ಅಪ್‌ಗಳು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವುದರ ಜತೆಗೆ, ಬದಲಾಗುತ್ತಿದ್ದ ಮಾರುಕಟ್ಟೆ ಪರಿಸ್ಥಿತಿಗೆ ಹೊಂದಿಕೊಂಡು, ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು. ಟ್ರಾಕ್ಸನ್‌ ಮಾಹಿತಿ ಪ್ರಕಾರ, ಭಾರತೀಯ ಸ್ಟಾರ್ಟ್‌ಅಪ್‌ಗಳು 2024ರಲ್ಲಿ ₹2.60 ಲಕ್ಷ ಕೋಟಿ ಬಂಡಾವಳ ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. 2023ರಲ್ಲಿ ಇದು ₹2.78 ಲಕ್ಷ ಕೋಟಿ ಇತ್ತು. ಹೀಗಾಗಿ ಈ ವರ್ಷ ಶೇ 6.5ರಷ್ಟು ಬಂಡವಾಳ ಕುಸಿತ ಕಂಡಿದೆ.

ADVERTISEMENT

ಈ ಸವಾಲುಗಳ ನಡುವೆಯೇ ಹಲವು ಸ್ಟಾರ್ಟ್‌ಅಪ್‌ಗಳು ಯೂನಿಕಾರ್ನ್‌ ಸ್ಥಾನಮಾನವನ್ನು 2024ರಲ್ಲಿ ಪಡೆದಿವೆ. ರ‍್ಯಾಪಿಡೊ, ಏಥರ್‌, ಪೆರ್ಫಿಯೊ, ಪೋರ್ಟರ್‌ ಹಾಗೂ ಮನಿ ವ್ಯೂ ಕಂಪನಿಗಳು ಉತ್ತಮ ಆಲೋಚನೆ, ತಂತ್ರಜ್ಞಾನ ಹಾಗೂ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಇದು ಇತರ ಸ್ಟಾರ್ಟ್‌ಅಪ್‌ಗಳನ್ನೂ ಉತ್ತೇಜಿಸಿವೆ ಎಂದು ವರದಿ ಹೇಳಿದೆ.

ಗಿಗ್‌ ಆರ್ಥಿಕತೆ, ರಿಟೇಲ್‌ ಮತ್ತು ಎಂಟರ್‌ಪ್ರೈಸಸ್‌ ಅಪ್ಲಿಕೇಷನ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಕ್ಷೇತ್ರಗಳಾಗಿವೆ. ಕ್ವಿಕ್‌ ಕಾಮರ್ಸ್‌ ಅತಿ ಹೆಚ್ಚು ವಹಿವಾಟು ನಡೆಸಿದ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ತೊಡಗಿರುವ 40 ಕಂಪನಿಗಳು ಉತ್ತಮ ಲಾಭ ಕಂಡುಕೊಂಡಿವೆ. ಇದರಲ್ಲಿ ಯೂನಿಕಾರ್ನ್‌ಗಳಾದ ಝೆಪ್ಟೊ, ಬ್ಲಿಂಕಿಟ್‌, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಹಾಗೂ ಡನ್ಜೊ, ಸ್ವಿಷ್‌ ಹಾಗೂ ಫಾರ್ಮ್‌ಕೊ ಕಂಪನಿಗಳು 2024ರಲ್ಲಿ ಹೊಸ ಹಂತವನ್ನು ತಲುಪಿವೆ.

