
ಎಜಿಆರ್ ಶುಲ್ಕ ಮರುಹೊಂದಾಣಿಕೆ: ಸರ್ಕಾರವನ್ನು ಸಮೀಪಿಸಲಿರುವ ಏರ್‌ಟೆಲ್
ನವದೆಹಲಿ: ವೊಡಾಫೋನ್ ಐಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅನುಕೂಲಕರ ತೀರ್ಪು ನೀಡಿದ ಬೆನ್ನಲ್ಲೇ, ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್) ಪಾವತಿಯಲ್ಲಿ ಸಡಿಲಿಕೆ ಕೋರಿ ಭಾರ್ತಿ ಏರ್‌ಟೆಲ್ ಕೇಂದ್ರ ಸರ್ಕಾರವನ್ನು ಸಮೀಪಿಸಲಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಟೆಲಿಕಾಂ ಕಂಪನಿಗಳ ಬಾಕಿ ಇರುವ ಎಜಿಆರ್ ಪಾವತಿಯನ್ನು ಮರುಪರಿಶೀಲನೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿತ್ತು. ಇದು 2016–17ರ ಹಣಕಾಸು ವರ್ಷಕ್ಕೆ ಮಾತ್ರ ಸೀಮಿತವಲ್ಲ ಎಂದಿತ್ತು.
ಈ ಹಿಂದೆ ಟೆಲಿಕಾಂ ಕಂಪನಿಗಳ 2016–17ರ ಹಣಕಾಸು ವರ್ಷದ ಬಾಕಿ ಇರುವ ₹ 5,606 ಕೋಟಿ ಎಜಿಆರ್ ಮೊತ್ತವನ್ನು ಮರುಪರಿಶೀಲನೆ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.
ಪರವಾನಗಿ ದರ, ತರಂಗಾಂತರ ಶುಲ್ಕ ಸೇರಿ ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ ಕಡ್ಡಾಯವಾಗಿ ಪಾವತಿ ಮಾಡಬೇಕಿರುವ ಶುಲ್ಕವನ್ನು ಹೊಂದಾಣಿಕೆ ಮಾಡಿದ ಒಟ್ಟು ವರಮಾನ ಎನ್ನಲಾಗುತ್ತದೆ.
ಎಜಿಆರ್ ಶುಲ್ಕವನ್ನು ತಪ್ಪಾಗಿ ಲೆಕ್ಕ ಮಾಡಲಾಗಿದೆ ಎಂದು ನಾವು ಪುನರ್‌ಪರಿಶೀಲನೆ ಕೋರಿದ್ದೆವು. ಆದರೆ ಈ ತೀರ್ಪು ನಮಗೆ ನಿರಾಸೆ ಮೂಡಿಸಿದೆ. ಈಗ ಎಜಿಆರ್ ಶುಲ್ಕವನ್ನು ಮರುಪರಿಶೀಲನೆ ನಡೆಸಲು ಸರ್ಕಾರಕ್ಕೆ ಕೋರ್ಟ್ ಅನುಮತಿ ನೀಡಿದೆ. ಹೀಗಾಗಿ ನಾವು ಸರ್ಕಾರವನ್ನು ಸಮೀಪಿಸಿ ಮನವಿ ಮಾಡುತ್ತೇವೆ’ ಎಂದು ಭಾರ್ತಿ ಏರ್‌ಟೆಲ್ ಉಪಾಧ್ಯಕ್ಷ ಹಾಗೂ ಎಂ.ಡಿ ಗೋಪಾಲ್ ವಿಠಲ್ ತಿಳಿಸಿದ್ದಾರೆ.