ADVERTISEMENT

ಡೀಸೆಲ್‌ ತುಟ್ಟಿ: ಸಾಗಣೆ ವೆಚ್ಚ ಶೇ 20 ಹೆಚ್ಚಾಗುವ ಸಾಧ್ಯತೆ

ಪಿಟಿಐ
Published 19 ಜುಲೈ 2020, 14:40 IST
Last Updated 19 ಜುಲೈ 2020, 14:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘ತೈಲ ದರವನ್ನು ಪ್ರತಿದಿನವೂ ಏರಿಕೆ ಮಾಡುವುದರಿಂದ ಸರಕು ಸಾಗಣೆ ವೆಚ್ಚ ಹೆಚ್ಚಾಗಲಿದೆ. ಅಂತಿಮವಾಗಿ ಅದರ ಹೊರೆ ಗ್ರಾಹಕನ ಮೇಲೆ ಬೀಳಲಿದೆ’ ಎಂದು ಅಖಿಲ ಭಾರತ ಮೋಟರ್‌ ಸಾರಿಗೆ ಕಾಂಗ್ರೆಸ್‌ನ (ಎಐಎಂಟಿಸಿ) ಪ್ರಮುಖರ ಸಮಿತಿ ಅಧ್ಯಕ್ಷ ಬಾಲ್‌ ಮಲ್ಕಿತ್‌ ಸಿಂಗ್‌ ಹೇಳಿದ್ದಾರೆ.

ಪೆಟ್ರೋಲ್‌, ಡೀಸೆಲ್ ದರವನ್ನು ಪ್ರತಿದಿನವೂ ಏರಿಕೆ ಮಾಡುವುದಕ್ಕೆ ಟ್ರಕ್‌ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದು, ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ದರದಲ್ಲಿ ಪರಿಷ್ಕರಣೆ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.

ಕಳೆದ ತಿಂಗಳು ಸತತವಾಗಿ 23 ದಿನ ಡೀಸೆಲ್‌ ದರ ಏರಿಕೆಯಾಗಿದೆ. ಹೀಗೆ ದಿನವೂ ದರ ಏರಿಕೆ ಮಾಡುತ್ತಿದ್ದರೆ ಕಾರ್ಯಾಚರಣೆ ವೆಚ್ಚ ಸರಿದೂಗಿಸಿಕೊಳ್ಳಲು ಸಾಗಣೆ ಶುಲ್ಕವನ್ನು ಶೇಕಡ 20ರಷ್ಟು ಹೆಚ್ಚಿಸುವ ಅನಿವಾರ್ಯ ಎದುರಾಗಬಹುದು ಎಂದು ಟ್ರಕ್‌ ಮಾಲೀಕರು ಹೇಳಿದ್ದಾರೆ.

ಟ್ರಕ್‌ನ ಕಾರ್ಯಾಚರಣೆ ವೆಚ್ಚದಲ್ಲಿ ಶೇಕಡ 65ರಷ್ಟು ಇಂಧನಕ್ಕೆ, ಶೇ 20ರಷ್ಟುಟೋಲ್‌ ಶುಲ್ಕಕ್ಕೆ ಬೇಕು ಎಂದು ಟ್ರಕ್‌ ಮಾಲೀಕರು ತಿಳಿಸಿದ್ದಾರೆ.

‘ಈಗಾಗಲೇ ಬೇಡಿಕೆ ಇಳಿಮುವಾಗಿದ್ದು, ಸಾಗಣೆ ಕೆಲಸವಿಲ್ಲದೇ ರಸ್ತೆ ಬದಿಯಲ್ಲಿ ನಿಂತಿರುವ ಟ್ರಕ್‌ಗಳ ಪ್ರಮಾಣ ಶೇ 55ರಷ್ಟಿದೆ. ಕಾರ್ಯಾಚರಣೆ ನಡೆಸುವುದೇ ಕಷ್ಟವಾಗಿದೆ. ಲಾಕ್‌ಡೌನ್‌ನಿಂದಾಗಿ ರಸ್ತೆ ಸಾರಿಗೆ ವಲಯವೇ ತತ್ತರಿಸಿದೆ’ ಎಂದು ಸಿಂಗ್‌ ತಿಳಿಸಿದ್ದಾರೆ.

‘ಟ್ರಕ್‌ ಮಾಲೀಕರ ಹಿತದೃಷ್ಟಿಯಿಂದ ಸಾಗಣೆ ವೆಚ್ಚ ಪರಿಷ್ಕರಣೆಯ ಅಗತ್ಯವಿದೆ. ಆದರೆ, ಸಾಗಣೆ ವೆಚ್ಚದಲ್ಲಿ ಆಗಲಿರುವ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸದೇ ಬೇರೆ ಆಯ್ಕೆ ಇಲ್ಲ. ವಹಿವಾಟನ್ನು ಉಳಿಸಿಕೊಳ್ಳಲು ಸದ್ಯದ ಮಟ್ಟಿಗೆ ಸಾಗಣೆ ವೆಚ್ಚದಲ್ಲಿ ಶೇ 20ರಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ ’ ಎಂದಿದ್ದಾರೆ.

ಬೇಡಿಕೆಗಳು

*ತಿಂಗಳಿಗೆ ಅಥವಾ ಮೂರು ತಿಂಗಳಿಗೊಮ್ಮೆ ಇಂಧನ ದರ ಪರಿಷ್ಕರಣೆ

*ದೇಶದಾದ್ಯಂತ ಏಕರೂಪದ ದರ: ಜಿಎಸ್‌ಟಿ ವ್ಯಾಪ್ತಿಗೆ ಡೀಸೆಲ್‌

*ಎಕ್ಸೈಸ್‌ ಸುಂಕ, ವ್ಯಾಟ್‌ ಇಳಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.