ADVERTISEMENT

ಇರಾಕ್, ಇರಾನ್‌ಗೆ ಬಸರಕೋಡದ ಬಾಳೆ: ಅತಿವೃಷ್ಟಿ ಸಮಯದಲ್ಲೂ ಲಾಭ ಕಂಡುಕೊಂಡ ರೈತ

ಪ್ರಜಾವಾಣಿ ವಿಶೇಷ
Published 27 ಅಕ್ಟೋಬರ್ 2025, 23:30 IST
Last Updated 27 ಅಕ್ಟೋಬರ್ 2025, 23:30 IST
ಮುದ್ದೇಬಿಹಾಳ ತಾಲ್ಲೂಕು ಬಸರಕೋಡದ ಪ್ರಗತಿಪರ ರೈತ ಹೇಮರೆಡ್ಡಿ ಮೇಟಿ ಅವರ ತೋಟದಲ್ಲಿ ಬೆಳೆದಿರುವ ಜಿ– 9 ಬಾಳೆ
ಮುದ್ದೇಬಿಹಾಳ ತಾಲ್ಲೂಕು ಬಸರಕೋಡದ ಪ್ರಗತಿಪರ ರೈತ ಹೇಮರೆಡ್ಡಿ ಮೇಟಿ ಅವರ ತೋಟದಲ್ಲಿ ಬೆಳೆದಿರುವ ಜಿ– 9 ಬಾಳೆ   

ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಬಸರಕೋಡ ಗ್ರಾಮದ ರೈತ ಹೇಮರೆಡ್ಡಿ ಬ.ಮೇಟಿ ಅವರು ಬೆಳೆದ ಬಾಳೆ (ಜಿ– 9) ಬೆಳೆಗೆ ಹೊರದೇಶದಲ್ಲಿ ಮಾರುಕಟ್ಟೆ ಲಭಿಸಿದೆ.

ರೈತ ಹೇಮರೆಡ್ಡಿ ಬ.ಮೇಟಿ ಬಾಳೆಯನ್ನು ಇರಾಕ್, ಇರಾನ್ ದೇಶಗಳಿಗೆ ರಫ್ತು ಮಾಡಲು ಮುಂದಾಗಿದ್ದಾರೆ. 20 ಎಕರೆ ಜಮೀನಿನಲ್ಲಿ ಬೆಳೆದಿರುವ ಬಾಳೆ ಭಾಗಶಃ ಕಟಾವಿಗೆ ಬಂದಿದೆ. ಅವರ ಪುತ್ರ ಬಾಪುಗೌಡ ಮೇಟಿ ವಿದೇಶಿ ಮಾರುಕಟ್ಟೆಯ ಸಂಪರ್ಕ ಸಾಧಿಸಿದ್ದಾರೆ. 

‘ಮಧ್ಯಪ್ರದೇಶ, ಗುಜರಾತ್‌ದಿಂದ ಸಸಿಗಳನ್ನು ತರಿಸಿಕೊಂಡಿದ್ದೆವು. ಸ್ಥಳೀಯ ಮಾರುಕಟ್ಟೆಯಲ್ಲಿ ಕೆ.ಜಿಗೆ ₹3ರಿಂದ ₹4ಕ್ಕೆ ಕೇಳುತ್ತಾರೆ. ಇಷ್ಟು ಕಡಿಮೆಗೆ ನೀಡಿದರೆ ನಷ್ಟ ಖಂಡಿತ. ಎಕರೆಗೆ ತಲಾ ₹1.15 ಲಕ್ಷದಂತೆ ಖರ್ಚು ಮಾಡಿದ್ದು, 20 ಎಕರೆಗೆ 1 ಸಾವಿರ ಟನ್ ಬಾಳೆ ಬರುವ ನಿರೀಕ್ಷೆ ಇದೆ’ ಎಂದು ರೈತ ಹೇಮರೆಡ್ಡಿ ಮೇಟಿ ತಿಳಿಸಿದರು.

ADVERTISEMENT

‘ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬೆಳೆ ತಲುಪಿಸಲು ಮೀರಜ್‌ನ ಚಾಂದ್‌ ಫ್ರೂಟ್ಸ್‌ ಅವರನ್ನು ಸಂಪರ್ಕಿಸಲಾಗಿತ್ತು. ಅವರು ಖರೀದಿಗೆ ಒಪ್ಪಿದರು. ಕಂಟೇನರ್‌ಗಳಲ್ಲಿ ಬಾಳೆ
ಕಾಯಿಗಳನ್ನು ಸಂಗ್ರಹಿಸಿ ಹಡಗುಗಳ ಮೂಲಕ ಇರಾಕ್, ಇರಾನ್‌ಗೆ ಕಳುಹಿಸುತ್ತಿದ್ದೇವೆ. ಕೆ.ಜಿಗೆ ₹13ರಂತೆ ಈವರೆಗೆ 35 ಟನ್‌ ಬಾಳೆಕಾಯಿ ಕಳುಹಿಸಲಾಗಿದೆ’ ಎಂದು ತಿಳಿಸಿದರು. 

