ಜಿಎಸ್‌ಟಿ
ನವದೆಹಲಿ: ಗುಜರಾತ್‌ನಲ್ಲಿ ನಾಲ್ಕು ಹಣಕಾಸು ವರ್ಷಗಳಲ್ಲಿ 12,803 ಜಿಎಸ್‌ಟಿ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ.
2021–22ರ ಹಣಕಾಸು ವರ್ಷದಿಂದ 2024–25ರ ಅಕ್ಟೋಬರ್ 31ರ ವರೆಗೆ ಕೇಂದ್ರ ತೆರಿಗೆ ಅಧಿಕಾರಿಗಳು 12,803 ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಒಟ್ಟು 101 ಜನರನ್ನು ಬಂಧಿಸಲಾಗಿದೆ ಎಂದು ಗುಜರಾತ್‌ನಲ್ಲಿ ಜಿಎಸ್‌ಟಿ ವಂಚನೆಗೆ ಸಂಬಂಧಿಸಿದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.
2023–24ರಲ್ಲಿ ಜಿಎಸ್‌ಟಿ ಸಂಗ್ರಹ ₹20.18 ಲಕ್ಷ ಕೋಟಿಯಷ್ಟಿತ್ತು. ಇದೇ ವೇಳೆ ₹2.08 ಲಕ್ಷ ಕೋಟಿ ಮರುಪಾವತಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
ಕಳೆದ ಐದು ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಸಂಗ್ರಹದ ಬಗ್ಗೆ ರಾಜ್ಯಸಭೆಯಲ್ಲಿ ಪ್ರತ್ಯೇಕ ಪ್ರಶ್ನೆಗೆ ಉತ್ತರ ನೀಡಿದ ಅವರು, 2022–23ರಲ್ಲಿ ₹18.08 ಲಕ್ಷ ಕೋಟಿ, 2021–22ರಲ್ಲಿ ₹14.83 ಲಕ್ಷ ಕೋಟಿ ಮತ್ತು 2020–21ರಲ್ಲಿ ₹11.37 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಇದೇ ವೇಳೆ, ಕ್ರಮವಾಗಿ ₹2.20 ಲಕ್ಷ ಕೋಟಿ, ₹1.83 ಲಕ್ಷ ಕೋಟಿ, ₹1.25 ಲಕ್ಷ ಕೋಟಿ ಮರುಪಾವತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಅಕ್ಟೋಬರ್‌ವರೆಗೆ ಜಿಎಸ್‌ಟಿ ಸಂಗ್ರಹವು ₹12.74 ಲಕ್ಷ ಕೋಟಿಯಾಗಿದ್ದು, ₹1.47 ಲಕ್ಷ ಕೋಟಿ ಮರುಪಾವತಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.