‘ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ಷೇತ್ರದ ಮೇಲಿದ್ದ ಏಂಜೆಲ್‌ ತೆರಿಗೆಯನ್ನು ಕಳೆದ ಜುಲೈನಲ್ಲಿ ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಇದರಿಂದಾಗಿ ಈ ಕ್ಷೇತ್ರಕ್ಕೆ ದೊಡ್ಡ ನೆರವನ್ನು ಸರ್ಕಾರ ನೀಡಿತು. ಹೂಡಿಕೆದಾರರು ಹಾಗೂ ನವೋದ್ಯಮಿಗಳು ಒಂದಷ್ಟು ಚೇತರಿಕೆ ಕಂಡರು. ಹೀಗಿದ್ದರೂ, ಆರಂಭಿಕ ಹೂಡಿಕೆ ಮೊತ್ತ, ನಿರ್ವಹಣೆಯ ವೆಚ್ಚ ಹಾಗೂ ಮೂಲಸೌಕರ್ಯ ಹೊಂದಿಸುವ ಸವಾಲುಗಳು ಇಂದಿಗೂ ಮುಂದುವರಿದಿವೆ’ ಎಂದು JITO ಇನ್‌ಕ್ಯುಬೇಷನ್‌ ಹಾಗೂ ಇನ್ನೋವೇಷನ್‌ ಪ್ರತಿಷ್ಠಾನದ ಅಧ್ಯಕ್ಷ ಜಿನೇಂದ್ರ ಭಂಡಾರಿ ತಿಳಿಸಿದ್ದಾರೆ.

ನವೋದ್ಯಮಗಳಲ್ಲಿ ಹೆಚ್ಚಾದ ಮಹಿಳೆಯರ ಪಾಲುದಾರಿಕೆ

ನವೋದ್ಯಮದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಳವಾಗಿದೆ. ಅದರಲ್ಲೂ 2ನೇ ಹಾಗೂ 3ನೇ ಹಂತದ ಪಟ್ಟಣಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಗಳಲ್ಲಿ ತೊಡಗುತ್ತಿದ್ದಾರೆ. ಉದ್ಯಮಕ್ಕೆ ಹೊಸ ಆಲೋಚನೆಗಳನ್ನು ತಂದಿದ್ದಾರೆ. ಸ್ಥಳೀಯ ಸಮಸ್ಯೆಗಳನ್ನು ಸರಳವಾಗಿ ಪರಿಹರಿಸುವ ಸೂತ್ರವನ್ನು ಕಂಡುಕೊಂಡಿದ್ದಾರೆ. ಜತೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದ್ದಾರೆ ಎಂದು ವರದಿ ಹೇಳಿದೆ.

ಭಾರತದಲ್ಲಿ ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕಿಯನ್ನು ಹೊಂದಿರುವ 73 ಸಾವಿರಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳಿವೆ. ಅವೆಲ್ಲವೂ ಸ್ಟಾರ್ಟ್‌ಅಪ್‌ ಇಂಡಿಯಾ ಯೋಜನೆಯಡಿ ಗುರುತಿಸಲ್ಪಟ್ಟಿವೆ. ಈ ಎಲ್ಲಾ ಭರವಸೆಯ ಬೆಳಕಿನ ಜತೆಗೆ, ಸವಾಲುಗಳೂ ಎದುರಾಗುತ್ತಿವೆ. ಹೀಗೆ ಎದುರಾಗುತ್ತಿರುವ ಆರ್ಥಿಕ ಅನಿಶ್ಚಿತತೆಯು ಹೂಡಿಕೆದಾರರ ಭಾವನೆಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.

‘ವಹಿವಾಟು ಕುದುರುವ ಪ್ರಮಾಣ ಪ್ರತಿ ತ್ರೈಮಾಸಿಕದಲ್ಲಿ ಶೇ 10ರಿಂದ 20ರಷ್ಟು ಹೆಚ್ಚಳ ಕಂಡಿದ್ದರೂ, ಅದರ ಗಳಿಕೆಯ ಮೊತ್ತ ಗಣನೀಯವಾಗಿ ಕುಸಿತ ಕಂಡಿವೆ. ಇದು ಹೂಡಿಕೆಯ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಬಹಳಸ್ಟು ಸ್ಟಾರ್ಟ್‌ಅಪ್‌ಗಳು ಈಗಲೂ ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಅದರಲ್ಲೂ 2 ಹಾಗೂ 3ನೇ ಹಂತದ ಪಟ್ಟಣಗಳಲ್ಲಿ ಇದು ಹೆಚ್ಚು. ಇದರಿಂದ ಪೂರಕ ಸರಪಳಿ ವ್ಯವಸ್ಥೆಯೇ ಕುಸಿದು, ಒಟ್ಟಾರೆ ನಿರ್ವಹಣೆಯ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರಿದೆ’ ಎಂದು ವರದಿ ಹೇಳಿದೆ.

