ಮದ್ಯ
(ಸಾಂಕೇತಿಕ ಚಿತ್ರ)
ಮುಂಬೈ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮದ್ಯ ಮಾರಾಟವು ಶೇ 8ರಿಂದ 10ರಷ್ಟು ಹೆಚ್ಚಳವಾಗಲಿದ್ದು, ₹5.3 ಲಕ್ಷ ಕೋಟಿ ಆದಾಯವನ್ನು ದೇಶದ ಮದ್ಯ ಮಾರಾಟಗಾರರು ನಿರೀಕ್ಷಿಸುತ್ತಿದ್ದಾರೆ.
ಹಿಂದಿನ ಮೂರು ವರ್ಷಗಳಲ್ಲಿ ಈ ಕ್ಷೇತ್ರ ಶೇ 13ರಷ್ಟು ಬೆಳವಣಿಗೆ ಕಂಡಿದೆ. ಇದನ್ನು ಆಧರಿಸಿ 2025–26ರ ವಹಿವಾಟವನ್ನು ಉದ್ಯಮ ಅಂದಾಜಿಸಿದೆ. ಇದರಿಂದಾಗಿ ಕಾರ್ಯಾಚರಣೆಯ ಲಾಭಾಂಶವು 60ರಿಂದ 80 ಆಧಾರ ಅಂಕಗಳಷ್ಟು (ಬಿಪಿಎಸ್) ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಕ್ರಿಸಿಲ್ ರೇಟಿಂಗ್ಸ್ ತನ್ನ ವರದಿಯಲ್ಲಿ ಹೇಳಿದೆ.
ಮದ್ಯ ಮಾರಾಟ ಉದ್ಯಮದಲ್ಲಿ ಹಾರ್ಡ್ ಲಿಕ್ಕರ್ ಪಾಲು ಶೇ 65ರಿಂದ 70ರಷ್ಟಿದೆ. ಉಳಿದದ್ದು ಬಿಯರ್, ವೈನ್, ದೇಸಿ ಮದ್ಯದ್ದಾಗಿದೆ. ಡಿಸ್ಟಿಲೇಷನ್ ಪ್ರಕ್ರಿಯೆ ಮೂಲಕ ವಿಸ್ಕಿ, ರಮ್, ಬ್ರಾಂಡಿ ಸಹಿತ ಸ್ಪಿರಿಟ್ಸ್‌ಗಳು ತಯಾರಾಗುತ್ತಿವೆ. ಬಿಯರ್ ಮತ್ತು ವೈನ್‌ಗಳು ಹುದುಗುವಿಕೆ ಪ್ರಕ್ರಿಯೆ ಮೂಲಕ ಸಿದ್ಧವಾಗಲಿವೆ.
ದೇಶದಲ್ಲಿ ಪಟ್ಟಣ ಪ್ರದೇಶಗಳು ಹೆಚ್ಚಾಗುತ್ತವೆ. ಇದರಿಂದ ಮದ್ಯ ಸೇವಿಸುವವರ ಸಂಖ್ಯೆಯೂ ಏರುತ್ತಿದೆ. ಇವೆಲ್ಲದರ ಪರಿಣಾಮ ಮಾರಾಟ ಉದ್ಯಮವು ಶೇ 5ರಿಂದ 6ರಷ್ಟು ಹೆಚ್ಚಳವಾಗಲಿದೆ ಎಂದು ಈ ವರದಿ ಹೇಳಿದೆ.
‘ಬೆಲೆಯಲ್ಲಿ ಗಮನಾರ್ಹ ಏರಿಕೆ ಆಗದಿರುವುದು ಮದ್ಯ ಮಾರಾಟ ಮತ್ತು ಅದರಿಂದ ಬರುವ ಆದಾಯವೂ ಹೆಚ್ಚಳವಾಗಿದೆ. 750 ಮಿ.ಲೀ. ಬಾಟಲಿಗೆ ₹1000ಕ್ಕಿಂತ ಹೆಚ್ಚಿನ ಬೆಲೆಯ ವಿಲಾಸಿ ಮದ್ಯಗಳ ಮಾರಾಟದಿಂದ ಶೇ 15ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಇದು ಮದ್ಯದ ಒಟ್ಟು ಆದಾಯದಲ್ಲಿ ಶೇ 38ರಿಂದ 40ರಷ್ಟಿದೆ’ ಎಂದು ಕ್ರಿಸಿಲ್ ರೇಟಿಂಗ್ಸ್‌ನ ನಿರ್ದೇಶಕಿ ಜಯಶ್ರೀ ನಂದಕುಮಾರ್ ತಿಳಿಸಿದ್ದಾರೆ.
