ADVERTISEMENT

ಬಜೆಟ್‌: ಮೂಲಸೌಕರ್ಯವಲಯಕ್ಕೆ ಮೊದಲ ಆದ್ಯತೆ?

ವ್ಯಾಪಕ ಬ್ಯಾಂಕಿಂಗ್‌ ಸುಧಾರಣಾ ಕ್ರಮಗಳ ನಿರೀಕ್ಷೆ

ಪಿಟಿಐ
Published 9 ಜೂನ್ 2019, 19:31 IST
Last Updated 9 ಜೂನ್ 2019, 19:31 IST
   

ನವದೆಹಲಿ: ಕೇಂದ್ರ ಸರ್ಕಾರದ 2019–20ನೆ ಸಾಲಿನ ಬಜೆಟ್‌ನಲ್ಲಿ ಮೂಲ ಸೌಕರ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆ ಇದೆ.

ಮುಂದಿನ ಐದು ವರ್ಷಗಳಲ್ಲಿ ರೈಲು, ರಸ್ತೆ, ಡಿಜಿಟಲ್‌ ಸಂಪರ್ಕ ಮತ್ತು ಹೊಸ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ₹ 100 ಲಕ್ಷ ಕೋಟಿ ವೆಚ್ಚ ಮಾಡುವ ಭವಿಷ್ಯದ ಮುನ್ನೋಟವನ್ನು ಬಜೆಟ್‌ ಹೊಂದಿರಲಿದೆ.

ಈ ಭಾರಿ ಮೊತ್ತದ ಬಹುಭಾಗವನ್ನು ಸಾರಿಗೆ ವಿಭಾಗಕ್ಕೆ ಮೀಸಲು ಇರಿಸುವ ಸಾಧ್ಯತೆ ಇದೆ. ನಂತರದ ಸ್ಥಾನದಲ್ಲಿ ಗೃಹ ನಿರ್ಮಾಣ, ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿವೆ. ಇದರಿಂದ ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿ ಮೇಲೆ ಬಹುಬಗೆಯ ಪರಿಣಾಮ ಕಂಡುಬರಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬ್ಯಾಂಕಿಂಗ್‌ ಸುಧಾರಣೆ: ಸರ್ಕಾರಿ ಸ್ವಾಮ್ಯದ ಇನ್ನಷ್ಟು ಬ್ಯಾಂಕ್‌ಗಳ ವಿಲೀನ ಪ್ರಸ್ತಾವ ಸೇರಿದಂತೆ ವ್ಯಾಪಕ ಬ್ಯಾಂಕಿಂಗ್‌ ಸುಧಾರಣಾ ಕ್ರಮಗಳ ಮುನ್ನೋಟವನ್ನೂ ಒಳಗೊಂಡಿರಲಿದೆ.

ದೇಶಿ ಆರ್ಥಿಕತೆಯ ಗಾತ್ರವನ್ನು ₹ 350 ಲಕ್ಷ ಕೋಟಿಯತ್ತ ಮುನ್ನಡೆಸಲು ಬ್ಯಾಂಕಿಂಗ್‌ ಕ್ಷೇತ್ರವು ಮಹತ್ವದ ಪಾತ್ರ ನಿರ್ವಹಿಸುವ ಉದ್ದೇಶಕ್ಕೆ ಒತ್ತು ನೀಡಲು ನಿರ್ಧರಿಸಲಾಗಿದೆ. ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಗೆ ಚೇತರಿಕೆ ನೀಡುವಲ್ಲಿ ಬ್ಯಾಂಕಿಂಗ್‌ ಕ್ಷೇತ್ರ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಸಣ್ಣ ಬ್ಯಾಂಕ್‌ಗಳನ್ನು ದೊಡ್ಡ ಬ್ಯಾಂಕ್‌ಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಮುಂದುವರೆಯಲಿದೆ. ಈ ಉದ್ದೇಶಕ್ಕೆ ದೊಡ್ಡ ಬ್ಯಾಂಕ್‌ಗಳಾದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಗುರುತಿಸಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜುಲೈ 5ರಂದು ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಬಜೆಟ್‌ ಮಂಡಿಸಲಿದ್ದಾರೆ. ದೇಶಿ ಆರ್ಥಿಕತೆಯ ವೃದ್ಧಿ ದರವು 2018–19ರಲ್ಲಿ ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ (ಶೇ 6.8) ಕುಸಿದಿರುವುದರಿಂದ ಬಜೆಟ್‌ನಲ್ಲಿ ಇರಬಹುದಾದ ಪ್ರಸ್ತಾವಗಳ ಮಹತ್ವ ಹೆಚ್ಚಿದೆ.

