ADVERTISEMENT

ಚಿನ್ನದ ಉದ್ಯಮಕ್ಕೆ ಪೆಟ್ಟು: ಅಕ್ರಮ ವಹಿವಾಟು ಹೆಚ್ಚುವ ಆತಂಕ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 19:17 IST
Last Updated 5 ಜುಲೈ 2019, 19:17 IST
   

ನವದೆಹಲಿ/ಮುಂಬೈ: ಹಳದಿ ಲೋಹ ಮತ್ತಷ್ಟು ದುಬಾರಿಯಾಗಲಿದೆ.ಚಿನ್ನ ಮತ್ತು ಇತರ ಲೋಹಗಳ ಮೇಲಿನಮೇಲಿನ ಕಸ್ಟಮ್‌ ಶುಲ್ಕವನ್ನು ಶೇಕಡ 10ರಿಂದ ಶೇಕಡ 12.5ಕ್ಕೆ ಹೆಚ್ಚಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಇದರಿಂದ ನವದೆಹಲಿಯಲ್ಲಿ ಶುಕ್ರವಾರ ತಲಾ 10 ಗ್ರಾಂ ಚಿನ್ನದ ಬೆಲೆ ₹590ರಷ್ಟು ಏರಿಕೆಯಾಗಿದ್ದು, ₹34,800ಕ್ಕೆ ನಿಗದಿಯಾಗಿತ್ತು.

ಶುಲ್ಕ ಹೆಚ್ಚಳಕ್ಕೆಅಖಿಲ ಭಾರತ ಮುತ್ತು ಮತ್ತು ಆಭರಣಗಳ ಮಂಡಳಿ ಅಧ್ಯಕ್ಷ ಎನ್‌. ಅನಂತ ಪದ್ಮನಾಭನ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಇದು ಆಘಾತಕಾರಿ ನಿರ್ಧಾರ. ಕಸ್ಟಮ್‌ ಶುಲ್ಕ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಈಗಾಗಲೇ ಅಕ್ರಮವಾಗಿ ಚಿನ್ನ ಸಾಗಾಣಿಕೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಕನಿಷ್ಠ ಶೇಕಡ 30ರಷ್ಟು ಕಳ್ಳ ಸಾಗಾಣಿಕೆಯಲ್ಲಿ ಹೆಚ್ಚಳವಾಗಲಿದೆ. ಹೀಗಾಗಿ ತಕ್ಷಣವೇ ಕಸ್ಟಮ್‌ ಶುಲ್ಕ ಏರಿಕೆಯನ್ನು ವಾಪಸ್‌ ಪಡೆಯಬೇಕು’ ಎಂದು ಹೇಳಿದ್ದಾರೆ.

‘ಚಿನ್ನದ ಉದ್ಯಮದ ಮೇಲೆ ಈ ನಿರ್ಧಾರ ಅಪಾರ ಪರಿಣಾಮ ಬೀರಲಿದೆ. ಜಾಗತಿಕವಾಗಿ ಈಗಾಗಲೇ ಬೆಲೆ ಹೆಚ್ಚಳವಾಗುತ್ತಿದೆ. ಚಿನ್ನವನ್ನು ಆಸ್ತಿಯನ್ನಾಗಿ ಮಾಡಿಕೊಳ್ಳಬೇಕು ಎನ್ನುವವರ ಪ್ರಯತ್ನಕ್ಕೆ ತಣ್ಣೀರೆರಚಿದೆ’ ಎಂದು ವಿಶ್ವ ಚಿನ್ನ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಅಭಿಪ್ರಾಯಪಟ್ಟಿದ್ದಾರೆ.

ಕಸ್ಟಮ್‌ ಶುಲ್ಕವನ್ನು ಕಡಿತಗೊಳಿಸುವಂತೆ ವ್ಯಾಪಾರಿಗಳು ಇತ್ತೀಚೆಗೆ ಸರ್ಕಾರವನ್ನು ಕೋರಿದ್ದರು. ಚಿನ್ನದ ಆಮದು ಇತ್ತೀಚೆಗೆ ಕಡಿಮೆಯಾಗಿತ್ತು. ಕಸ್ಟಮ್ಸ್‌ ಶುಲ್ಕ ಹೆಚ್ಚಳದಿಂದ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

‘ಚಿನ್ನದ ಆಭರಣಗಳ ರಫ್ತಿನ ಮೇಲೆಯೂ ಈ ನಿರ್ಧಾರ ಪರಿಣಾಮ ಬೀರಲಿದೆ. ಜತೆಗೆ ಅಕ್ರಮ ವಹಿವಾಟು ಹೆಚ್ಚಲಿದೆ’ ಎಂದು ಆಭರಣ ರಫ್ತು ಉತ್ತೇಜನ ಮಂಡಳಿ ಉಪಾಧ್ಯಕ್ಷ ಕೊಲಿನ್‌ ಶಾ ಅಭಿಪ್ರಾಯಪಟ್ಟಿದ್ದಾರೆ.

2013ರಲ್ಲಿ ಆಮದು ಶುಲ್ಕವನ್ನು ಶೇಕಡ 10ರಷ್ಟು ಹೆಚ್ಚಿಸಲಾಗಿತ್ತು. 2017ರಲ್ಲಿ ಶೇಕಡ 7ರಷ್ಟು ಮಾರಾಟ ತೆರಿಗೆ ಹೆಚ್ಚಿಸಲಾಗಿತ್ತು. ಈ ಕ್ರಮಗಳಿಂದ ಚಿನ್ನದ ಅಕ್ರಮ ಸಾಗಾಣಿಕೆಯಲ್ಲಿ ಹೆಚ್ಚಳವಾಗಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.