ADVERTISEMENT

ಆರ್ಥಿಕತೆ ಉತ್ತೇಜನಕ್ಕೆ ಬಜೆಟ್‌ಗೆಹೊರತಾದ ಕ್ರಮ : ನಿರ್ಮಲಾ

ಪಿಟಿಐ
Published 14 ಫೆಬ್ರುವರಿ 2020, 17:33 IST
Last Updated 14 ಫೆಬ್ರುವರಿ 2020, 17:33 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ನವದೆಹಲಿ: ‘ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಅಗತ್ಯಬಿದ್ದರೆ, ಬಜೆಟ್‌ನಲ್ಲಿ ಘೋಷಿಸಿದ ಕ್ರಮಗಳಿಗೆ ಹೊರತಾದ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಸಂಪತ್ತು ನಿರ್ವಾಹಕರು, ತೆರಿಗೆ ಸಲಹೆಗಾರರು ಮತ್ತಿತರ ವೃತ್ತಿಪರರ ಜತೆ ಇಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ‘ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿದ ಕ್ರಮಗಳು ಷೇರುಪೇಟೆ, ಬಾಂಡ್‌ಗಳ ವಹಿವಾಟು ಮತ್ತು ಕರೆನ್ಸಿ ಮಾರುಕಟ್ಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿವೆ.

‘ಬಜೆಟ್‌ನಲ್ಲಿ ಘೋಷಿತ ಪ್ರಸ್ತಾವಗಳ ಹೊರತಾಗಿಯೂ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಉದ್ಭವಿಸಿದರೆ ಹಾಗೆ ಮಾಡಲು ಸರ್ಕಾರ ಸಿದ್ಧ ಇದೆ’ ಎಂದು ಭರವಸೆ ನೀಡಿದರು.

ADVERTISEMENT

ಸಲಹೆ: ಸಭೆಯಲ್ಲಿ ಭಾಗವಹಿಸಿದ್ದ ಅನೇಕರು ಆರ್ಥಿಕ ಚಟುವಟಿಕೆ ಉತ್ತೇಜಿಸಲು ಅನೇಕ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಲಹೆ ನೀಡಿದರು.

ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಿಸಲು ಗ್ರಾಹಕರ ಬಳಿಯಲ್ಲಿ ಹೆಚ್ಚು ಹಣ ಇರುವಂತೆ ಮಾಡಬೇಕು. ನಗದು ಲಭ್ಯತೆ ಹೆಚ್ಚಿಸಬೇಕು. ಬಂಡವಾಳ ಮಾರುಕಟ್ಟೆಯಲ್ಲಿನ ವಹಿವಾಟು ಹೆಚ್ಚಳಗೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿವಾದ್‌ ಸೆ ವಿಶ್ವಾಸ್‌: ನೇರ ತೆರಿಗೆ ವಿವಾದಗಳಿಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಘೋಷಿಸಿರುವ ‘ವಿವಾದ್‌ ಸೆ ವಿಶ್ವಾಸ್‌’ ಯೋಜನೆ ಸಂಬಂಧವೂ ಹಲವಾರು ಸಲಹೆಗಳು ಕೇಳಿ ಬಂದವು.

ಯೋಜನೆಯ ವಿವರಗಳನ್ನು ಹಣಕಾಸು ಸಚಿವಾಲಯವು ಸದ್ಯದಲ್ಲಿಯೇ ಪ್ರಕಟಿಸಲಿದೆ. ಅದನ್ನು ಜಾರಿಗೆ ಬರಲು ಸಂಸತ್ತಿನ ಒಪ್ಪಿಗೆ ಪಡೆಯಬೇಕಾಗುತ್ತದೆ. ಕೇಂದ್ರ ಸಚಿವ ಸಂಪುಟವು ಇದಕ್ಕೆ ಸಂಬಂಧಿಸಿದ ಕೆಲ ತಿದ್ದುಪಡಿಗಳಿಗೆ ಈಗಾಗಲೇ ಅನುಮೋದನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.