
ನವದೆಹಲಿ: ದೇಶದ ಎಂಟು ಪ್ರಮುಖ ನಗರಗಳ ಪೈಕಿ ಬೆಂಗಳೂರಿನಲ್ಲಿ ಮನೆಗಳ ಬೆಲೆಯು ಕಳೆದ ವರ್ಷ ಶೇ 13ರಷ್ಟು ಏರಿಕೆಯಾಗಿದೆ. ಇದು ದೇಶದ ಎಂಟು ನಗರಗಳ ಪೈಕಿ ಮನೆಗಳ ಬೆಲೆಯಲ್ಲಿನ ಗರಿಷ್ಠ ಪ್ರಮಾಣದ ಹೆಚ್ಚಳ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಪ್ರಾಪ್ ಟೈಗರ್ ಹೇಳಿದೆ.
2024ರಲ್ಲಿ ಈ ಎಂಟು ನಗರಗಳಲ್ಲಿ ಮನೆಗಳ ಸರಾಸರಿ ಬೆಲೆಯು ಶೇ 17ರಷ್ಟು ಹೆಚ್ಚಳವಾಗಿದ್ದರೆ, ಕಳೆದ ವರ್ಷ ಶೇ 6ರಷ್ಟು ಏರಿಕೆಯಾಗಿದೆ. ಚೆನ್ನೈನಲ್ಲಿ ಮನೆಗಳ ಬೆಲೆಯಲ್ಲಿ ಯಥಾಸ್ಥಿತಿಯಲ್ಲಿದ್ದು, ಪ್ರತಿ ಚದರ ಅಡಿ ದರ ₹7,200 ಇದೆ.
2024ರಲ್ಲಿ ಬೆಂಗಳೂರಿನಲ್ಲಿ ಪ್ರತಿ ಚದರ ಅಡಿ ದರ ₹7,536 ಇತ್ತು. ಇದು 2025ರಲ್ಲಿ ₹8,533ಕ್ಕೆ ಹೆಚ್ಚಳವಾಗಿದೆ ಎಂದು ಪ್ರಾಪ್ ಟೈಗರ್ ತಿಳಿಸಿದೆ.
‘ಬೆಂಗಳೂರು ದೇಶದ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ರಾಜಧಾನಿಯಾಗಿದೆ. ಗುಣಮಟ್ಟದ ಜೀವನ ಬಯಸುವ ಜಾಗತಿಕ ಹೂಡಿಕೆದಾರರು, ವಲಸೆ ಕಾರ್ಮಿಕರಿಗೆ ಬೆಂಗಳೂರು ಆಕರ್ಷಣೆಯ ನಗರವಾಗಿ ಮುಂದುವರಿದಿದೆ’ ಎಂದು ಸೌಪರ್ಣಿಕಾ ಪ್ರಾಜೆಕ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಮ್‌ಜಿ ಸುಬ್ರಮಣಿಯಂ ಹೇಳಿದ್ದಾರೆ.
‘ಬೇಡಿಕೆ ಹೆಚ್ಚಳವೇ ಬೆಂಗಳೂರಿನಲ್ಲಿ ಮನೆಗಳ ಬೆಲೆ ಏರಿಕೆಗೆ ಕಾರಣ’ ಎಂದು ಆರಿಸ್‌ಯುನಿಟರ್ನ್‌ನ ನಿರ್ದೇಶಕ ನವೀನ್ ಧನುಕ ಹೇಳಿದ್ದಾರೆ.
ತಂತ್ರಜ್ಞಾನ ವಲಯ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ (ಜಿಸಿಸಿ) ನಿರಂತರವಾಗಿ ಉದ್ಯೋಗ ಸೃಷ್ಟಿ ಆಗುತ್ತಿರುವುದು, ವಲಸೆ ಸ್ಥಿರವಾಗಿರುವುದು ಮತ್ತು ಬೆಂಗಳೂರಿನ ಪೂರ್ವ ಹಾಗೂ ಉತ್ತರದ ಪ್ರದೇಶಗಳಲ್ಲಿನ ಮೂಲಸೌಕರ್ಯ ಸುಧಾರಣೆಯು ಮನೆಗಳ ಬೇಡಿಕೆ ಚೆನ್ನಾಗಿ ಇರುವುದಕ್ಕೆ ಕಾರಣವಾಗಿವೆ ಎಂದು ಹೇಳಿದ್ದಾರೆ.
‘ಭೂಮಿ ಬೆಲೆ ಸೇರಿದಂತೆ ಮನೆಗಳ ನಿರ್ಮಾಣ ವೆಚ್ಚ ಹೆಚ್ಚಳವಾಗಿದೆ. ಇದು ಬೆಂಗಳೂರಿನಲ್ಲಿ ಮನೆಗಳ ದರ ಏರಿಕೆಗೆ ಕಾರಣ’ ಎಂದು ಪ್ರಾಪರ್ಟಿ ಫಸ್ಟ್ ರಿಯಾಲ್ಟಿ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಭವೇಶ್ ಕೊಠಾರಿ ಹೇಳಿದ್ದಾರೆ.
ಗುಣಮಟ್ಟದ ಮನೆಗಳ ಲಭ್ಯತೆಯು ಕಡಿಮೆ ಇದೆ. ಹೀಗಾಗಿ, ಖರೀದಿದಾರರು ಹೆಚ್ಚಿನ ಬೆಲೆ ನೀಡಿ ಮನೆ ಖರೀದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
2024ರಲ್ಲಿ ದೆಹಲಿ–ಎನ್‌ಸಿಆರ್‌ನಲ್ಲಿ ಮನೆಗಳ ಬೆಲೆಯಲ್ಲಿ ಶೇ 49ರಷ್ಟು ಏರಿಕೆಯಾಗಿದ್ದರೆ, ಕಳೆದ ವರ್ಷ ಶೇ 6ರಷ್ಟು ಮಾತ್ರ ಹೆಚ್ಚಳವಾಗಿದೆ. ಮನೆಗಳಿಗೆ ಬೇಡಿಕೆ ಕಡಿಮೆ ಆಗಿರುವುದು ಇದಕ್ಕೆ ಕಾರಣ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.