
ನವದೆಹಲಿ: ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು ಮಾಡುವುದಕ್ಕೆ ಹೂಡಿಕೆಯನ್ನು ಆದ್ಯತೆಯ ಸಾಧನವಾಗಿ ಸರ್ಕಾರ ಪರಿಗಣಿಸಿದೆ ಎಂಬುದನ್ನು ಈ ಬಾರಿಯ ಬಜೆಟ್ ಹೇಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.
ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವ ಉದ್ದೇಶವು, ಆರ್ಥಿಕ ಬೆಳವಣಿಗೆಯು ಸರ್ಕಾರದ ಆದ್ಯತೆ ಎಂಬುದರ ಸೂಚಕ ಎಂದು ಅವರು ವಿವರಿಸಿದ್ದಾರೆ.
ಬಜೆಟ್ ಮಂಡನೆಯ ಮಾರನೆಯ ದಿನ ಮಾಧ್ಯಮ ಪ್ರತಿನಿಧಿಗಳ ಜೊತೆ ಸಂವಾದ ನಡೆಸಿದ ನಿರ್ಮಲಾ ಅವರು, ‘ಜಾಗತಿಕ ಮಟ್ಟದಲ್ಲಿನ ಅನಿಶ್ಚಿತತೆಗಳ ಕಾರಣದಿಂದಾಗಿ ಚಿನ್ನದ ಬೆಲೆಯಲ್ಲಿ ಅಸ್ಥಿರತೆ ಕಾಣಿಸಿಕೊಂಡಿದೆ. ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿವೆ’ ಎಂದಿದ್ದಾರೆ.
‘ಹೂಡಿಕೆದಾರರಿಗೆ ಯಾವುದೇ ಒಂದು ದೇಶದ ಕರೆನ್ಸಿಯ ಮೇಲೆ ನಂಬಿಕೆ ಇಲ್ಲ, ಹೀಗಾಗಿಯೇ ಅವರು ಚಿನ್ನ ಖರೀದಿಗೆ ಮುಗಿಬೀಳುತ್ತಿದ್ದಾರೆ ಎಂಬುದನ್ನೂ ಇದು ತೋರಿಸುತ್ತಿದೆ’ ಎಂದು ಹೇಳಿದ್ದಾರೆ.
ಹೂಡಿಕೆದಾರರು ಊಹೆಗಳನ್ನು ಆಧರಿಸಿದ ಷೇರು ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವುದು ಬೇಡ ಎಂಬ ಉದ್ದೇಶದಿಂದ ಫ್ಯೂಚರ್ಸ್ ಮತ್ತು ಆಪ್ಷನ್ಸ್‌ಗೆ ಸಂಬಂಧಿಸಿದಂತೆ ಷೇರು ವಹಿವಾಟು ತೆರಿಗೆಯನ್ನು (ಎಸ್‌ಟಿಟಿ) ಹೆಚ್ಚು ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದ್ದಾರೆ.
‘ಊಹೆಗಳನ್ನು ಬಹುವಾಗಿ ಆಧರಿಸಿದ ಎಫ್‌ಆ್ಯಂಡ್‌ಒ ವಹಿವಾಟಿನ ಮೇಲಿನ ತೆರಿಗೆಯನ್ನು ಮಾತ್ರ ಹೆಚ್ಚಿಸಲಾಗಿದೆ. ತಮ್ಮ ಮಕ್ಕಳು ಇಂತಹ ವಹಿವಾಟುಗಳಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ನನಗೆ ಹಲವು ಪಾಲಕರಿಂದ ಕರೆಗಳು ಬಂದಿವೆ. ಈ ವಿಚಾರವಾಗಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಅವರು ಕೋರಿದ್ದಾರೆ. ಎಸ್‌ಟಿಟಿ ಹೆಚ್ಚಳವು ಜನರು ಇಂತಹ ವಹಿವಾಟುಗಳಲ್ಲಿ ಆತುರದಿಂದ ತೊಡಗಿಸಿಕೊಳ್ಳದೆ ಇರುವಂತೆ ಮಾಡುತ್ತದೆ’ ಎಂದು ಅವರು ವಿವರಿಸಿದ್ದಾರೆ.
ಹೂಡಿಕೆ ಹಿಂತೆಗೆತ ಹಾಗೂ ಆಸ್ತಿ ನಗದೀಕರಣವು ಮುಂದುವರಿಯುತ್ತದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಇನ್ನಷ್ಟು ಹೂಡಿಕೆ ಹಿಂತೆಗೆತವನ್ನು ಸರ್ಕಾರ ಉತ್ತೇಜಿಸಲಿದೆ. ಐಡಿಬಿಐ ಬ್ಯಾಂಕ್‌ನ ಷೇರು ವಿಕ್ರಯಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯುತ್ತಿವೆ ಎಂದಿದ್ದಾರೆ.
ಶೇ 8ರ ಬೆಳವಣಿಗೆಗೆ ಗಮನ
ಆರ್ಥಿಕ ಬೆಳವಣಿಗೆ ದರವನ್ನು ಶೇ 7–8ರ ಮಟ್ಟದಲ್ಲಿ ಉಳಿಸಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಮಟ್ಟದ ಬೆಳವಣಿಗೆ ಸಾಧ್ಯವಾದಾಗ ಎಲ್ಲರಿಗೂ ಪ್ರಯೋಜನ ದಕ್ಕುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಜೆಟ್ ಮಂಡನೆಯ ಮಾರನೆಯ ದಿನ ದೇಶದ ವಿವಿಧ ಭಾಗಗಳ ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಭಾಗಿಯಾದ ಅವರು ‘ಆರ್ಥಿಕ ಬೆಳವಣಿಗೆ ಚೆನ್ನಾಗಿದ್ದರೆ ಅದರ ಫಲ ಎಲ್ಲರಿಗೂ ಸಿಗುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.