ADVERTISEMENT

ಒಣಮೆಣಸಿನಕಾಯಿ: ₹50 ಸಾವಿರದಿಂದ ₹6 ಸಾವಿರಕ್ಕೆ ಕುಸಿದ ಧಾರಣೆ

‘ಪಿಡಿಪಿಎಸ್‌’ ಸಿಕ್ಕರೂ ಫಲವಿಲ್ಲ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 23:35 IST
Last Updated 27 ಜೂನ್ 2025, 23:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಳ್ಳಾರಿ: ತೀವ್ರ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಒಣಮೆಣಸಿನಕಾಯಿ ಬೆಳೆಗಾರರು, ಪ್ರತಿಭಟಿಸಿ ಸರ್ಕಾರದ ಮೇಲೆ ಒತ್ತಡ ತಂದು, ಕೇಂದ್ರ ಸರ್ಕಾರದಿಂದ ‘ಮಾರುಕಟ್ಟೆ ಬೆಲೆ ವ್ಯತ್ಯಾಸ ಪಾವತಿ’ (ಪಿಡಿಪಿಎಸ್‌) ಯೋಜನೆಯನ್ನೇನೋ ಪಡೆದರು. ಆದರೆ ಖರೀದಿಸುವಾಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ (ಯುಎಂಪಿ) ಇ–ಟೆಂಡರ್‌ ಮೂಲಕವೇ ಯೋಜನೆ ಅನುಷ್ಠಾನಗೊಳಿಸಬೇಕು ಎಂಬ ಷರತ್ತು ವಿಧಿಸಿರುವುದೇ ಗೊಂದಲಕ್ಕೆ ಕಾರಣವಾಗಿವೆ. 

ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಖರೀದಿಸಲಾಗುವ ಒಣಮೆಣಸಿನಕಾಯಿ 73,732 ಟನ್‌ ಮಾತ್ರ. ಆದರೆ, ಬಳ್ಳಾರಿ ಜಿಲ್ಲೆಯೊಂದರಲ್ಲೇ 61,400 ಹೆಕ್ಟೇರ್‌ ಪ್ರದೇಶದಲ್ಲಿ ಒಣಮೆಣಸಿನಕಾಯಿ ಬೆಳೆಯಲಾಗುತ್ತಿದ್ದು 2.50 ಲಕ್ಷ ಟನ್‌ ಇದೊಂದೇ ಜಿಲ್ಲೆಯಲ್ಲಿ ಉತ್ಪಾದನೆ ಆಗುತ್ತದೆ. ಆದರೂ ಬಳ್ಳಾರಿ ಜಿಲ್ಲೆಯ ಎಪಿಎಂಸಿಗಳಲ್ಲಿ ಉತ್ಪನ್ನ ಮಾರಾಟ ಮಾಡಲಾಗದೆ ರೈತರು ಆತಂಕಕ್ಕೆ ಸಿಲುಕಿದ್ದಾರೆ.  

ಕಳೆದ ವರ್ಷ ಬ್ಯಾಡಗಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹40 ಸಾವಿರದಿಂದ ₹50 ಸಾವಿರದವರೆಗೆ ಮಾರಾಟವಾಗಿತ್ತು. ಈ ವರ್ಷ ದರ ಕನಿಷ್ಠ ₹6 ಸಾವಿರಕ್ಕೆ ಕುಸಿದಿದೆ. ಇದೇ ಪರಿಸ್ಥಿತಿ ಆಂಧ್ರ ಪ್ರದೇಶದಲ್ಲೂ ಇತ್ತು. ಕೇಂದ್ರದ ಮೇಲೆ ಒತ್ತಡ ತಂದ ಆಂಧ್ರ ಪ್ರದೇಶ ಸರ್ಕಾರ, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್‌) ಯಶಸ್ವಿಯಾಗಿತ್ತು. ಕರ್ನಾಟಕಕ್ಕೂ ಯೋಜನೆ ವಿಸ್ತರಿಸಬೇಕು ಎಂದು ರೈತರು ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ಮಾಡಿದ್ದರು. 

ADVERTISEMENT

ರೈತರ ಹೋರಾಟಕ್ಕೆ ಮಣಿದಿದ್ದ ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಕ್ವಿಂಟಲ್‌ಗೆ ₹10,589.20 ಪಿಡಿಪಿಎಸ್‌ ಅಡಿಯಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ದರ ನಿಗದಿ ಮಾಡಿರುವ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಒಟ್ಟಾರೆ 73,732 ಟನ್‌ ಖರೀದಿಸುವುದಾಗಿ ಆದೇಶ ಹೊರಡಿಸಿದೆ. 

