
ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಮತ್ತು ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು: ‘ಭಾರತದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಸಾಮರ್ಥ್ಯದ ವಿಸ್ತರಣೆಗಾಗಿ ₹1.5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು’ ಎಂದು ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದಾರೆ.
‘ಭಾರತದಲ್ಲಿನ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿರುವ ಅವಕಾಶಗಳ ಕುರಿತ ಸ್ಫೂರ್ತಿದಾಯಕ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ದೇಶದ ಆಶೋತ್ತರಗಳನ್ನು ಬೆಂಬಲಿಸುತ್ತಾ, ಏಷ್ಯಾದಲ್ಲೇ ಮೈಕ್ರೊಸಾಫ್ಟ್‌ನ ಅತಿ ಹೆಚ್ಚು ₹1.57 ಲಕ್ಷ ಕೋಟಿ ಹೂಡಿಕೆಗೆ ಪೂರಕವಾಗಿ ಮೂಲಸೌಕರ್ಯ, ಕೌಶಲ ಮತ್ತು ಶ್ರೇಷ್ಠವಾದದನ್ನು ನೀಡುವ ಮೂಲಕ ಭಾರತದ ಕೃತಕ ಬುದ್ಧಿಮತ್ತೆ ಆದ್ಯತೆಗೆ ಬೆಂಬಲವಾಗಿರುತ್ತೇವೆ’ ಎಂದು ಸತ್ಯ ನಾದೆಲ್ಲಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದೇ ವರ್ಷ ಜನವರಿ 7ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ಸತ್ಯ ನಾದೆಲ್ಲಾ, ‘ಭಾರತದಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಸಾಮರ್ಥ್ಯದ ವಿಸ್ತರಣೆಗಾಗಿ ₹25,700 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು’ ಎಂದು ಹೇಳಿದ್ದರು.
2024ರ ಫೆಬ್ರುವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ 2025ರೊಳಗೆ ತಂತ್ರಜ್ಞಾನ ವಲಯದ 20 ಲಕ್ಷ ಜನರಿಗೆ ಎ.ಐ ಕೌಶಲ ತರಬೇತಿ ನೀಡುವುದಾಗಿ ಘೋಷಿಸಿದ್ದರು. ಸಣ್ಣ ನಗರಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ತರಬೇತಿ ನೀಡುವುದಾಗಿಯೂ ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.