ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶದ ಬಗ್ಗೆ ಸುಳ್ಳು ಜಾಹೀರಾತು ನೀಡಿದ ಆರೋಪದ ಮೇರೆಗೆ, ಮೂರು ಕೋಚಿಂಗ್ ಕೇಂದ್ರಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಒಟ್ಟು ₹15 ಲಕ್ಷ ದಂಡವನ್ನು ಗುರುವಾರ ವಿಧಿಸಿದೆ.
ವಾಜಿರಾವ್ ಮತ್ತು ರೆಡ್ಡಿ ಸಂಸ್ಥೆ ಹಾಗೂ ಸ್ಟಡಿಐಕ್ಯು ಐಎಎಸ್‌ಗೆ ತಲಾ ₹7 ಲಕ್ಷ ಮತ್ತು ಎಡ್ಜ್ ಐಎಎಸ್ ಕೇಂದ್ರಕ್ಕೆ ₹1 ಲಕ್ಷ ದಂಡ ವಿಧಿಸಿದೆ.
ಯುಪಿಎಸ್‌ಇ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಲ್ಲಿ ಹಲವರು ಸಂದರ್ಶನ ಎದುರಿಸುವ ಬಗ್ಗೆಯಷ್ಟೇ ಈ ಕೇಂದ್ರಗಳಿಂದ ಮಾರ್ಗದರ್ಶನ ಪಡೆದಿರುತ್ತಾರೆ. ಆದರೆ, ಈ ವಿಷಯವನ್ನು ಕೇಂದ್ರಗಳು ಮರೆಮಾಚಿ, ದಾರಿ ತಪ್ಪಿಸುವ ಜಾಹೀರಾತು ನೀಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಹಾಗೂ ಗ್ರಾಹಕರಿಗೆ ರಕ್ಷಣೆ ನೀಡುವ ಉದ್ದೇಶದಿಂದ ದಂಡ ವಿಧಿಸಲಾಗಿದೆ ಎಂದು ಸಿಸಿಪಿಎ ಮುಖ್ಯ ಆಯುಕ್ತೆ ನಿಧಿ ಖರೆ ಹೇಳಿದ್ದಾರೆ.
2022ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿ, ಆಯ್ಕೆಯಾದ 933 ಅಭ್ಯರ್ಥಿಗಳ ಪೈಕಿ 617 ಅಭ್ಯರ್ಥಿಗಳು ವಾಜಿರಾವ್ ಮತ್ತು ರೆಡ್ಡಿ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ ಎಂದು ಕೇಂದ್ರವು ಜಾಹೀರಾತು ಪ್ರಕಟಿಸಿತ್ತು. ಸ್ಟಡಿಐಕ್ಯು ಐಎಎಸ್ ಸಹ ತನ್ನ 120ಕ್ಕೂ ಹೆಚ್ಚು ಅಭ್ಯರ್ಥಿಗಳು 2023ರಲ್ಲಿ ಆಯ್ಕೆಯಾಗಿದ್ದಾರೆ ಎಂದು ಹೇಳಿತ್ತು. ಆದರೆ, ಈ ಕುರಿತು ಸೂಕ್ತ ದಾಖಲೆ ಒದಗಿಸುವಲ್ಲಿ ಕೇಂದ್ರಗಳು ವಿಫಲಗೊಂಡಿವೆ.
ಇಲ್ಲಿಯವರೆಗೆ ಸಿಸಿಪಿಎ 45 ತರಬೇತಿ ಕೇಂದ್ರಗಳಿಗೆ ನೋಟಿಸ್ ನೀಡಿದೆ. 22 ಕೇಂದ್ರಗಳಿಗೆ ದಂಡ ವಿಧಿಸಿದ್ದು, ₹71 ಲಕ್ಷ ದಂಡ ಸಂಗ್ರಹಿಸಿದೆ ಎಂದು ಸರ್ಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.