
ನವದೆಹಲಿ: ಬ್ಯಾಂಕ್ ಸಾಲದ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ(ಇ.ಡಿ) ಶುಕ್ರವಾರ ದೆಹಲಿಯಲ್ಲಿ ಉದ್ಯಮಿ ಅನಿಲ್ ಅಂಬಾನಿ ಅವರ ಪುತ್ರ ಜಯ್ ಅನ್ಮೋಲ್ ಅಂಬಾನಿ ಅವರನ್ನು ವಿಚಾರಣೆಗೆ ಒಳಪಡಿಸಿತು.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ 34 ವರ್ಷದ ಜಯ್ ಅನ್ಮೋಲ್ ಅವರ ಹೇಳಿಕೆ ದಾಖಲಿಸಿಕೊಂಡಿರುವ ಇ.ಡಿ. ಅಧಿಕಾರಿಗಳು, ನಾಳೆಯೂ ವಿಚಾರಣೆಯನ್ನು ಮುಂದುವರೆಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ ಯೆಸ್ ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದಂತೆ ಇ.ಡಿ.ತನಿಖೆ ನಡೆಸುತ್ತಿದೆ. 2017ರ ಮಾರ್ಚ್ 31ರವರೆಗೆ ರಿಲಯನ್ಸ್ ಧೀರೂಭಾಯ್ ಅಂಬಾನಿ ಸಮೂಹಕ್ಕೆ(ಎಡಿಎಜಿ) ₹6,000 ಕೋಟಿ ಹಣ ಬ್ಯಾಂಕ್‌ನಿಂದ ವರ್ಗಾವಣೆ ಆಗಿತ್ತು. ಈ ಮೊತ್ತವು ಒಂದೇ ವರ್ಷದಲ್ಲಿ ( 2028 ಮಾರ್ಚ್ 31) ದ್ವಿಗುಣಗೊಂಡು ₹13,000 ಕೋಟಿಯಷ್ಟಾಗಿತ್ತು.
ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್‌ಎಚ್‌ಎಫ್‌ಎಲ್) ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ ಕಂಪನಿಗಳ ಹೆಸರಲ್ಲಿ ಹೂಡಿಕೆ ನಡೆದಿತ್ತು.
ಈ ಬೃಹತ್ ಮೊತ್ತದ ಹೂಡಿಕೆಗಳು ಅನುತ್ಪಾದಕ ಹೂಡಿಕೆಗಳಾಗಿ(ಎನ್‌ಪಿಐ) ಪರಿವರ್ತನೆ ಆಗಿದ್ದವು. ಕಂಪನಿ ಮತ್ತು ಬ್ಯಾಂಕ್ ನಡುವಿನ ಈ ವ್ಯವಹಾರದಿಂದ ಯೆಸ್ ಬ್ಯಾಂಕ್ ₹ 3,300 ಕೋಟಿ ನಷ್ಟ ಅನುಭವಿಸಿತ್ತು ಎಂದು ಇ.ಡಿ.ಆರೋಪಿಸಿದೆ.
ರಿಲಯನ್ಸ್ ಕಂಪನಿಗಳ ಸಮೂಹದ ಬ್ಯಾಂಕ್ ಸಾಲದ ವಂಚನೆ ಸಂಬಂಧ ಈಗಾಗಲೇ ಅನಿಲ್ ಅಂಬಾನಿ ಅವರನ್ನೂ ಇ.ಡಿ. ವಿಚಾರಣೆ ನಡೆಸಿದೆ.