ADVERTISEMENT

ಸ್ಮಾರ್ಟ್‌ಫೋನ್‌ ಮಾರಾಟ: ಆ್ಯಪಲ್‌ ಪಾಲು ಶೇ 28ಕ್ಕೆ ಏರಿಕೆ

ಪಿಟಿಐ
Published 2 ಫೆಬ್ರುವರಿ 2026, 23:42 IST
Last Updated 2 ಫೆಬ್ರುವರಿ 2026, 23:42 IST
ಆ್ಯಪಲ್‌
ಆ್ಯಪಲ್‌   

ನವದೆಹಲಿ: ‘ದೇಶದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಆ್ಯಪಲ್‌ ಕಂಪನಿಯ ಪಾಲು ವರಮಾನ ಮೌಲ್ಯದ ಲೆಕ್ಕದಲ್ಲಿ ಶೇ 28ಕ್ಕೆ ಏರಿಕೆಯಾಗಿದೆ’ ಎಂದು ಕೌಂಟರ್‌ಪಾಯಿಂಟ್‌ ರಿಸರ್ಚ್‌ ವರದಿ ಹೇಳಿದೆ.

2024ರಲ್ಲಿ ಕಂಪನಿಯ ಈ ಪಾಲು ಶೇ 23ರಷ್ಟಿತ್ತು. ‘ಐಫೋನ್ 16’ ಮಾರಾಟದಲ್ಲಿನ ಯಶಸ್ಸು, ಫೋನ್‌ ಖರೀದಿಗೆ ಕಂಪನಿ ನೀಡುವ ಹಣಕಾಸಿನ ನೆರವು, ಕೊಡುಗೆಗಳು ಮಾರುಕಟ್ಟೆ ಪಾಲು ಹೆಚ್ಚಳಕ್ಕೆ ಕಾರಣವಾಗಿವೆ ಎಂದು ತಿಳಿಸಿದೆ.

ಗ್ರಾಹಕರು ಉನ್ನತ ಶ್ರೇಣಿಯ (ಪ್ರೀಮಿಯಂ) ಫೋನ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಆ್ಯಪಲ್‌ ಸ್ಮಾರ್ಟ್‌ಫೋನ್‌ಗಳ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.

ADVERTISEMENT

ಜಗತ್ತಿನಲ್ಲಿ ಭಾರತವು ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಆಗಿದ್ದು, ದೇಶದ ಖರೀದಿದಾರರು ಹೆಚ್ಚು ದುಬಾರಿ ಮಾದರಿಯ ಮೊಬೈಲ್‌ಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಕಳೆದ ವರ್ಷ ರಿಟೇಲ್‌ ಮಾರುಕಟ್ಟೆಯಲ್ಲಿ ಮಾರಾಟವಾದ ಒಟ್ಟು ಸ್ಮಾರ್ಟ್‌ಫೋನ್‌ಗಳ ಪೈಕಿ ಶೇ 40ರಷ್ಟಕ್ಕೆ ಹಣಕಾಸು ನೆರವು ಒದಗಿಸಲಾಗಿದೆ. ₹30 ಸಾವಿರಕ್ಕಿಂತ ಹೆಚ್ಚಿನ ಬೆಲೆಯ ಪ್ರೀಮಿಯಂ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ, ಮೂರನೇ ಎರಡರಷ್ಟು ಖರೀದಿಗಳಿಗೆ ಹಣಕಾಸಿನ ನೆರವು ಒದಗಿಸಲಾಗಿದೆ. ಇದು ಗ್ರಾಹಕರು ಉನ್ನತ ದರ್ಜೆಯ ಸ್ಮಾರ್ಟ್‌ಫೋನ್‌ ಖರೀದಿಸುವ ಸಂದರ್ಭದಲ್ಲಿ ಇಎಂಐ ಆಯ್ಕೆ ಹೆಚ್ಚುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಿದೆ.

ಸ್ಯಾಮ್ಸಂಗ್‌ ಮತ್ತು ಮೋಟೊರೊಲಾ ಸಹ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದಿವೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.