ಅದರಂತೆ ಬಳ್ಳಾರಿ, ಗದಗ, ಧಾರವಾಡ, ಬಾಗಲಕೋಟೆ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ತುಮಕೂರು, ಕಲಬುರಗಿ, ವಿಜಯನಗರ, ಹಾವೇರಿ, ಕೊಪ್ಪಳ ಜಿಲ್ಲೆಗಳ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ರೈತನಿಂದ ಪ್ರತಿ ಎಕರೆಗೆ 15 ಕ್ವಿಂಟಲ್‌, ಗರಿಷ್ಠ 30 ಕ್ವಿಂಟಲ್‌ ಖರೀದಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗೆ ಖರೀದಿ ಮಾಡುವಾಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ (ಯುಎಂಪಿ) ಇ–ಟೆಂಡರ್‌ ಮೂಲಕವೇ ಯೋಜನೆ ಅನುಷ್ಠಾನಗೊಳಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ, ಬಳ್ಳಾರಿ ಜಿಲ್ಲೆಯ ಎಪಿಎಂಸಿ ಮತ್ತು ಬೇರೆ ಜಿಲ್ಲೆಯ ಕೆಲ ಎಪಿಎಂಸಿಗಳಲ್ಲಿ ‘ಇ–ಟೆಂಡರ್‌’ ನಡೆಸಲು ಒಣಮೆಣಸಿನಕಾಯಿ ಖರೀದಿದಾರರಾಗಲಿ, ಏಜೆಂಟರಾಗಲಿ ಇಲ್ಲದ್ದರಿಂದ ಸಮಸ್ಯೆಯಾಗಿದೆ.

‘ಬಳ್ಳಾರಿ ಜಿಲ್ಲೆಯನ್ನು ಯೋಜನೆಯಿಂದ ಹೊರಗಿಟ್ಟು, ಕೆಲವೇ ಜಿಲ್ಲೆಗಳಿಗೆ ಮಾತ್ರ ಯೋಜನೆಯ ಲಾಭ ಮಾಡಿಕೊಡುವ ಹುನ್ನಾರ ಇದರಲ್ಲಿ ಅಡಗಿದೆ’ ಎಂಬ ಆರೋಪ ಕೇಳಿ ಬಂದಿದೆ. 

ಸರ್ಕಾರಕ್ಕೆ ಜಿಲ್ಲಾಧಿಕಾರಿ ಪತ್ರ 

‘ಒಣಮೆಣಸಿನಕಾಯಿ ಖರೀದಿಗೆ ವಿಧಿಸಲಾಗಿರುವ ನಿಯಮಗಳಿಂದಾಗಿ ಬಳ್ಳಾರಿ ಜಿಲ್ಲೆಯ ರೈತರು ಯೋಜನೆಯ ಅನುಕೂಲತೆಯಿಂದ ವಂಚಿತರಾಗುತ್ತಾರೆ. ಬಳ್ಳಾರಿಯಲ್ಲಿ ಬೆಳೆದಿರುವ ಒಣಮೆಣಸಿನಕಾಯಿಯನ್ನು ಇ-ಟೆಂಡರ್‌ ಇರುವ ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಡಬೇಕು’ ಎಂದು ಸಹಕಾರ ಇಲಾಖೆಗೆ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಪತ್ರ ಬರೆದಿದ್ದಾರೆ. ಆದರೆ ಸರ್ಕಾರ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ‌ ಬೇರೆ ಜಿಲ್ಲೆಗಳ ಎಪಿಎಂಸಿಯಲ್ಲಿ ಉತ್ಪನ್ನ ಮಾರಾಟಕ್ಕೆ ಬಳ್ಳಾರಿ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಟ್ಟರಷ್ಟೇ ಕೇಂದ್ರದ ಯೋಜನೆಯ ಲಾಭ ಸಿಗಲಿದೆ. ಇಲ್ಲವಾದರೆ ಯೋಜನೆ ಸಿಕ್ಕರೂ ಫಲ ಸಿಗದು ಎಂಬ ಸ್ಥಿತಿ ಉದ್ಭವವಾಗಿದೆ. 

ಖರೀದಿ ನಿಯಮಾವಳಿಗಳಿಂದಾಗಿ ಬಳ್ಳಾರಿ ರೈತರಿಗೆ ನಷ್ಟವಾಗಲಿದೆ. ಇದನ್ನು ಪರಿಹರಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ನಿರೀಕ್ಷಿಸಲಾಗುತ್ತಿದೆ. 
– ಪ್ರಶಾಂತ್‌ ಕುಮಾರ್‌ ಮಿಶ್ರಾ ಜಿಲ್ಲಾಧಿಕಾರಿ ಬಳ್ಳಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.