ADVERTISEMENT

ರಿಲಯನ್ಸ್‌ ಷೇರು ಗಳಿಕೆ: ಷೇರುಪೇಟೆ ವಹಿವಾಟು ಚೇತರಿಕೆ

ಪಿಟಿಐ
Published 2 ಜೂನ್ 2022, 12:57 IST
Last Updated 2 ಜೂನ್ 2022, 12:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳು ಎರಡು ದಿನಗಳ ನಕಾರಾತ್ಮಕ ಚಲನೆಯಿಂದ ಹೊರಬಂದು ಗುರುವಾರ ವಹಿವಾಟು ನಡೆಸಿದವು. ಕಚ್ಚಾ ತೈಲ ದರ ಇಳಿಕೆ ಹಾಗೂ ರಿಲಯನ್ಸ್ ಇಂಡಸ್ಟ್ರಿಸ್ ಷೇರು ಮೌಲ್ಯ ಹೆಚ್ಚಳದಿಂದಾಗಿ ಸೂಚ್ಯಂಕಗಳು ಏರಿಕೆ ಕಾಣುವಂತಾಯಿತು.

ರೂಪಾಯಿ ಮೌಲ್ಯ ಇಳಿಕೆ ಮತ್ತು ವಿದೇಶಿ ಬಂಡವಾಳ ಹೊರಹರಿವು ಮುಂದುವರಿದಿರುವುದು ಷೇರುಪೇಟೆಗಳ ಗಳಿಕೆಯನ್ನು ಮಿತಿಗೊಳಿಸಿದವು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 437 ಅಂಶ ಹೆಚ್ಚಾಗಿ 55,818 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ಸೆನ್ಸೆಕ್ಸ್‌ನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಮೌಲ್ಯ ಶೇ 3.51ರಷ್ಟು ಗರಿಷ್ಠ ಏರಿಕೆ ಕಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 105 ಅಂಶ ಹೆಚ್ಚಾಗಿ 16,628 ಅಂಶಗಳಿಗೆ ತಲುಪಿತು.

ADVERTISEMENT

ಜಿಎಸ್‌ಟಿ ಸಂಗ್ರಹ ಮತ್ತು ಪಿಎಂಐ ಅಂಕಿ–ಅಂಶವು 2022–23ನೇ ಹಣಕಾಸು ವರ್ಷದ ಉತ್ತಮ ಆರಂಭವನ್ನು ಸೂಚಿಸುತ್ತಿವೆ. ಕಚ್ಚಾ ತೈಲ ದರ ಇಳಿಕೆಯು ಭಾರತದ ಮಾರುಕಟ್ಟೆಗಳ ಚೇತರಿಕೆಗೆ ನೆರವಾದವು ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಭಾರತ ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್‌ಗಳ ನಿರ್ಧಾರವು ಮುಂದಿನ ವಾರ ಹೊರಬೀಳಲಿದ್ದು, ಷೇರುಪೇಟೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರಲಿವೆ ಎಂದೂ ಅವರು ತಿಳಿಸಿದ್ದಾರೆ.

ರಷ್ಯಾ ತೈಲದ ಮೇಲೆ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ಹೇರಿರುವುದರಿಂದ ಮಾರುಕಟ್ಟೆಯಲ್ಲಿ ಉಂಟಾಗುವ ಪೂರೈಕೆ ಕೊರತೆ ಸರಿದೂಗಿಸಲು ಸೌದಿ ಅರೇಬಿಯಾ ಉತ್ಪಾದನೆ ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದಾಗಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 2.21ರಷ್ಟು ಇಳಿಕೆ ಆಗಿ ಒಂದು ಬ್ಯಾರಲ್‌ಗೆ 113.7 ಡಾಲರ್‌ಗಳಿಗೆ ತಲುಪಿತು.

ಮುಖ್ಯಾಂಶಗಳು

ಜಿಎಸ್‌ಟಿ ಸಂಗ್ರಹ ಹೆಚ್ಚಳದ ಪ್ರಭಾವ

ಕಚ್ಚಾ ತೈಲ ದರ ಶೇ 2.21ರಷ್ಟು ಇಳಿಕೆ

ವಲಯವಾರು ಏರಿಕೆ (%)

- ಇಂಧನ;2.33

- ತೈಲ ಮತ್ತು ಅನಿಲ; 2.14

- ಐ.ಟಿ.; 1.56

ತಂತ್ರಜ್ಞಾನ; 1.55

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.