ADVERTISEMENT

ಚಾಲ್ತಿ ಖಾತೆ ಕೊರತೆ ಶೇ 2ಕ್ಕೆ ಇಳಿಕೆ

ಪಿಟಿಐ
Published 30 ಸೆಪ್ಟೆಂಬರ್ 2019, 20:00 IST
Last Updated 30 ಸೆಪ್ಟೆಂಬರ್ 2019, 20:00 IST
   

ಮುಂಬೈ: ದೇಶದ ಚಾಲ್ತಿ ಖಾತೆ ಕೊರತೆಯು (ಸಿಎಡಿ) ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯ ಶೇ 2ಕ್ಕೆ ಇಳಿಕೆಯಾಗಿದೆ. ಮೌಲ್ಯದ ಲೆಕ್ಕದಲ್ಲಿ ₹ 1.01 ಲಕ್ಷ ಕೋಟಿಗಳಷ್ಟಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾಹಿತಿ ನೀಡಿದೆ.

2017–18ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಚಾಲ್ತಿ ಖಾತೆ ಕೊರತೆ ಶೇ 2.3ರಷ್ಟಿತ್ತು. ಮೌಲ್ಯದ ಲೆಕ್ಕದಲ್ಲಿ ₹1.12 ಲಕ್ಷ ಕೋಟಿಗಳಷ್ಟಿತ್ತು.

ವಿದೇಶಿ ವಿನಿಮಯದ ಒಳಹರಿವು ಮತ್ತು ಹೊರಹರಿವಿನ ನಡುವಣ ವ್ಯತ್ಯಾಸವೇ ಚಾಲ್ತಿ ಖಾತೆ ಕೊರತೆ.

ADVERTISEMENT

ಕಚ್ಚಾ ತೈಲ ದರದಲ್ಲಿ ಇಳಿಕೆ ಮತ್ತು ಬಂಡವಾಳ ಸ್ವೀಕೃತಿ ಹೆಚ್ಚಾಗಿರುವುದರಿಂದ ಚಾಲ್ತಿ ಖಾತೆ ಕೊರತೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ತಿಳಿಸಿದೆ.

ವಿದೇಶಿ ನೇರ ಬಂಡವಾಳ ₹68,160 ಕೋಟಿಗಳಿಂದ ₹2.26 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ವಿತ್ತೀಯ ಕೊರತೆ ₹5.54 ಲಕ್ಷ ಕೋಟಿ

ದೇಶದ ವಿತ್ತೀಯ ಕೊರತೆಯು ಆಗಸ್ಟ್‌ ತಿಂಗಳ ಅಂತ್ಯಕ್ಕೆ ₹ 5.54 ಲಕ್ಷ ಕೋಟಿಗೆ ತಲುಪಿದೆ.

ಇ‌ದು2019–20ನೇ ಹಣಕಾಸು ವರ್ಷಕ್ಕೆ ಬಜೆಟ್‌ ಅಂದಾಜಿನಲ್ಲಿ ಶೇ 78.7ರಷ್ಟಾಗಿದೆ ಎಂದು ಮಹಾಲೇಖಪಾಲರ (ಸಿಜಿಎ) ವರದಿಯಲ್ಲಿ ತಿಳಿಸಲಾಗಿದೆ.

ವರಮಾನ ಮತ್ತು ವೆಚ್ಚದ ನಡುವಣ ಅಂತರವೇ ವಿತ್ತೀಯ ಕೊರತೆಯಾಗಿದೆ. 2018–19ನೇ ಹಣಕಾಸು ವರ್ಷದ ಆಗಸ್ಟ್‌ ಅಂತ್ಯಕ್ಕೆ ಬಜೆಟ್‌ ಅಂದಾಜಿನ ಶೇ 86.5ರಷ್ಟಾಗಿತ್ತು.

2019–20ಕ್ಕೆ ವಿತ್ತೀಯ ಕೊರತೆ ಜಿಡಿಪಿಯ ಶೇ 3.3 ರಷ್ಟು ಮೌಲ್ಯದ ಲೆಕ್ಕದಲ್ಲಿ ₹ 7.03 ಲಕ್ಷ ಕೋಟಿಯಷ್ಟಕ್ಕೆ ನಿಯಂತ್ರಿಸಲು ಗುರಿಯನ್ನು ಸರ್ಕಾರ ಹೊಂದಿದೆ.

ಆದರೆ, ಕಾರ್ಪೊರೇಟ್‌ ತೆರಿಗೆ ದರ ಕಡಿತ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ₹ 1.45 ಲಕ್ಷ ಕೋಟಿ ಹೊರೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.