ADVERTISEMENT

ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ಪರಿಸರ ಸಚಿವಾಲಯ ಅನುಮತಿ: ಬಲ್ಡೋಟಾ

ಕೊಪ್ಪಳದಲ್ಲಿ ಈ ವರ್ಷವೇ ಯೋಜನೆ ಆರಂಭ: ಬಲ್ಡೋಟಾ ಹೇಳಿಕೆ

ಪಿಟಿಐ
Published 11 ಏಪ್ರಿಲ್ 2025, 0:33 IST
Last Updated 11 ಏಪ್ರಿಲ್ 2025, 0:33 IST
<div class="paragraphs"><p>ಬಲ್ಡೋಟಾ ಕಂಪನಿ ಲೋಗೊ</p></div>

ಬಲ್ಡೋಟಾ ಕಂಪನಿ ಲೋಗೊ

   

ಚಿತ್ರ: ಎಕ್ಸ್‌

ನವದೆಹಲಿ: ಕರ್ನಾಟಕದ ಕೊಪ್ಪಳದಲ್ಲಿ ಇಂಟಿಗ್ರೇಟೆಡ್‌ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅನುಮತಿ ನೀಡಿದೆ ಎಂದು ಬಲ್ಡೋಟಾ ಸಮೂಹ ತಿಳಿಸಿದೆ.

ADVERTISEMENT

ಉಕ್ಕು ಕಾರ್ಖಾನೆ ಸ್ಥಾಪನೆಗೆ ₹54 ಸಾವಿರ ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಒಟ್ಟು 10.5 ದಶಲಕ್ಷ ಟನ್ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ತಿಳಿಸಿದೆ. 

ಬಲ್ಡೋಟಾ ಸಮೂಹವು ನವೀಕರಿಸಬಹುದಾದ ಇಂಧನ (ಪವನ ಮತ್ತು ಸೌರ), ಹಡಗು, ಅನಿಲ ಮತ್ತು ಗಣಿಗಾರಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ.

‘ಕಾರ್ಖಾನೆಯಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಮೌಲ್ಯಮಾಪನ ನಡೆಸಿದ ಬಳಿಕವೇ ಸಚಿವಾಲಯವು ಮೊದಲ ಹಂತದಲ್ಲಿ 3.7 ದಶಲಕ್ಷ ಟನ್‌ ಉತ್ಪಾದನೆಗೆ ಅನುಮತಿ ನೀಡಿದೆ. ಪ್ರಸಕ್ತ ವರ್ಷದಲ್ಲಿಯೇ ಯೋಜನೆಯ ಜಾರಿಗೆ ನಿರ್ಧರಿಸಲಾಗಿದೆ’ ಎಂದು ಕಂಪನಿಯ ಉಪಾಧ್ಯಕ್ಷ ನಾಗರಾಜ್‌ ಎನ್‌.ಬಿ. ತಿಳಿಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಉಕ್ಕು ಉತ್ಪಾದನೆಯಲ್ಲಿ ನಿಗದಿತ ಗುರಿ ಸಾಧನೆಗೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. 

ಪ್ರಸ್ತುತ ಭಾರತವು 180 ದಶಲಕ್ಷ ಟನ್‌ನಷ್ಟು ಉಕ್ಕು ಉತ್ಪಾದನಾ ಸಾಮರ್ಥ್ಯ ಹೊಂದಿದೆ. 2030ರ ವೇಳೆಗೆ ಇದನ್ನು 300 ದಶಲಕ್ಷ ಟನ್‌ಗೆ ವಿಸ್ತರಿಸುವ ಗುರಿ ಹೊಂದಿದೆ. ಇದಕ್ಕೆ ಸಮೂಹವು 10.5 ದಶಲಕ್ಷ ಟನ್‌ ಕೊಡುಗೆ ನೀಡಲಿದೆ ಎಂದು ವಿವರಿಸಿದ್ದಾರೆ.

ಉದ್ದೇಶಿತ ಈ ಯೋಜನೆಯಡಿ 296 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್‌ ಉತ್ಪಾದನಾ ಕಾರ್ಖಾನೆ ವಿಸ್ತರಿಸುವ ಗುರಿಯನ್ನೂ ಹೊಂದಲಾಗಿದೆ ಎಂದು ಹೇಳಿದ್ದಾರೆ. 

ಕಾರ್ಖಾನೆ ಸ್ಥಾಪನೆಯಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಾಗಾಗಿ, ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಕೆಲವು ಸ್ಥಳೀಯ ಸಂಘ–ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ ಎಂದು ತಿಳಿಸಿದ್ದಾರೆ.

ಹಾಗಾಗಿಯೇ, ಯೋಜನೆಯ ಜಾರಿಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಮೌಲ್ಯಮಾಪನ ನಡೆಸಲಾಗಿದೆ. ಯೋಜನೆಯ ವಿನ್ಯಾಸ, ಸುಸ್ಥಿರತೆ, ಪರಿಸರ ಮಾಲಿನ್ಯ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಕಂಪನಿಯಿಂದ ಕೈಗೊಳ್ಳಲಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮೌಲ್ಯಮಾಪನ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.