ADVERTISEMENT

ನೇರ ಮಾರಾಟ ಉದ್ಯಮಕ್ಕೆ ಕೇಂದ್ರದ ಹೊಸ ನಿಯಮ; ಪಿರಮಿಡ್‌ ಸ್ಕೀಂಗಳಿಗೆ ಕಡಿವಾಣ

ಪಿಟಿಐ
Published 29 ಡಿಸೆಂಬರ್ 2021, 9:49 IST
Last Updated 29 ಡಿಸೆಂಬರ್ 2021, 9:49 IST
ಮಾರಾಟ ಮತ್ತು ನಿಯಂತ್ರಣ– ಪ್ರಾತಿನಿಧಿಕ ಚಿತ್ರ
ಮಾರಾಟ ಮತ್ತು ನಿಯಂತ್ರಣ– ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆ್ಯಮ್‌ವೇ, ಟಪ್ಪರ್‌ವೇರ್ ಹಾಗೂ ಓರಿಫ್ಲೇಮ್‌ ರೀತಿಯ ನೇರ ಮಾರಾಟ ಕಂಪನಿಗಳು ಪಿರಮಿಡ್ ಸ್ಕೀಂಗಳಿಗೆ ಅಥವಾ ಹಣ ಚಲಾವಣೆಯ ಸ್ಕೀಂಗಳ ಪ್ರಚಾರ ಮಾಡುವುದಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಗ್ರಾಹಕರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಹೊಸ ನಿಯಮಗಳನ್ನು ಪ್ರಕಟಿಸಿದ್ದು, ಕಂಪನಿಗಳು 90 ದಿನಗಳಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕಿದೆ.

ಉತ್ಪನ್ನಗಳ ನೇರ ಮಾರಾಟ ಅಥವಾ ಸೇವೆಗಳಿಂದ ಎದುರಾಗುವ ಕುಂದು ಕೊರತೆಗಳಿಗೆ (ಅಹವಾಲು) ಕಂಪನಿಗಳು ಹೊಣೆಗಾರರಾಗಿರುತ್ತಾರೆ.

ಗ್ರಾಹಕ ಸಂರಕ್ಷಣಾ (ನೇರ ಮಾರಾಟ) ನಿಯಮಗಳು, 2021 ಅನ್ನು ಒಳಗೊಂಡ ಅಧಿಸೂಚನೆಯನ್ನು ಗ್ರಾಹಕ ವ್ಯವಹಾರಗಳ ಸಚಿವಾಲಯವು ಹೊರಡಿಸಿದೆ. ನೇರ ಮಾರಾಟ ಕಂಪನಿಗಳು ಮತ್ತು ಇ–ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿ ಮಾರಾಟ ಮಾಡುವ ನೇರ ಮಾರಾಟಗಾರರು ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

ADVERTISEMENT

ಹೊಸ ನಿಯಮಗಳ ಅಡಿಯಲ್ಲಿ ನೇರ ಮಾರಾಟಗಾರರು ಮತ್ತು ನೇರ ಮಾರಾಟ ಸಂಸ್ಥೆಗಳ ಮೇಲ್ಪಿಚಾರಣೆಗಾಗಿ ರಾಜ್ಯ ಸರ್ಕಾರಗಳು ಸೂಕ್ತ ವ್ಯವಸ್ಥೆ ರೂಪಿಸಬೇಕಾಗುತ್ತದೆ.

'ಗ್ರಾಹಕ ಹಿತ ರಕ್ಷಣಾ ಕಾಯ್ದೆ ಅಡಿಯಲ್ಲಿ ಇದೇ ಮೊದಲ ಬಾರಿಗೆ ನೇರ ಮಾರಾಟ ಉದ್ಯಮಕ್ಕೆ ಸಂಬಂಧಿಸಿದ ನಿಯಮಗಳ ಅಧಿಸೂಚನೆ ಹೊರಡಿಸಲಾಗಿದೆ. ಕಂಪನಿಗಳು ಈ ನಿಯಮಗಳನ್ನು ಅನ್ವಯಿಸಿಕೊಳ್ಳದಿದ್ದರೆ, ಕಾಯ್ದೆಯ ಅಡಿಯಲ್ಲಿ ಸೂಕ್ತ ಕ್ರಮಕೈಗೊಳ್ಳಬಹುದಾಗುತ್ತದೆ' ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಂಪನಿಗಳು ಮತ್ತು ಮಾರಾಟಗಾರರು ಪಿರಮಿಡ್‌ ಸ್ಕೀಂಗಳನ್ನು ಪ್ರಚಾರ ಮಾಡುವುದು ಅಥವಾ ಅಂಥ ಸ್ಕೀಂಗಳಲ್ಲಿ ಯಾವುದೇ ವ್ಯಕ್ತಿಯನ್ನು ತೊಡಗಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.

