ADVERTISEMENT

‘ಎಟಿಎಂ’ ನಗದು ಕೊರತೆ ಸಮಸ್ಯೆ ಬಗೆಹರಿಸಲು ಆರ್‌ಬಿಐಗೆ ತಾಕೀತು

ಪಿಟಿಐ
Published 6 ಜನವರಿ 2019, 20:00 IST
Last Updated 6 ಜನವರಿ 2019, 20:00 IST
   

ನವದೆಹಲಿ: ನೋಟುಗಳ ಪೂರೈಕೆ ಸಮಸ್ಯೆಯಿಂದ ಉದ್ಭವಿಸಿರುವ ಬ್ಯಾಂಕ್‌ ಎಟಿಎಂಗಳ ಅಸಮರ್ಪಕ ಕಾರ್ಯನಿರ್ವಹಣೆ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸಬೇಕು ಎಂದು ಹಣಕಾಸಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಸೂಚಿಸಿದೆ.

ಎಟಿಎಂಗಳು ದಿನದ 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸದೆ ವ್ಯವಸ್ಥೆಯಲ್ಲಿ ನಗದು ಕೊರತೆ ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳಬೇಕು. ಅಗತ್ಯ ಇರುವ ಕಡೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಎಟಿಎಂಗಳನ್ನು ಸ್ಥಾಪಿಸಬೇಕು ಎಂದು ಸಂಸತ್ತಿಗೆ ಸಲ್ಲಿಸಲಾದ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.

ನಗದುರಹಿತ (ಡಿಜಿಟಲ್‌) ವಹಿವಾಟು ದೇಶದ ಎಲ್ಲೆಡೆ ವ್ಯಾಪಕವಾಗಿ ಜಾರಿಗೆ ಬಂದಿಲ್ಲ. ಎಟಿಎಂಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣಕ್ಕೆ ಜನರ ಮೇಲೆ ಒತ್ತಾಯಪೂರ್ವಕವಾದ ನಗದು ಕೊರತೆ ಸಮಸ್ಯೆ ಹೇರಬಾರದು. ಈ ಬಗ್ಗೆ ಆರ್‌ಬಿಐ ಗಮನ ಹರಿಸಬೇಕು ಎಂದು ಸೂಚಿಸಲಾಗಿದೆ.

ADVERTISEMENT

ಆರ್‌ಬಿಐ ಅಗತ್ಯ ಇರುವ ಪ್ರಮಾಣದಲ್ಲಿ ನಗದು ಪೂರೈಕೆ ಮಾಡದ ಕಾರಣಕ್ಕೆ ದೇಶದ ಅನೇಕ ಕಡೆಗಳಲ್ಲಿ ಎಟಿಎಂಗಳು ಕಾರ್ಯನಿರ್ವಹಿಸುತ್ತಿಲ್ಲದಿರುವುದನ್ನು ಸಮಿತಿಯು ಕೇಂದ್ರೀಯ ಬ್ಯಾಂಕ್‌ನ ಗಮನಕ್ಕೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.