ಈ ಮದ್ಯಗಳ ತಯಾರಿಕೆಯಲ್ಲಿ ಪ್ರಮುಖ ಪದಾರ್ಥವಾದ ಬಾರ್ಲೆ ಮತ್ತು ಹೆಚ್ಚುವರಿ ತಟಸ್ಥ ಆಲ್ಕೊಹಾಲ್ ಪ್ರಮಾಣ ಶೇ 60ರಿಂದ 65ರಷ್ಟಿದೆ. ಉಳಿದಂತೆ ಪ್ಯಾಕೇಜಿಂಗ್ ಮತ್ತು ಗಾಜಿನ ಬಾಟಲಿಗೆ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಮದ್ಯಕ್ಕೆ ಬೇಡಿಕೆ ಹೆಚ್ಚಳವಾಗುತ್ತಿದ್ದಂತೆ ಹೆಚ್ಚುವರಿ ತಟಸ್ಥ ಆಲ್ಕೊಹಾಲ್‌ನ ಬೆಲೆಯೂ ಶೇ 2ರಿಂದ 3ರಷ್ಟು ಹೆಚ್ಚಳವಾಗಿದೆ. ಬಾರ್ಲೆ ಬೆಲೆ ಶೇ 3ರಿಂದ 4ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಗಾಜಿನ ಬಾಟಲಿಯ ಬೆಲೆ ತಟಸ್ಥವಾಗಿದೆ.
‘ಕಾರ್ಯಾಚರಣೆಯ ಲಾಭಾಂಶವು ಮದ್ಯದಿಂದ 80ರಿಂದ 100 ಬಿಪಿಎಸ್ ಮತ್ತು ಬಿಯರ್ ಮಾರಾಟದಿಂದ 50ರಿಂದ 70 ಬಿಪಿಎಸ್‌ನಷ್ಟು ಇರಲಿದೆ. ಜತೆಗೆ ಈ ಉದ್ಯಮದಲ್ಲಿ ಬ್ಲೆಂಡೆಡ್‌ನ ಕಾರ್ಯನಿರ್ವಹಣೆಯ ಲಾಭಾಂಶವು 60ರಿಂದ 80 ಬಿಪಿಎಸ್‌ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಕಳೆದ ಎರಡು ವರ್ಷಗಳಿಂದ ಈ ಬೆಳವಣಿಗೆ ಮುಂದುವರಿದಿದೆ’ ಎಂದು ಕ್ರಿಸಿಲ್ ರೇಟಿಂಗ್ಸ್‌ನ ನಿರ್ದೇಶಕ ಕೆ.ವಿ.ಸಜೇಶ್ ಹೇಳಿದ್ದಾರೆ.
‘ಈ ಎಲ್ಲಾ ಬೆಳವಣಿಗೆಯಿಂದ ಮದ್ಯ ತಯಾರಕರು ತಮ್ಮ ಘಟಕಗಳ ವಿಸ್ತರಣೆಯ ಪ್ರಮಾಣವನ್ನು ಶೇ 15ರಿಂದ 20ಕ್ಕೆ ಹೆಚ್ಚಿಸಿದ್ದಾರೆ. ಸರ್ಕಾರದ ನೀತಿಗಳು, ಅಬಕಾರಿ ಸುಂಕದಲ್ಲಿನ ಬದಲಾವಣೆ ಮತ್ತು ರಚನೆ ಹಾಗೂ ಹೂಡಿಕೆಯ ಪ್ರಮಾಣ ಏನಾಗಲಿದೆ ಎಂಬುದನ್ನು ಗಮನಿಸಬೇಕಾಗಿದೆ’ ಎಂದು ಈ ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.