ADVERTISEMENT

ಹೊಗೆಸೊಪ್ಪು: ₹371 ಕೋಟಿ ವಹಿವಾಟು

ಬಿ.ಪಿ.ಗಂಗೇಶ್‌
Published 6 ಏಪ್ರಿಲ್ 2025, 23:35 IST
Last Updated 6 ಏಪ್ರಿಲ್ 2025, 23:35 IST
ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಬೇಲುಗಳನ್ನು ಜೋಡಿಸಲಾಗಿದೆ
ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಬೇಲುಗಳನ್ನು ಜೋಡಿಸಲಾಗಿದೆ   

ಕೊಣನೂರು (ಹಾಸನ ಜಿಲ್ಲೆ): ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 2024-25ನೇ ಸಾಲಿನ ಹೊಗೆಸೊಪ್ಪು ಮಾರಾಟ ಮುಕ್ತಾಯಗೊಂಡಿದ್ದು, ಒಟ್ಟು ₹371.43 ಕೋಟಿ ವಹಿವಾಟು ನಡೆದಿದೆ. ‌ಕೆ.ಜಿ.ಗೆ ಗರಿಷ್ಠ ₹365 ಮತ್ತು ಕನಿಷ್ಠ ₹35 ಬೆಲೆ ದೊರೆತಿದೆ.

ಮಾರುಕಟ್ಟೆಯ ಫ್ಲಾಟ್‌ಫಾರಂ 7ರಲ್ಲಿ 133 ದಿನಗಳ ತಂಬಾಕು ಹರಾಜು ಪ್ರಕ್ರಿಯೆ ನಡೆದಿದ್ದು, ಒಟ್ಟು 7,970 ಟನ್‌ ಹೊಗೆಸೊಪ್ಪು ಮಾರಾಟವಾಗಿದೆ. ಪ್ರತಿ ಕೆ.ಜಿ.ಗೆ ಗರಿಷ್ಠ ₹365 ಮತ್ತು ಕನಿಷ್ಠ ₹50 ಬೆಲೆ ದೊರೆತಿದ್ದು, ಸರಾಸರಿ ಬೆಲೆ ₹254.95 ಸಿಕ್ಕಿದೆ. ಒಟ್ಟು ವಹಿವಾಟು ₹203.31 ಕೋಟಿ ದಾಖಲಾಗಿದೆ. 16 ಕಂಪನಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.

ಫ್ಲಾಟ್‌ಫಾರಂ 63ರಲ್ಲಿ 126 ದಿನಗಳು ಹರಾಜು ಪ್ರಕ್ರಿಯೆ ನಡೆದಿದ್ದು, 6,520 ಟನ್‌ ಹೊಗೆಸೊಪ್ಪು ಮಾರಾಟವಾಗಿದೆ. ಉತ್ತಮ ದರ್ಜೆಯ ತಂಬಾಕು ಕೆ.ಜಿ.ಗೆ ಗರಿಷ್ಠ ₹337 ಮತ್ತು ಕಡಿಮೆ ದರ್ಜೆಯ ತಂಬಾಕಿಗೆ ಕನಿಷ್ಠ ₹35 ದರ ಸಿಕ್ಕಿದ್ದು, ₹257.56 ಸರಾಸರಿ ಬೆಲೆ ಸಿಕ್ಕಿದೆ. ಒಟ್ಟು 13 ಕಂಪನಿಗಳು ಭಾಗವಹಿಸಿದ್ದು, ₹168.12 ಕೋಟಿ ವಹಿವಾಟು ನಡೆದಿದೆ.

ADVERTISEMENT

ನೆರೆಯ ಆಂಧ್ರಪ್ರದೇಶದಲ್ಲಿ ಕೆ.ಜಿ.ಗೆ ₹400 ಬೆಲೆ ಸಿಕ್ಕಿದ್ದರಿಂದ ರಾಜ್ಯದ ತಂಬಾಕು ಬೆಳೆಗಾರರು ಉತ್ತಮ ಬೆಲೆಯ ಆಶಾಭಾವ ಹೊಂದಿದ್ದರು. ಆದರೆ, ನಿರಾಸೆ ಅನುಭವಿಸಿದರು.

‘ಆರಂಭದಲ್ಲಿ ಕಡಿಮೆ ದರ್ಜೆಯ ತಂಬಾಕು ಮತ್ತು ಹುಡಿಯನ್ನು ಮಾರುಕಟ್ಟೆಯಲ್ಲೇ ಕೊಳ್ಳುವುದಾಗಿ ಹೇಳಿದ್ದ ಅಧಿಕಾರಿಗಳು, ಕೊನೆಯ ದಿನಗಳಲ್ಲಿ ಕಡಿಮೆ ಬೆಲೆಗೆ ಖರೀದಿಸಿದ್ದು ನಷ್ಟ ಉಂಟು ಮಾಡಿದೆ’ ಎಂದು ಬೆಳೆಗಾರರು ತಿಳಿಸಿದ್ದಾರೆ.

ಕಳೆದ ವರ್ಷ ತಂಬಾಕು ಹುಡಿಯನ್ನು ಕೆ.ಜಿ.ಗೆ ₹100 ಹೆಚ್ಚು ಬೆಲೆಗೆ ಖರೀದಿಸಲಾಗಿತ್ತು.

ಕಳೆದ ವರ್ಷ ರಾಮನಾಥಪುರದ ಮಾರುಕಟ್ಟೆಯಲ್ಲಿ ಕೆ.ಜಿ. ತಂಬಾಕಿಗೆ ಗರಿಷ್ಠ ₹290 ಮತ್ತು ಕನಿಷ್ಠ ₹200 ಬೆಲೆ ಸಿಕ್ಕಿದ್ದು, ಸರಾಸರಿ ₹255 ಬೆಲೆ ದೊರೆತಿತ್ತು. ಒಟ್ಟು ₹374.72 ಕೋಟಿ ವಹಿವಾಟು ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.