ADVERTISEMENT

ಯೆಸ್‌ ಬ್ಯಾಂಕ್‌ ಪುನಶ್ಚೇತನ: ಆರ್‌ಬಿಐ ಪ್ರಸ್ತಾವಕ್ಕೆ ಸಚಿವ ಸಂಪುಟದ ಸಮ್ಮತಿ

ಶೀಘ್ರವೇ ನಿರ್ಬಂಧ ತೆರವು: ಸಚಿವೆ ನಿರ್ಮಲಾ

ಪಿಟಿಐ
Published 13 ಮಾರ್ಚ್ 2020, 19:30 IST
Last Updated 13 ಮಾರ್ಚ್ 2020, 19:30 IST
ಯೆಸ್‌ ಬ್ಯಾಂಕ್‌
ಯೆಸ್‌ ಬ್ಯಾಂಕ್‌   
""

ನವದೆಹಲಿ: ಹಗರಣದ ಸುಳಿಯಲ್ಲಿ ಸಿಲುಕಿರುವ ಯೆಸ್‌ ಬ್ಯಾಂಕ್‌ ಪುನಶ್ಚೇತನಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್‌ ಮುಂದಿಟ್ಟಿರುವ ಪರಿಹಾರ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟವು ಶುಕ್ರವಾರ ತನ್ನ ಸಮ್ಮತಿ ನೀಡಿದೆ.

‘ಬ್ಯಾಂಕ್‌ನ ಠೇವಣಿದಾರರ ಹಿತಾಸಕ್ತಿ ರಕ್ಷಿಸುವ, ಯೆಸ್‌ ಬ್ಯಾಂಕ್‌ ಸೇರಿದಂತೆ ದೇಶದ ಒಟ್ಟಾರೆ ಬ್ಯಾಂಕಿಂಗ್‌ ವ್ಯವಸ್ಥೆಗೆ, ಹಣಕಾಸು ಪರಿಸ್ಥಿತಿಗೆ ಸ್ಥಿರತೆ ಒದಗಿಸುವ ಉದ್ದೇಶಕ್ಕೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ’ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಪುನಶ್ಚೇತನದ ಯೋಜನೆ ಸಂಬಂಧ ಅಧಿಸೂಚನೆ ಹೊರ ಬಿದ್ದ ಮೂರು ದಿನಗಳಲ್ಲಿ ಬ್ಯಾಂಕ್‌ನ ವಹಿವಾಟಿನ ಮೇಲೆ ವಿಧಿಸಲಾಗಿರುವ ನಿರ್ಬಂಧ ತೆರವಾಗಲಿದೆ. ಏಳು ದಿನಗಳಲ್ಲಿ ಹೊಸ ನಿರ್ದೇಶಕ ಮಂಡಳಿ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಆರ್‌ಬಿಐ ನೇಮಿಸಿರುವ ಆಡಳಿತಗಾರ ತಮ್ಮ ಹುದ್ದೆ ತೊರೆಯಲಿದ್ದಾರೆ.

ADVERTISEMENT

ಎಸ್‌ಬಿಐ, ಬ್ಯಾಂಕ್‌ನ ಶೇ 49ರಷ್ಟು ಪಾಲು ಬಂಡವಾಳ ಖರೀದಿಸಲಿದೆ. ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ಹೂಡಿಕೆಗೆ ಮೂರು ವರ್ಷಗಳ ನಿರ್ಬಂಧ ಇರುತ್ತದೆ. ಈ ಅವಧಿಯಲ್ಲಿ ಹೂಡಿಕೆ ಹಣ ಹಿಂದೆ ಪಡೆಯಲು ಅವಕಾಶ ಇರುವುದಿಲ್ಲ. ಬ್ಯಾಂಕ್‌ನ ಪಾಲು ಬಂಡವಾಳದ ಗರಿಷ್ಠ ಮೊತ್ತವು ₹ 6,200 ಕೋಟಿಗಳಷ್ಟು ಇರಲಿದೆ. ಹೀಗಾಗಿ ಬಂಡವಾಳ ಅಗತ್ಯ ಈಡೇರಿಸಿಕೊಳ್ಳಲು ಇನ್ನಷ್ಟು ಅವಕಾಶ ಮುಕ್ತವಾಗಿರಲಿದೆ.

ಖಾಸಗಿ ವಲಯದ ಈ ಬ್ಯಾಂಕ್‌ನ ವಹಿವಾಟಿನ ಮೇಲೆ ಆರ್‌ಬಿಐ, ಈ ತಿಂಗಳ 5ರಂದು ನಿರ್ಬಂಧ ವಿಧಿಸಿದ ನಂತರ ಅದರ ಪುನಶ್ಚೇತನ ಪ್ರಯತ್ನಕ್ಕೆ ಚಾಲನೆ ದೊರೆತಿತ್ತು.

ರಾಣಾ ವಿರುದ್ಧ ಮತ್ತೊಂದು ಪ್ರಕರಣ
ನವದೆಹಲಿ (ಪಿಟಿಐ):
ಯೆಸ್‌ ಬ್ಯಾಂಕ್‌ ಸಂಸ್ಥಾಪಕ ರಾಣಾ ಕಪೂರ್‌ ಹಾಗೂ ಅವರ ಪತ್ನಿ ಬಿಂದು ಹಾಗೂ ಅವಂತಾ ರಿಯಾಲಿಟಿಯ ಗೌತಮ್‌ ಥಾಪರ್‌ ವಿರುದ್ಧ ಸಿಬಿಐ ಹೊಸ ಪ್ರಕರಣ ದಾಖಲಿಸಿದೆ. ಅಮೃತ ಶೇರ್ಗಿಲ್‌ ಬಂಗಲೆ ಒಪ್ಪಂದ ಪ್ರಕರಣ ಹಾಗೂ ಥಾಪರ್‌ ಅವರ ಕಂಪನಿಗೆ ₹ 2 ಸಾವಿರ ಕೋಟಿ ಸಾಲ ಮಂಜೂರಾತಿಗೆ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ, ಮುಂಬೈನಲ್ಲಿರುವ ಕಪೂರ್‌ ಹಾಗೂ ಬಿಂದು ಅವರ ಮನೆ, ಕಚೇರಿಗಳಲ್ಲಿ, ಥಾಪರ್‌ ಅವರ ಕಂಪನಿಯಲ್ಲಿ ತಪಾಸಣೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.