ADVERTISEMENT

ಗ್ರಾಹಕರ ವರ್ತನೆಯಲ್ಲಿ ಬದಲಾವಣೆ ತಂದ ಕೋವಿಡ್‌–19

ಪಿಟಿಐ
Published 11 ಆಗಸ್ಟ್ 2020, 2:17 IST
Last Updated 11 ಆಗಸ್ಟ್ 2020, 2:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್–19 ಸಾಂಕ್ರಾಮಿಕವು ಗ್ರಾಹಕರ ವರ್ತನೆಯಲ್ಲಿ ಶಾಶ್ವತ ಬದಲಾವಣೆಗಳನ್ನು ತರುವ ಸಾಧ್ಯತೆ ಇದೆ ಎಂದು ಸಮೀಕ್ಷೆಯೊಂದು ಹೇಳಿದೆ. ಹಾಗೆಯೇ, ಗ್ರಾಹಕ ಉತ್ಪನ್ನಗಳು ಹಾಗೂ ಗ್ರಾಹಕ ಸೇವಾ ಉದ್ಯಮದಲ್ಲಿ ಇದು ಮಹತ್ವದ ಬದಲಾವಣೆಗಳನ್ನೂ ತರಬಹುದು ಎಂದು ಅದು ಹೇಳಿದೆ.

‘ಹಿಂದೆ ಖರೀದಿ ಮಾಡುತ್ತಿದ್ದ ರೀತಿಯಲ್ಲೇ ಈಗಲೂ ಖರೀದಿ ಚಟುವಟಿಕೆಗಳಲ್ಲಿ ತೊಡಗಲು ಜನ ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯ ಉತ್ಪನ್ನಗಳು ಹಾಗೂ ಬ್ರ್ಯಾಂಡ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ’ ಎಂದು ‘ಆ್ಯಕ್ಸೆಂಚರ್ ಕೋವಿಡ್–19 ಗ್ರಾಹಕರ ನಾಡಿಮಿಡಿತ ಸಂಶೋಧನಾ ವರದಿ’ ಹೇಳಿದೆ. ಈ ಸಮೀಕ್ಷೆಯು ಭಾರತದಲ್ಲಿ ಎರಡೂವರೆ ಸಾವಿರ ಜನರಿಂದ ಹಾಗೂ ಜಗತ್ತಿನಾದ್ಯಂತ 45 ಸಾವಿರ ಜನರಿಂದ ಮಾಹಿತಿ ಸಂಗ್ರಹಿಸಿದೆ. ಸಮೀಕ್ಷೆಯನ್ನು ಮಾರ್ಚ್‌ನಿಂದ ಜೂನ್‌ ನಡುವೆ ನಡೆಸಲಾಗಿದೆ.

‘ಗ್ರಾಹಕರ ಪೈಕಿ ಶೇಕಡ 90ರಷ್ಟು ಜನ ತಮ್ಮ ಬದುಕು, ಕೆಲಸ, ಖರೀದಿ ಪ್ರವೃತ್ತಿಗಳಲ್ಲಿ ದೀರ್ಘಾವಧಿಯ ಬದಲಾವಣೆಗಳನ್ನು ತಂದುಕೊಳ್ಳುತ್ತಿದ್ದಾರೆ. ಗ್ರಾಹಕರ ಬಳಕೆಯ ಬ್ರ್ಯಾಂಡ್‌ಗಳ ಪಾಲಿಗೆ ಕೋವಿಡ್‌–19 ಪೂರ್ವದ ದಿನಗಳು ಮತ್ತೆಂದೂ ಬರಲಿಕ್ಕಿಲ್ಲ’ ಎಂಬುದನ್ನು ಭಾರತದಲ್ಲಿ ನಡೆಸಿದ ಸಮೀಕ್ಷೆ ಹೇಳಿದೆ. ಸಾಂಕ್ರಾಮಿಕದ ಕಾರಣದಿಂದಾಗಿ ಆನ್‌ಲೈನ್‌ ಮೂಲಕ ದಿನಸಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅದು ಹೇಳಿದೆ.

ADVERTISEMENT

ಅಗತ್ಯವಲ್ಲದ ವಸ್ತುಗಳ ಖರೀದಿಯನ್ನು ಜನ ಕಡಿಮೆ ಮಾಡಿದ್ದಾರೆ. ಅತ್ಯಂತ ಅಗತ್ಯವಾದ ವಸ್ತುಗಳ ಮೇಲೆ ಮಾತ್ರ ಅವರು ಗಮನ ನೀಡುತ್ತಿದ್ದಾರೆ. ತಾವು ಏನನ್ನು ಖರೀದಿಸುತ್ತಿದ್ದೇವೆ ಎಂಬುದರ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ. ಆಹಾರ ಪೋಲು ಮಾಡುವುದನ್ನು ತಗ್ಗಿಸಲು ಯತ್ನಿಸುತ್ತಿದ್ದಾರೆ. ದುಡ್ಡಿನ ಮೇಲೆ ನಿಗಾ ಇಟ್ಟುಕೊಂಡೇ ಖರೀದಿ ಕೆಲಸದಲ್ಲಿ ತೊಡಗುತ್ತಿದ್ದಾರೆ ಎಂಬುದು ಸಮೀಕ್ಷೆಯ ಮೂಲಕ ಕಂಡುಕೊಂಡ ಕೆಲವು ಮುಖ್ಯ ಅಂಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.