ADVERTISEMENT

ಕೆನರಾ ಬ್ಯಾಂಕ್‌ಗೆ ₹ 281 ಕೋಟಿ ನಿವ್ವಳ ಲಾಭ

​ಪ್ರಜಾವಾಣಿ ವಾರ್ತೆ
Published 25 ಜುಲೈ 2018, 19:30 IST
Last Updated 25 ಜುಲೈ 2018, 19:30 IST
ರಾಕೇಶ್‌
ರಾಕೇಶ್‌   

ಬೆಂಗಳೂರು: ಕೆನರಾ ಬ್ಯಾಂಕ್‌, ಜೂನ್‌ ತಿಂಗಳಾಂತ್ಯಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ₹ 281.49 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ಒಂದು ವರ್ಷದ ಹಿಂದಿನ ಇದೇ ಅವಧಿಯಲ್ಲಿನ ₹ 251.60 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ, ಈ ಬಾರಿ ಶೇ 11.87ರಷ್ಟು ಏರಿಕೆಯಾಗಿದೆ. ಒಟ್ಟು ವರಮಾನವು ವರ್ಷದ ಹಿಂದಿನ ₹ 12,304 ಕೋಟಿಗಳಿಂದ ₹ 13,192 ಕೋಟಿಗಳಿಗೆ ಏರಿಕೆಯಾಗಿದೆ.

ಹಿಂದಿನ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ₹ 4,860 ಕೋಟಿಗಳಷ್ಟು ನಷ್ಟಕ್ಕೆ ಗುರಿಯಾಗಿದ್ದ ಸರ್ಕಾರಿ ಸ್ವಾಮ್ಯದ ಈ ಬ್ಯಾಂಕ್‌, ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಿನಲ್ಲಿ ಲಾಭದ ಹಾದಿಗೆ ಮರಳಿದೆ. ಮಾರುಕಟ್ಟೆಯ ನಿರೀಕ್ಷೆಗಳನ್ನು ಹುಸಿ ಮಾಡಿದೆ. ಬಡ್ಡಿ ವರಮಾನದಲ್ಲಿನ ಹೆಚ್ಚಳವು ಲಾಭದ ಏರಿಕೆಗೆ ಮುಖ್ಯ ಕಾರಣವಾಗಿದೆ.

ADVERTISEMENT

‘ಹಿಂದಿನ ಮೂರ್ನಾಲ್ಕು ವರ್ಷಗಳಿಂದ ಬ್ಯಾಂಕ್‌ ತನ್ನ ವಹಿವಾಟಿನ ಸ್ವರೂಪದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದೆ. ಸಾಂಸ್ಥಿಕ ಸ್ವರೂಪವನ್ನೂ ಬದಲಾಯಿಸಿದೆ. ಇದರಿಂದ ಉತ್ತಮ ಫಲಿತಾಂಶ ಸಾಧ್ಯವಾಗಿದೆ’ ಎಂದು ಬ್ಯಾಂಕ್‌ನ ಸಿಇಒ ರಾಕೇಶ್‌ ಶರ್ಮಾ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಿಟೇಲ್‌ ಸಾಲದ ಪ್ರಮಾಣವು ಶೇ 36ರಷ್ಟು ಏರಿಕೆಯಾಗಿದೆ. ಇದರಿಂದ ಬಡ್ಡಿ ವರಮಾನವು ₹ 10,195 ಕೋಟಿಗಳಿಂದ ₹ 11,359 ಕೋಟಿಗಳಿಗೆ ಏರಿಕೆಯಾಗಿದೆ. ಆದರೆ, ಇತರ ಮೂಲಗಳ ವರಮಾನವು ₹ 2,108 ಕೋಟಿಗಳಿಂದ ₹ 1,832 ಕೋಟಿಗಳಿಗೆ ಇಳಿಕೆಯಾಗಿದೆ.

‘ನಿವ್ವಳ ವಸೂಲಾಗದ ಸಾಲದ ಪ್ರಮಾಣವು ಶೇ 7.09 ರಿಂದ ಶೇ 6.91ಕ್ಕೆ ಇಳಿದಿದೆ. ವಸೂಲಾಗದ ಸಾಲಗಳಿಗಾಗಿ ತೆಗೆದು ಇರಿಸುವ ಮೊತ್ತವು ₹2,270 ಕೋಟಿಗಳಿಂದ ₹ 2,466 ಕೋಟಿಗಳಿಗೆ ಏರಿಕೆಯಾಗಿದೆ.ಬ್ಯಾಂಕ್‌ನ ಒಟ್ಟಾರೆ ವಹಿವಾಟು ಈಗ ₹ 9.2 ಲಕ್ಷ ಕೋಟಿಗೆ ತಲುಪಿದೆ’ ಎಂದು ಅವರು ಹೇಳಿದರು.

ಷೇರುಬೆಲೆ: ಷೇರುಪೇಟೆಯ ಬುಧವಾರದ ವಹಿವಾಟಿನಲ್ಲಿ ಬ್ಯಾಂಕ್‌ನ ಷೇರು ಬೆಲೆ ಶೇ 1.78ರಷ್ಟು ಏರಿಕೆಯಾಗಿ ₹ 257.60ಕ್ಕೆ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.