ತೆರಿಗೆ ವಿನಾಯ್ತಿ ಮಿತಿ ಹೆಚ್ಚಳಕ್ಕೆ ಸಲಹೆ: ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ ಮೂಲ ವಿನಾಯ್ತಿ ಮಿತಿಯನ್ನು ₹ 5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಸಲಹೆ ನೀಡಿದೆ.

ಹಣದುಬ್ಬರ ಹೆಚ್ಚಳದ ಕಾರಣಕ್ಕೆ ಈ ವಿನಾಯ್ತಿ ಮಿತಿ ಹೆಚ್ಚಿಸುವ ಅಗತ್ಯ ಇದೆ. ವಿನಾಯ್ತಿ ಪಡೆಯಲು ಯಾವುದೇ ದಾಖಲೆಗಳನ್ನು ಸಲ್ಲಿಸದ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಗರಿಷ್ಠ ಮಿತಿಯನ್ನು ₹1 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಬಜೆಟ್‌ ಪೂರ್ವಭಾವಿ ಮನವಿ ಪತ್ರದಲ್ಲಿ ಪ್ರತಿಪಾದಿಸಲಾಗಿದೆ.

ಪರಿಣತರ ಸಲಹೆ: ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸುವ ಮತ್ತು ಕಂಪನಿಗಳಿಗೆ ಪರ್ಯಾಯ ಬದಲಿ ತೆರಿಗೆ (ಎಂಎಟಿ) ರದ್ದುಪಡಿಸುವುದನ್ನು ನಿರ್ಮಲಾ ಸೀತಾರಾಮನ್‌ ಪರಿಗಣಿಸಬೇಕು ಎಂದು ತೆರಿಗೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಆದಾಯದಲ್ಲಿನ ಗೃಹ ಸಾಲ ಬಡ್ಡಿ ಕಡಿತದ ವಿನಾಯ್ತಿ ಮೊತ್ತವನ್ನು ಸದ್ಯದ ₹ 2 ಲಕ್ಷದಿಂದ ₹ 3 ಲಕ್ಷಕ್ಕೆ ಹೆಚ್ಚಿಸಬೇಕು. ಶೇ 5ರಷ್ಟು ತೆರಿಗೆ ಅನ್ವಯವಾಗುವ ಆದಾಯದ ಹಂತವನ್ನು ₹ 5 ಲಕ್ಷದಿಂದ ₹ 7.5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಪಿಡಬ್ಲ್ಯುಸಿ ಇಂಡಿಯಾದ ವೈಯಕ್ತಿಕ ತೆರಿಗೆ ವಿಭಾಗದ ಕುಲದೀಪ್‌ ಕುಮಾರ್‌ ಸಲಹೆ ನೀಡಿದ್ದಾರೆ.

ಪೂರ್ವಭಾವಿ ಸಭೆಗೆ ನಾಳೆ ಚಾಲನೆ
ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತಮ್ಮ ಮೊದಲ ಬಜೆಟ್‌ನ ಪೂರ್ವಭಾವಿ ಸಲಹಾ ಸಭೆಗೆ ಚಾಲನೆ ನೀಡಲಿದ್ದಾರೆ. ಕೃಷಿ ಕ್ಷೇತ್ರದ ಸಂಘ ಸಂಸ್ಥೆಗಳು ಮತ್ತು ಕೃಷಿ ಪರಿಣತರ ಜತೆ ಸಭೆ ನಡೆಸಲಿದ್ದಾರೆ. ಕೃಷಿ ಕ್ಷೇತ್ರದ ಬೆಳವಣಿಗೆಗೆ ಉತ್ತೇಜನ ನೀಡಲು ಮತ್ತು ರೈತರ ಆದಾಯ ದುಪ್ಪಟ್ಟುಗೊಳಿಸುವ ಕ್ರಮಗಳ ಬಗ್ಗೆ ಸಲಹೆ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.