ಭರವಸೆ ಮೂಡಿಸಿರುವ ಕ್ಷೇತ್ರಗಳು

‘2024ರ ಈ ಎಲ್ಲಾ ಅನಿಶ್ಚಿತತೆ ಎದುರಿಸಿದ ನಂತರ, 2025ರಲ್ಲಿ ಹೂಡಿಕೆ ಚೇತರಿಕೆ ಕಂಡರೂ, ಉದ್ಯಮದ ಪರಿಸ್ಥಿತಿ ಸರಿಹೋಗಲು ಇನ್ನೂ ಎರಡು ವರ್ಷಗಳು ಬೇಕು. ಹೀಗಾಗಿ 2026ರ ಹೊತ್ತಿಗೆ ಸ್ಟಾರ್ಟ್‌ಅಪ್‌ಗಳ ಸ್ಥಿತಿ ಉತ್ತಮವಾಗಬಹುದು. ಈ ನಡುವೆ ಸಣ್ಣ ಹಾಗೂ ಮಧ್ಯಮ ಗಾತ್ರದ ಕಂಪನಿಗಳ ಐಪಿಒಗಳು ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ತಜ್ಞರು ಹೇಳಿದ್ದಾರೆ.

ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್ ಹಾಗೂ ಬ್ಲಾಕ್‌ಚೈನ್ ತಂತ್ರಜ್ಞಾನಗಳು ಬಂಡವಾಳ ಆಕರ್ಷಿಸುವ ನೆಚ್ಚಿನ ಕ್ಷೇತ್ರಗಳಾಗಿವೆ. ಇವುಗಳೊಂದಿಗೆ ಡೀಪ್ ಟೆಕ್‌, ಎಲೆಕ್ಟ್ರಿಕ್ ವಾಹನಗಳು, ಕ್ಲೀನ್‌ ಟೆಕ್‌, ಸೇನಾ ತಂತ್ರಜ್ಞಾನ, ಸ್ಪೇಸ್ ಟೆಕ್‌ ಕ್ಷೇತ್ರಗಳು ಭರವಸೆಯ ಕ್ಷೇತ್ರಗಳಾಗಿವೆ. ಕೃತಕ ಬುದ್ಧಿಮತ್ತೆ, ಸುಸ್ಥಿರ ತಂತ್ರಜ್ಞಾನಗಳು ಹಾಗೂ ಬಾಹ್ಯಾಕಾಶ ವಾಣಿಜ್ಯೀಕರಣದಂತ ಕ್ಷೇತ್ರಗಳು ಜಾಗತಿಕ ಮಟ್ಟದಲ್ಲಿ ಭಾರತವನ್ನು ಮುಂಚೂಣಿಗೆ ತರಲಿವೆ. ಆ ಮೂಲಕ ಭಾರತದ ಆರ್ಥಿಕತೆ ಬೆಳವಣಿಗೆಗೂ ಸಹಕಾರಿಯಾಗಲಿದೆ. ಇವುಗಳ ಜತೆಯಲ್ಲೇ ತಂತ್ರಜ್ಞಾನಗಳ ಬೆಳವಣಿಗೆ, ಸರ್ಕಾರದ ಯೋಜನೆಗಳು ಹಾಗೂ ಅನುಕೂಲಕರ ಆರ್ಥಿಕ ವಾತಾವರಣದಿಂದಾಗಿ 2025ರಲ್ಲಿ ಸ್ಟಾರ್ಟ್‌ಅಪ್‌ಗಳು ಲಾಭದ ಹಾದಿ ತುಳಿಯುವ ಸಾಧ್ಯತೆ ಇದೆ ಎಂದು ತಜ್ಞರು ಭರವಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.