
ಬೆಂಗಳೂರು: ವೈಮಾಂತರಿಕ್ಷ ಮತ್ತು ರಕ್ಷಣಾ ವಲಯಕ್ಕೆ ಸುಧಾರಿತ ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ಒದಗಿಸುವ ಕೊರೇಲ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ‘ಸರಣಿ ಬಿ’ ಬಂಡವಾಳ ಸಂಗ್ರಹ ಹಂತದಲ್ಲಿ ಒಟ್ಟು 30 ಮಿಲಿಯನ್ ಡಾಲರ್ (ಅಂದಾಜು ₹268 ಕೋಟಿ) ಬಂಡವಾಳ ಸಂಗ್ರಹಿಸಿದೆ.
ಈ ಹೂಡಿಕೆ ಸುತ್ತಿನಲ್ಲಿ ವ್ಯಾಲ್ಯೂಕ್ವೆಸ್ಟ್ ಸ್ಕೇಲ್ ಫಂಡ್ ಪ್ರಮುಖ ಹೂಡಿಕೆದಾರನಾಗಿ ಭಾಗವಹಿಸಿತ್ತು. ಕೊರೇಲ್ ಕಂಪನಿಯ ಪ್ರಾರಂಭಿಕ ಹೂಡಿಕೆದಾರ ಕಂಪನಿಯಾದ ‘360 ಒನ್ ಅಸೆಟ್’ ಎರಡನೆಯ ಹಂತದ ಬಂಡವಾಳ ಸಂಗ್ರಹ ಕಾರ್ಯದಲ್ಲಿಯೂ ಭಾಗಿಯಾಗಿದ್ದು, ತನ್ನ ಹೂಡಿಕೆ ಮೊತ್ತವನ್ನು ಹೆಚ್ಚು ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.
‘ಸರಣಿ ಬಿ’ ಹಂತವು ಕೊರೇಲ್ ಪಾಲಿಗೆ ಮಹತ್ವದ ಮೈಲಿಗಲ್ಲು. ಈ ಹಂತದಲ್ಲಿ ಆಗಿರುವ ಹೂಡಿಕೆಗಳು ಕಂಪನಿಯ ಬೆಳವಣಿಗೆಯನ್ನು ಇನ್ನಷ್ಟು ವೇಗ ಆಗಿಸಿರುವುದರ ಜೊತೆಗೆ, ಕಂಪನಿಯ ವರಮಾನ ಹೆಚ್ಚಿಸಿಕೊಳ್ಳಲು, ದೀರ್ಘಕಾಲೀನ ಹಾಗೂ ಸ್ಥಿರವಾದ ಬೆಳವಣಿಗೆಯನ್ನು ಸಾಧಿಸಲು ಕೂಡ ನೆರವಾಗುತ್ತದೆ ಎಂದೂ ಪ್ರಕಟಣೆಯು ವಿವರಿಸಿದೆ.
ಕಂಪನಿಯು ಈ ಬಂಡವಾಳವನ್ನು ತನ್ನ ಉತ್ಪಾದನಾ ಸಾಮರ್ಥ್ಯ ವಿಸ್ತರಿಸಲು, ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ಉತ್ತೇಜನ ನೀಡಲು ಸೇರಿದಂತೆ ಹಲವು ಪ್ರಮುಖ ಉಪಕ್ರಮಗಳಿಗೆ ಬಳಸಲಿದೆ.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೊರೇಲ್ ರೆಡಾರ್, ಎಲೆಕ್ಟ್ರಾನಿಕ್ ಯುದ್ಧತಂತ್ರ, ಏವಿಯಾನಿಕ್ಸ್ ವಲಯಗಳಿಗೆ ಸುಧಾರಿತ ಎಲೆಕ್ಟ್ರಾನಿಕ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿ, ಉತ್ಪಾದಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.