ಬೆಂಗಳೂರು: ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವ ಸೇವೆ ಒದಗಿಸುವ ಕ್ಲಿಯರ್‌ಟ್ಯಾಕ್ಸ್ ಕಂಪನಿಯು ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ, ತೆರಿಗೆ ವಿವರ ಸಲ್ಲಿಕೆ ಸಾಧನವನ್ನು ಗ್ರಾಹಕರ ಬಳಕೆಗೆ ಮುಕ್ತವಾಗಿಸಿರುವುದಾಗಿ ಬುಧವಾರ ಹೇಳಿದೆ.
ಈ ಸಾಧನವು ಕನ್ನಡ ಭಾಷೆಯಲ್ಲಿಯೂ ಸೇವೆ ಒದಗಿಸುತ್ತದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಕನ್ನಡ ಮಾತ್ರವೇ ಅಲ್ಲದೆ, ಇಂಗ್ಲಿಷ್, ಹಿಂದಿ, ಮರಾಠಿ, ತೆಲುಗು, ತಮಿಳು ಮತ್ತು ಬಂಗಾಳಿ ಭಾಷೆಯಲ್ಲಿ ಈ ಸಾಧನವು ಸೇವೆ ಒದಗಿಸುತ್ತದೆ.
ತೆರಿಗೆ ವಿವರ ಸಲ್ಲಿಸುವವರು ಈ ಸಾಧನದ ಜೊತೆ ಚಾಟ್ ಮಾಡುತ್ತ ಮೂರು ನಿಮಿಷಗಳಲ್ಲಿ ವಿವರ ಸಲ್ಲಿಸಬಹುದು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ವೇತನ ಪಡೆಯುವ ವರ್ಗದವರು, ಗಿಗ್ ಕಾರ್ಮಿಕರು, ಫ್ರೀಲಾನ್ಸರ್‌ಗಳು, ಮೊದಲ ಬಾರಿಗೆ ತೆರಿಗೆ ವಿವರ ಸಲ್ಲಿಸುತ್ತಿರುವವರು ಇಡೀ ಪ್ರಕ್ರಿಯೆಯನ್ನು ಬೇರೆ ಯಾರ ನೆರವು ಇಲ್ಲದೆಯೂ ಪೂರ್ಣಗೊಳಿಸಬಹುದು.
ಎ.ಐ ಸಾಧನವು ತೆರಿಗೆಗೆ ಸಂಬಂಧಿಸಿದ ಕ್ಲಿಷ್ಟ ಪದಗಳನ್ನು ಸರಳಗೊಳಿಸುವ ಕೆಲಸ ಮಾಡುತ್ತದೆ, ಸರಿಯಾದ ನಮೂನೆಯನ್ನು ತಾನೇ ಆಯ್ಕೆ ಮಾಡಿಕೊಡುತ್ತದೆ, ಅಗತ್ಯವಿರುವ ವಿವರಗಳ ಪೈಕಿ ಶೇ 95ರಷ್ಟನ್ನು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಿಂದ ತಾನೇ ಹೆಕ್ಕಿಕೊಡುತ್ತದೆ ಎಂದು ಕೂಡ ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.