ADVERTISEMENT

ಮ್ಯೂಚುವಲ್‌ ಫಂಡ್‌ ಉದ್ದಿಮೆಯ ರಕ್ಷಣೆಗೆ ಧಾವಿಸಿದ ಆರ್‌ಬಿಐ

ಎಂಎಫ್‌: ₹ 50 ಸಾವಿರ ಕೋಟಿ ನೆರವು

ಪಿಟಿಐ
Published 27 ಏಪ್ರಿಲ್ 2020, 19:30 IST
Last Updated 27 ಏಪ್ರಿಲ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮ್ಯೂಚುವಲ್‌ ಫಂಡ್‌ ಉದ್ದಿಮೆಯ ನೆರವಿಗೆ ಧಾವಿಸಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌, ₹ 50 ಸಾವಿರ ಕೋಟಿ ಮೊತ್ತದ ವಿಶೇಷ ನಗದು ಸೌಲಭ್ಯ ಪ್ರಕಟಿಸಿದೆ.

ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಮ್ಯೂಚುವಲ್‌ ಫಂಡ್‌, ಹೂಡಿಕೆದಾರರಿಗೆ ಪಾವತಿಸಲು ಹಣ ಇಲ್ಲದ ಕಾರಣಕ್ಕೆ ತನ್ನ ಆರು ಸಾಲ ನಿಧಿ (ಡೆಟ್‌ ಫಂಡ್‌) ಯೋಜನೆಗಳನ್ನು ರದ್ದುಪಡಿಸಿದ ಬೆನ್ನಲ್ಲೇ ಆರ್‌ಬಿಐ ಈ ಕ್ರಮ ಕೈಗೊಂಡಿದೆ.

ಕೋವಿಡ್ ಪಿಡುಗು ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಬಂಡವಾಳ (ಷೇರು) ಮಾರುಕಟ್ಟೆಯ ವಹಿವಾಟು ತೀವ್ರ ಏರಿಳಿತ ಕಾಣುತ್ತಿದೆ. ಇದರಿಂದಾಗಿ ಮ್ಯೂಚುವಲ್‌ ಫಂಡ್‌ಗಳಲ್ಲಿ ನಗದು ಕೊರತೆ ಎದುರಾಗಿದೆ. ಅನೇಕ ಹೂಡಿಕೆದಾರರು ಹಣ ಹಿಂದೆ ಪಡೆಯಲು ಧಾವಂತ ತೋರಿದ್ದರಿಂದ ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ತನ್ನ 6 ಯೋಜನೆಗಳನ್ನು ರದ್ದುಪಡಿಸಿದೆ.

ADVERTISEMENT

ಹೆಚ್ಚು ನಷ್ಟ ಸಾಧ್ಯತೆ ಇರುವ ಸಾಲ ನಿಧಿ ವಲಯದ ಮ್ಯೂಚುವಲ್‌ ಫಂಡ್‌ಗಳಿಗೆ ಮಾತ್ರ ನಗದು ಲಭ್ಯತೆ ಸಮಸ್ಯೆ ಸೀಮಿತಗೊಂಡಿದೆ. ಉಳಿದಂತೆ ಒಟ್ಟಾರೆ ಮ್ಯೂಚುವಲ್‌ ಫಂಡ್ ಉದ್ದಿಮೆಯಲ್ಲಿ ಅಗತ್ಯ ಪ್ರಮಾಣದ ನಗದು ಲಭ್ಯತೆ ಇದೆ.

ಹಣ ಹಿಂದೆ ಪಡೆಯುವುದರ ಸಂಬಂಧ ಮ್ಯೂಚುವಲ್‌ ಫಂಡ್‌ಗಳ ಮೇಲಿನ ಒತ್ತಡ ತಗ್ಗಿಸಲು ₹ 50 ಸಾವಿರ ಕೋಟಿ ಮೊತ್ತದ ವಿಶೇಷ ನಗದು ಸೌಲಭ್ಯ (ಎಸ್‌ಎಲ್‌ಎಫ್‌–ಎಂಎಫ್‌) ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಈ ‘ಎಸ್‌ಎಲ್‌ಎಫ್‌–ಎಂಎಫ್‌’ ಮೂಲಕ ಆರ್‌ಬಿಐ, ಅಗ್ಗದ ಸ್ಥಿರ ರೆಪೊ ದರದಡಿ 90 ದಿನಗಳವರೆಗೆ ಬ್ಯಾಂಕ್‌ಗಳಿಗೆ ಹಣಕಾಸು ಸೌಲಭ್ಯ ಕಲ್ಪಿಸಲಿದೆ. ಈ ನೆರವನ್ನು ಬ್ಯಾಂಕ್‌ಗಳು ಮ್ಯೂಚುವಲ್‌ ಫಂಡ್‌ಗಳ ನಗದು ಸಮಸ್ಯೆ ನಿವಾರಿಸುವ ಉದ್ದೇಶಕ್ಕೆ ಮಾತ್ರ ಸಾಲ ನೀಡಲು ಬಳಸಿಕೊಳ್ಳಬೇಕು ಎಂದು ನಿಬಂಧನೆ ವಿಧಿಸಿದೆ. ‘ಎಂಎಫ್‌’ಗಳ ಹೂಡಿಕೆ ದರ್ಜೆಯ ಕಾರ್ಪೊರೇಟ್ ಬಾಂಡ್‌, ಕಮರ್ಷಿಯಲ್‌ ಪೇಪರ್‌, ಸಾಲಪತ್ರ ಮತ್ತು ಠೇವಣಿ ಪ್ರಮಾಣಪತ್ರಗಳನ್ನು ಅಡಮಾನ ಇರಿಸಿಕೊಂಡು ಸಾಲ ನೀಡಬೇಕು ಎಂದು ಆರ್‌ಬಿಐ ಸೂಚಿಸಿದೆ.

ಇದೊಂದು ಬದಲಾವಣೆಗೆ ಮುಕ್ತವಾಗಿರುವ ನೆರವು ಆಗಿರಲಿದೆ. ಮಾರುಕಟ್ಟೆಯ ಪರಿಸ್ಥಿತಿ ಆಧರಿಸಿ ನೆರವಿನ ಕಾಲಮಿತಿ ಮತ್ತು ಮೊತ್ತ ಬದಲಾಗಲಿದೆ.

‘ಕೋವಿಡ್‌–19’ರ ಆರ್ಥಿಕ ದುಷ್ಪರಿಣಾಮಗಳಿಗೆ ಮಿತಿ ಹಾಕಲು ಮತ್ತು ಹಣಕಾಸು ಸ್ಥಿರತೆ ಕಾಯ್ದುಕೊಳ್ಳಲು ಇನ್ನಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧ ಇರುವುದಾಗಿಯೂ ಕೇಂದ್ರೀಯ ಬ್ಯಾಂಕ್‌ ಭರವಸೆ ನೀಡಿದೆ.

2008ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟು ಸಂಭವಿಸಿದಾಗ ಮತ್ತು 2013ರಲ್ಲಿ ‘ಎಂಎಫ್‌’ ಉದ್ದಿಮೆಯ ನಗದು ಅಗತ್ಯ ಪೂರೈಸಲು ಆರ್‌ಬಿಐ ಇದೇ ಬಗೆಯಲ್ಲಿ ನೆರವು ಕಲ್ಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.