ನವದೆಹಲಿ: ಔಷಧಗಳ ಬೆಲೆ ಇಳಿಕೆ ಮಾಡುವಂತೆ ಔಷಧ ಕಂಪನಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಗಡುವು ದೇಶೀಯ ಜೆನೆರಿಕ್ ಔಷಧಗಳ ಉದ್ಯಮದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಔಷಧ ತಯಾರಕರ ಒಕ್ಕೂಟ ಹೇಳಿದೆ.
ವೈದ್ಯರ ಸಲಹೆ ಮೇರೆಗೆ (ಪ್ರಿಸ್ಕ್ರಿಪ್ಷನ್ ಡ್ರಗ್ಸ್) ರೋಗಿಗಳಿಗೆ ನೀಡುವ ಔಷಧಗಳ ಬೆಲೆ ಇಳಿಕೆಗೆ ಸಂಬಂಧಿಸಿದ ಕಾರ್ಯಾದೇಶಕ್ಕೆ ಟ್ರಂಪ್ ಸಹಿ ಹಾಕಿದ್ದು, 30 ದಿನಗಳ ಗಡುವು ನೀಡಿದೆ. ಈ ಆದೇಶದ ಹೊಸ ಔಷಧಗಳನ್ನು ತಯಾರಿಸುವ ಕಂಪನಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
‘ಜೆನೆರಿಕ್ ಉದ್ಯಮವು ಕಡಿಮೆ ಲಾಭದಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಮೆರಿಕದಲ್ಲಿ ಈ ಉದ್ಯಮದ ಮಾರುಕಟ್ಟೆ ಮೌಲ್ಯ ಶೇ 13ರಷ್ಟಿದೆ. ಹಾಗಾಗಿ, ಟ್ರಂಪ್ ಆದೇಶವು ಹೆಚ್ಚಿನ ಪರಿಣಾಮ ಬೀರುವುದಿಲ್ಲ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಜೈನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.