ADVERTISEMENT

ಕೋವಿಡ್ ಲಾಕ್‌ಡೌನ್: ತಗ್ಗಿದ ‘ಅಕ್ಷಯ ತೃತೀಯಾ’ ವ್ಯಾಪಾರ

ಪಿಟಿಐ
Published 14 ಮೇ 2021, 18:23 IST
Last Updated 14 ಮೇ 2021, 18:23 IST
ಚಿನ್ನಾಭರಣ
ಚಿನ್ನಾಭರಣ   

ನವದೆಹಲಿ: ಕೋವಿಡ್ ಪೂರ್ವದ ಸ್ಥಿತಿಗೆ ಹೋಲಿಸಿದರೆ ಈ ವರ್ಷದ ಅಕ್ಷಯ ತೃತೀಯಾ ದಿನ (ಶುಕ್ರವಾರ) ಶೇಕಡ 10ರಷ್ಟು ವ್ಯಾಪಾರ ಮಾತ್ರ ನಡೆದಿದೆ ಎಂದು ಚಿನ್ನಾಭರಣಗಳ ಉದ್ಯಮ ಅಂದಾಜಿಸಿದೆ.

ಕೋವಿಡ್‌ಗೂ ಮೊದಲು ಅಕ್ಷಯ ತೃತೀಯಾ ದಿನ ದೇಶದಲ್ಲಿ 25ರಿಂದ 30 ಟನ್‌ ಚಿನ್ನ, ಚಿನ್ನಾಭರಣ, ಮುತ್ತುಗಳ ವ್ಯಾಪಾರ ನಡೆಯುತ್ತಿತ್ತು. ಆದರೆ, ಈ ವರ್ಷ 3ರಿಂದ 4 ಟನ್ ಮಾತ್ರ ವ್ಯಾಪಾರ ಆಗಿದೆ ಎಂಬುದು ಉದ್ಯಮದ ಅಂದಾಜು. ಕಲ್ಯಾಣ್‌ ಜ್ಯುವೆಲರ್ಸ್‌ನಂತಹ ದೊಡ್ಡ ಕಂಪನಿಗಳು ಶುಕ್ರವಾರ ಆನ್‌ಲೈನ್‌ ಮೂಲಕ ಆಭರಣಗಳ ಬುಕಿಂಗ್ ತೆಗೆದುಕೊಂಡಿದ್ದು, ನಂತರದಲ್ಲಿ ಅವುಗಳನ್ನು ಗ್ರಾಹಕರಿಗೆ ತಲುಪಿಸಲಿವೆ.

‘ಆನ್‌ಲೈನ್‌ ಮೂಲಕ ಗ್ರಾಹಕರು ಚಿನ್ನದ ಬುಕಿಂಗ್ ಮಾಡಿದ್ದಾರೆ. ಆದರೆ, ಒಟ್ಟಾರೆಯಾಗಿ ಹೇಳುವುದಾದರೆ, ಕೋವಿಡ್‌ನ ಎರಡನೆಯ ಅಲೆ ಹಾಗೂ ನಗದು ಕೊರತೆಯ ಕಾರಣದಿಂದಾಗಿ ಗ್ರಾಹಕರ ಸ್ಪಂದನ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ’ ಎಂದು ಪಿಎನ್‌ಜಿ ಜ್ಯುವೆಲರ್ಸ್‌ ಕಂಪನಿ ಅಧ್ಯಕ್ಷ ಸೌರಭ್ ಗಾಡ್ಗೀಳ್ ತಿಳಿಸಿದರು.

ADVERTISEMENT

‘ಪರಿಸ್ಥಿತಿ ತಿಳಿಯಾದ ನಂತರ ಗ್ರಾಹಕರಲ್ಲಿ ಖರೀದಿಯ ಹುಮ್ಮಸ್ಸು ಮತ್ತೆ ಬರುತ್ತದೆ. ಚಿನ್ನದ ಬೆಲೆಯು ಈಗಿನ ಹಂತದಿಂದ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ’ ಎಂದು ಅವರು ಹೇಳಿದರು.

‘ಅಕ್ಷಯ ತೃತೀಯಾ ದಿನ ದಕ್ಷಿಣ ಭಾರತದ ರಾಜ್ಯಗಳಲ್ಲಿ ದೊಡ್ಡ ಮಟ್ಟದ ವಹಿವಾಟು ನಡೆಯುತ್ತಿತ್ತು. ಆದರೆ ಈ ರಾಜ್ಯಗಳಲ್ಲಿ ಲಾಕ್‌ಡೌನ್‌ ನಿರ್ಬಂಧಗಳು ಜಾರಿಯಲ್ಲಿವೆ. ಎರಡರಿಂದ ಮೂರು ರಾಜ್ಯಗಳಲ್ಲಿ ಮಾತ್ರ ಮಳಿಗೆಗಳನ್ನು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ತೆರೆಯಲು ಅವಕಾಶವಿದೆ. ಈ ಅವಧಿಯು ಚಿನ್ನ ಖರೀದಿಗೆ ಹೇಳಿ ಮಾಡಿಸಿದ ಸಮಯ ಅಲ್ಲ’ ಎಂದು ಕಲ್ಯಾಣ್ ಜ್ಯುವೆಲರ್ಸ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಾಮನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.