ADVERTISEMENT

ಕಾಫಿ ಬೆಳೆ: ಆರಂಭಿಕ ಅಂದಾಜಿಗಿಂತ ಕಡಿಮೆ?

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 0:28 IST
Last Updated 18 ನವೆಂಬರ್ 2025, 0:28 IST
   

ಚಿಕ್ಕಮಗಳೂರು: ಹವಾಮಾನ ಬದಲಾವಣೆಯ ಪರಿಣಾಮವಾಗಿ ಕಾಫಿ ಬೆಳೆಯು ಈ ಬಾರಿ ತೀರಾ ಹೆಚ್ಚಾಗುವ ಸಾಧ್ಯತೆ ಇಲ್ಲ ಎಂದು ಕರ್ನಾಟಕ ಬೆಳೆಗಾರರ ಸಂಘವು (ಕೆಪಿಎ) ಅಂದಾಜು ಮಾಡಿದೆ.

ಹಿಂದಿನ ವರ್ಷದಲ್ಲಿ (2024–25) ದೇಶದಲ್ಲಿ ಒಟ್ಟು 3.63 ಲಕ್ಷ ಟನ್ ಕಾಫಿ ಬೆಳೆ ಆಗಿತ್ತು. ಈ ಬಾರಿ ಕಾಫಿ ಮಂಡಳಿ ಮಾಡಿರುವ ಆರಂಭಿಕ ಅಂದಾಜಿನ ಪ್ರಕಾರ ದೇಶದಲ್ಲಿ ಒಟ್ಟು 4.03 ಲಕ್ಷ ಟನ್ ಕಾಫಿ ಬೆಳೆ ಆಗಲಿದೆ. ಆದರೆ ವಾಸ್ತವದಲ್ಲಿ ಬೆಳೆಯು ಅದಕ್ಕಿಂತ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಕೆಪಿಎ ಅಧ್ಯಕ್ಷ ಅರವಿಂದ ರಾವ್ ಅವರು ಹೇಳಿದರು.

ಕೆಪಿಎ ವಾರ್ಷಿಕ ಮಹಾ ಅಧಿವೇಶನಕ್ಕೆ ಮೊದಲು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ‘ಹವಾಮಾನ ಬದಲಾವಣೆಯು ಬೆಳೆ ಕಡಿಮೆ ಆಗುತ್ತಿರುವುದಕ್ಕೆ ಬಹುಮುಖ್ಯ ಕಾರಣ’ ಎಂದು ಹೇಳಿದರು. ಈ ಬಾರಿಯ ಕಾಫಿ ಉತ್ಪಾದನೆಯು ಕಳೆದ ವರ್ಷದ ಉತ್ಪಾದನೆಯಾದ 3.63 ಲಕ್ಷ ಟನ್ ಆಸುಪಾಸಿನಲ್ಲಿ ಇರಲಿದೆ ಎಂದು ರಾವ್ ತಿಳಿಸಿದರು.

ADVERTISEMENT

ಕರ್ನಾಟಕದಲ್ಲಿ ಕಳೆದ ವರ್ಷ ಕಾಫಿ ಉತ್ಪಾದನೆಯು 2.56 ಲಕ್ಷ ಟನ್‌ ಆಗಿತ್ತು. ಈ ಬಾರಿ ಅದು 2.80 ಲಕ್ಷ ಟನ್ ಆಗಬಹುದು ಎಂಬುದು ಕಾಫಿ ಮಂಡಳಿಯ ಆರಂಭಿಕ ಅಂದಾಜು ಆಗಿದೆ.

ಹವಾಮಾನ ಬದಲಾವಣೆಯ ಪರಿಣಾಮವು ಕರ್ನಾಟಕದಲ್ಲಿಯೂ ತೀವ್ರವಾಗಿದೆ. ಜಾಗತಿಕ ಮಟ್ಟದಲ್ಲಿನ ಹವಾಮಾನ ಬದಲಾವಣೆಯು ಮಳೆ ಅಕಾಲಿಕವಾಗಿ ಸುರಿಯುವಂತೆ ಮಾಡುತ್ತಿದೆ. ಬರ ತೀವ್ರವಾಗುತ್ತಿದೆ, ಮಣ್ಣಿನ ಸವಕಳಿ ಹಾಗೂ ಭೂಕುಸಿತಕ್ಕೆ ಕೂಡ ಇದು ಕಾರಣವಾಗುತ್ತಿದೆ. ಬೆಳೆಯ ಕುಸಿತಕ್ಕೆ ಇದು ದಾರಿ ಮಾಡಿಕೊಡುತ್ತಿದ್ದು, ದೀರ್ಘಾವಧಿಯಲ್ಲಿ ಕಾಫಿ ಎಸ್ಟೇಟ್‌ಗಳ ಉಳಿವಿನ ಮೇಲೆಯೂ ಇದು ಪರಿಣಾಮ ಉಂಟುಮಾಡುತ್ತದೆ ಎಂದು ರಾವ್ ಅವರು ಕಳವಳ ವ್ಯಕ್ತಪಡಿಸಿದರು.

‘ರಾಸಾಯನಿಕ ಗೊಬ್ಬರದ ಬಳಕೆಯು ಮುಂದುವರಿದಿರುವುದು ಹಾಗೂ ಅತಿಯಾದ ಮಳೆಯಿಂದಾಗಿ ಮಣ್ಣಿನ ಸವಕಳಿ ಉಂಟಾಗುತ್ತಿದೆ. ಇದರ ಪರಿಣಾಮವಾಗಿ ಮಣ್ಣಿನ ಆರೋಗ್ಯವು ಕುಸಿದಿದೆ. ಈ ಸಮಸ್ಯೆಯನ್ನು ಪರಿಹರಿಸಲು ನಮಗೆ ಮಾರ್ಗದರ್ಶನದ ಅಗತ್ಯ ಇದೆ’ ಎಂದು ಅವರು ಹೇಳಿದರು.

