ADVERTISEMENT

ಬ್ಯಾಂಕ್ ಸಾಲ ನೀಡಿಕೆ ಶೇ 6.63, ಠೇವಣಿ ಸಂಗ್ರಹ ಶೇ 12.06ರಷ್ಟು ಹೆಚ್ಚಳ

ಪಿಟಿಐ
Published 14 ಮಾರ್ಚ್ 2021, 12:52 IST
Last Updated 14 ಮಾರ್ಚ್ 2021, 12:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಬ್ಯಾಂಕ್‌ಗಳು ನೀಡಿರುವ ಸಾಲದ ಮೊತ್ತ ಹಾಗೂ ಸಂಗ್ರಹಿಸಿರುವ ಠೇವಣಿ ಮೊತ್ತವು ಫೆಬ್ರುವರಿ 26ಕ್ಕೆ ಕೊನೆಗೊಂಡ 15 ದಿನಗಳ ಅವಧಿಯಲ್ಲಿ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಮಾಹಿತಿ ನೀಡಿದೆ.

ಈ 15 ದಿನಗಳ ಅವಧಿಯಲ್ಲಿ ಬ್ಯಾಂಕ್‌ಗಳು ನೀಡಿರುವ ಸಾಲದ ಪ್ರಮಾಣ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 6.63ರಷ್ಟು ಹೆಚ್ಚಾಗಿ ₹ 107.75 ಲಕ್ಷ ಕೋಟಿಗಳಿಗೆ ತಲುಪಿದೆ. ಠೇವಣಿ ಸಂಗ್ರಹವು ಶೇ 12.06ರಷ್ಟು ಹೆಚ್ಚಾಗಿದ್ದು ₹ 149.34 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

2020ರ ಫೆಬ್ರುವರಿ 28ಕ್ಕೆ ಕೊನೆಗೊಂಡ 15 ದಿನಗಳ ಅವಧಿಯಲ್ಲಿ ಬ್ಯಾಂಕ್‌ ಸಾಲ ₹ 101.05 ಲಕ್ಷ ಕೋಟಿ ಮತ್ತು ಠೇವಣಿ ₹ 133.26 ಲಕ್ಷ ಕೋಟಿಗಳಷ್ಟಿತ್ತು ಎಂದು ಆರ್‌ಬಿಐನಲ್ಲಿ ಮಾಹಿತಿ ಇದೆ.

ADVERTISEMENT

2021ರ ಫೆಬ್ರುವರಿ 12ಕ್ಕೆ ಕೊನೆಗೊಂಡ 15 ದಿನಗಳ ಅವಧಿಯಲ್ಲಿ ಬ್ಯಾಂಕ್‌ಗಳು ಸಾಲ ನೀಡಿದ ಪ್ರಮಾಣ ಶೇ 6.58ರಷ್ಟು ಹೆಚ್ಚಾಗಿ ₹ 107.04 ಲಕ್ಷ ಕೋಟಿಗಳಿಗೆ ಹಾಗೂ ಠೇವಣಿ ಶೇ 11.75ರಷ್ಟು ಹೆಚ್ಚಾಗಿ ₹ 147.81 ಲಕ್ಷ ಕೋಟಿಗಳಿಗೆ ಏರಿಕೆ ಕಂಡಿತ್ತು.

ಹಿಂದಿನ ಅವಧಿಗೆ ಹೋಲಿಸಿದರೆ ಫೆಬ್ರುವರಿ 26ಕ್ಕೆ ಕೊನೆಗೊಂಡ 15 ದಿನಗಳ ಅವಧಿಯಲ್ಲಿ ಬ್ಯಾಂಕ್‌ ಸಾಲ ನೀಡಿಕೆಯ ಬೆಳವಣಿಗೆಯು ಸ್ಥಿರವಾಗಿದ್ದು ಕೋವಿಡ್‌–19ಕ್ಕೂ ಮುಂಚಿನ ತಿಂಗಳುಗಳಲ್ಲಿ ಇದ್ದ ಮಟ್ಟಕ್ಕೆ ಮರಳಿದೆ. 2020ರ ಏಪ್ರಿಲ್‌ನಲ್ಲಿ ಸಾಲ ನೀಡಿಕೆಯ ಬೆಳವಣಿಗೆ ದರವು ಶೇ 6.5ರಿಂದ ಶೇ 7.2ರ ಆಸುಪಾಸಿನಲ್ಲಿತ್ತು ಎಂದು ಕೇರ್ ರೇಟಿಂಗ್ಸ್‌ ತನ್ನ ವರದಿಯಲ್ಲಿ ತಿಳಿಸಿದೆ.

ಸಣ್ಣ ಸಾಲ ನೀಡಿಕೆಯು ಹೆಚ್ಚಾಗುತ್ತಿರುವುದರಿಂದ ಬ್ಯಾಂಕ್‌ಗಳು ನೀಡಿರುವ ಒಟ್ಟಾರೆ ಸಾಲದ ಮೊತ್ತದಲ್ಲಿ ಏರಿಕೆ ಕಂಡುಬರುತ್ತಿದೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.