ಪಶ್ಚಿಮ ಬಂಗಾಳದ ಕಾರ್ಮಿಕರು: ಬಾಳೆಗೊನೆಯನ್ನು ಕತ್ತರಿಸಿ, ಅದು ಕೆಡದಂತೆ ವೈಜ್ಞಾನಿಕ ಕ್ರಮದಲ್ಲಿ ಪ್ಯಾಕಿಂಗ್ ಮಾಡಲು ಪಶ್ಚಿಮ ಬಂಗಾಳದ 25 ಕಾರ್ಮಿಕರು ನಾಲ್ಕು ದಿನಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

‘ಗ್ರಾಮದ ರೈತರೊಬ್ಬರು ಬೆಳೆದಿರುವ ಬಾಳೆ ಅನ್ಯ ದೇಶಕ್ಕೆ ಹೋಗುತ್ತಿದೆ. ನಮ್ಮಲ್ಲೂ ಉತ್ಕೃಷ್ಟ ದರ್ಜೆಯ ಬಾಳೆ ಕೃಷಿ ನಡೆದಿರುವುದು ಹೆಮ್ಮೆಯ ಸಂಗತಿ’ ಎಂದು ಸ್ಥಳೀಯ ರೈತರು ಹೇಳುತ್ತಾರೆ. 

ಗುಣಮಟ್ಟದ ಬಾಳೆ

‘ದೇವರ ನಿಂಬರಗಿಯ ಯಂಕಣ್ಣ ಬಿರಾದಾರ ಅವರು ಬಸರಕೋಡದಲ್ಲಿ ಗುಣಮಟ್ಟದ ಬಾಳೆ ಇದೆ ಎಂದು ತಿಳಿಸಿದ್ದರು. ಹೇಮರೆಡ್ಡಿ ಅವರು ಬೆಳೆದ ಬಾಳೆ ರಫ್ತುಮಾಡಲು ಯೋಗ್ಯವಾಗಿದೆ. ಖರೀದಿ ಒಪ್ಪಂದ ಆಗಿದೆ. ಈ ಬಾಳೆಯು ನ. 1ರಂದು ಗುಣಮಟ್ಟದ ಪ್ಯಾಕಿಂಗ್‌ನಲ್ಲಿ ಇರಾನ್ ಇರಾಕ್ ಸೌದಿ ಅರೇಬಿಯಾಕ್ಕೆ ರವಾನೆಯಾಗಲಿದೆ’ ಎನ್ನುತ್ತಾರೆ ಬಾಳೆ ಖರೀದಿದಾರ ಅಬೂಬಕರ ಖರೋಷಿ. 

ಮುದ್ದೇಬಿಹಾಳ ತಾಲ್ಲೂಕು ಬಸರಕೋಡದ ರೈತ ಹೇಮರೆಡ್ಡಿ ಮೇಟಿ ಅವರ ತೋಟದಲ್ಲಿ ಬೆಳೆದಿರುವ ಬಾಳೆ ಗೊನೆಗಳನ್ನು ಇರಾಕ್ ಇರಾನ್ ದೇಶಕ್ಕೆ ರಫ್ತುಮಾಡಲು ಪ್ಯಾಕಿಂಗ್‌ ಮಾಡಲಾಯಿತು
ಮುದ್ದೇಬಿಹಾಳ ತಾಲ್ಲೂಕು ಬಸರಕೋಡದ ರೈತ ಹೇಮರೆಡ್ಡಿ ಮೇಟಿ ಅವರ ತೋಟದಲ್ಲಿ ಬೆಳೆದ ಬಾಳೆಯನ್ನು ಹೊರದೇಶಕ್ಕೆ ಕಳುಹಿಸಲು ಪ್ಯಾಕಿಂಗ್‌ ಮಾಡಿರುವುದು
ಮುದ್ದೇಬಿಹಾಳ ತಾಲ್ಲೂಕು ಬಸರಕೋಡದ ರೈತ ಹೇಮರೆಡ್ಡಿ ಮೇಟಿ ಅವರ ತೋಟದಲ್ಲಿ ಬೆಳೆದಿರುವ ಬಾಳೆ ಗೊನೆಗಳನ್ನು ಇರಾಕ್ ಇರಾನ್ ದೇಶಕ್ಕೆ ರಫ್ತುಮಾಡಲು ಪ್ಯಾಕಿಂಗ್‌ ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.