ವಾತಾವರಣದಲ್ಲಿ ತಾಪಮಾನವು ಒಂದು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾದರೆ ಕಾಫಿ ಬೆಳೆಯು ಶೇಕಡ 5ರಷ್ಟು ಕಡಿಮೆ ಆಗುತ್ತದೆ.
- ಅರವಿಂದ ರಾವ್, ಕೆಪಿಎ ಅಧ್ಯಕ್ಷ

‘ತೋಟಗಾರಿಕಾ ಬೆಳೆಗಳಿಗೆ ಹಾಗೂ ಕೃಷಿ ಬೆಳೆಗಳಿಗೆ ಲಭ್ಯವಿರುವ ವಿಮಾ ಸೌಲಭ್ಯವು ಈಗ ಕಾಫಿ ಬೆಳೆಗೆ ಲಭ್ಯವಿಲ್ಲ. ಆದರೆ ಹವಾಮಾನ ಬದಲಾವಣೆಯ ಪರಿಣಾಮವನ್ನು ಗಮನದಲ್ಲಿ ಇರಿಸಿಕೊಂಡು ಕಾಫಿ ಬೆಳೆಗೆ ಕೂಡ ವಿಮಾ ಸೌಲಭ್ಯವನ್ನು ನೀಡಬೇಕು. ಹವಾಮಾನ ಬದಲಾವಣೆಯ ತೀವ್ರ ಪರಿಣಾಮಗಳಿಗೆ ಪರಿಹಾರ ರೂಪದಲ್ಲಿ ವಿಮೆಯ ನೆರವು ಬೇಕು’ ಎಂದು ಅವರು ಒತ್ತಾಯಿಸಿದರು.

ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ತಡೆಯಲು ಕೂಡ ಪ್ರಯತ್ನಗಳು ಆಗಬೇಕಿದೆ. ಕಾಫಿ ಬೆಳೆಗಾರರು ಮಾನವ–ವನ್ಯಜೀವಿ ಸಂಘರ್ಷದಿಂದಾಗಿ ತಮ್ಮವರನ್ನು ಕಳೆದುಕೊಳ್ಳುತ್ತಿದ್ದಾರೆ, ಬೆಳೆಗಳಿಗೆ ಹಾನಿ ಆಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಜಾಗತಿಕ ಮಟ್ಟದಲ್ಲಿ ಕಾಫಿ ಮಾರುಕಟ್ಟೆಯಲ್ಲಿ ಸ್ಪರ್ಧೆ ತೀವ್ರವಾಗುತ್ತಿದೆ. ಹೀಗಾಗಿ ಕಾಫಿಯ ಮೌಲ್ಯವರ್ಧನೆಯ ಅಗತ್ಯ ಹೆಚ್ಚಿದೆ. ಈಗ ಕಾಫಿಗೆ ಹೆಚ್ಚಿನ ಬೆಲೆ ಸಿಗುತ್ತಿದ್ದರೂ, ಇದು ಹೆಚ್ಚಿನ ಅವಧಿಗೆ ಮುಂದುವರಿಯುತ್ತದೆ ಎನ್ನಲಾಗದು ಎಂದು ಅವರು ಬೆಳೆಗಾರರಿಗೆ ಕಿವಿಮಾತು ಹೇಳಿದರು.

‘ಸರ್ಫೇಸಿ ಕಾಯ್ದೆ: ತಿದ್ದುಪಡಿ ಅಗತ್ಯ’

ಕಾಫಿ ತೋಟಗಳ ಅಭಿವೃದ್ಧಿಗಾಗಿ ಪಡೆದ ಸಾಲವನ್ನು ಸರ್ಫೇಸಿ ಕಾಯ್ದೆಯ ಅಡಿ ವಸೂಲು ಮಾಡಲು ಅಧಿಕಾರಿಗಳು ಮುಂದಾಗುತ್ತಿರುವ ‍ಪರಿಣಾಮವಾಗಿ ಅಂದಾಜು ಎರಡು ಸಾವಿರ ಬೆಳೆಗಾರರಿಗೆ ರಾಜ್ಯದಲ್ಲಿ ತೊಂದರೆ ಆಗಿದೆ ಎಂದು ಕೆಪಿಎ ಉಪಾಧ್ಯಕ್ಷ ಸಲ್ಮಾನ್ ಬಸೀರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಫಿ ಬೆಳೆಗಾರರಿಗೆ ನೀಡಿರುವ ಬೆಳೆ ಸಾಲದ ವಸೂಲಿಗೆ ಈ ಕಾಯ್ದೆಯ ಅಂಶಗಳನ್ನು ಬಳಸಿಕೊಳ್ಳುತ್ತಿರುವುದರಿಂದಾಗಿ ಸಮಸ್ಯೆ ಆಗುತ್ತಿದೆ. ಇದರಿಂದ ಬೆಳೆಗಾರರನ್ನು ರಕ್ಷಿಸಲು ಕಾಯ್ದೆಗೆ ತಿದ್ದುಪಡಿ ಅಗತ್ಯ. ಕೇಂದ್ರ ಸರ್ಕಾರವೇ ಈ ವಿಚಾರವಾಗಿ ಮುಂದಡಿ ಇರಿಸಬೇಕು ಎಂದು ದಕ್ಷಿಣ ಭಾರತದ ಬೆಳೆಗಾರರ ಒಕ್ಕೂಟದ (ಉಪಾಸಿ) ಅಧ್ಯಕ್ಷ ಅಜಯ್ ತಿಪ್ಪಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.