ಗುರುತಿನ ಚೀಟಿ ಮತ್ತು ಮುಂಚಿತವಾಗಿ ಅನುಮತಿ ಪಡೆಯದೆಯೇ ನೇರ ಮಾರಾಟಗಾರರು ಗ್ರಾಹಕರಿರುವ ಜಾಗಗಳಿಗೆ ಭೇಟಿ ನೀಡುವಂತಿಲ್ಲ. ಭಾರತದಲ್ಲಿ ತನ್ನ ಸಂಸ್ಥೆಯನ್ನು ವಿಸ್ತರಿಸದಿದ್ದರೂ ಇಲ್ಲಿನ ಗ್ರಾಹಕರಿಗೆ ಸರಕು ಮತ್ತು ಸೇವೆಗಳನ್ನು ನೀಡುವ ನೇರ ಮಾರಾಟ ಕಂಪನಿಗಳು ಹಾಗೂ ದೇಶದ ಎಲ್ಲ ನೇರ ಮಾರಾಟ ಕಂಪನಿಗಳಿಗೂ ಹೊಸ ನಿಯಮಗಳು ಅನ್ವಯವಾಗಲಿವೆ.

ನಿಯಮದಲ್ಲಿರುವ ಇತರೆ ಅಂಶಗಳು...

* ನೇರ ಮಾರಾಟ ಕಂಪನಿಯು ಅನುಮೋದನೆ ನೀಡದೆಯೇ ಮಾರಾಟಗಾರರು ಉತ್ಪನ್ನಗಳ ಬಗ್ಗೆ ಸ್ವತಃ ವಿವರಣೆಗಳನ್ನು ಪ್ರಕಟಿಸಿಕೊಳ್ಳುವಂತಿಲ್ಲ.
* ನೇರ ಮಾರಾಟಗಾರರು ನೇರ ಮಾರಾಟ ಸಂಸ್ಥೆಗಳ ಜೊತೆಗೆ ಪೂರ್ವಲಿಖಿತ ಒಪ್ಪಂದ ಮಾಡಿಕೊಂಡಿರಬೇಕು.
* ಉತ್ಪನ್ನ, ಮಾರಾಟ, ಬೆಲೆ, ಷರುತ್ತುಗಳು, ಗ್ಯಾರಂಟಿ ಸೇರಿದಂತೆ ಎಲ್ಲ ವಿವರಗಳನ್ನು ಮಾರಾಟಗಾರರು ಗ್ರಾಹಕರಿಗೆ ಒದಗಿಸಬೇಕು.
* ಗ್ರಾಹಕರ ಅಹವಾಲು ಸ್ವೀಕರಿಸಲು ಕಂಪನಿಗಳು ಹೆಸರು, ಸಂಪರ್ಕ ವಿವರ, ಫೋನ್‌ ಸಂಖ್ಯೆ, ಇಮೇಲ್‌ ವಿಳಾಸ ಹಾಗೂ ಸಂಪರ್ಕಿಸಬೇಕಾದ ಅಧಿಕಾರಿಯ ಹುದ್ದೆಯ ಕುರಿತು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು.
* ವೆಬ್‌ಸೈಟ್‌ ವಿಳಾಸವನ್ನು ಉತ್ಪನ್ನಗಳ ವಿವರಣೆ ಪಟ್ಟಿಯಲ್ಲಿ ಮುದ್ರಿಸಿರಬೇಕು.
* 48 ಗಂಟೆಗಳಲ್ಲಿ ಗ್ರಾಹಕರ ಅಹವಾಲಿಗೆ ಪ್ರತಿಕ್ರಿಯೆ ನೀಡಬೇಕು ಹಾಗೂ ಒಂದು ತಿಂಗಳ ಒಳಗಾಗಿ ಪರಿಹಾರ ನೀಡಬೇಕು.

ದೇಶದಲ್ಲಿ ಕಾರ್ಯಾಚರಿಸುತ್ತಿರುವ ಕೆಲವು ನೇರ ಮಾರಾಟ ಕಂಪನಿಗಳು (ಸೂಚನೆ: ಉದಾಹರಣೆಗಾಗಿ)

* ಮೈ ಲೈಫ್‌ ಸ್ಟೈಟ್‌
* ಮೋದಿಕೇರ್‌
* ಹರ್ಬಾಲೈಫ್‌
* ಆ್ಯಮ್‌ವೇ
* ಟಪ್ಪರ್‌ವೇರ್
* ಓರಿಫ್ಲೇಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.