ADVERTISEMENT

ಆರ್ಥಿಕ ವೃದ್ಧಿ ದರ ಕುಂಠಿತ ನಿರೀಕ್ಷೆ

ಹಣಕಾಸು ಸಚಿವಾಲಯದ ವರದಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 3 ಮೇ 2019, 20:16 IST
Last Updated 3 ಮೇ 2019, 20:16 IST
   

ನವದೆಹಲಿ: ದೇಶಿ ಆರ್ಥಿಕ ವೃದ್ಧಿ ದರವು (ಜಿಡಿಪಿ) 2018–19ನೆ ಹಣಕಾಸು ವರ್ಷದಲ್ಲಿ ಅಲ್ಪಮಟ್ಟಿಗೆ ಕುಂಠಿತಗೊಳ್ಳುವ ಸಾಧ್ಯತೆ ಕಂಡುಬಂದಿದ್ದು ಶೇ 7ಕ್ಕೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ.

ಐದು ವರ್ಷಗಳಲ್ಲಿನ ಕನಿಷ್ಠ ಮಟ್ಟ ಇದಾಗಿರಲಿದೆ. ಮೂರನೇ ತ್ರೈಮಾಸಿಕದ ಅಂಕಿ ಅಂಶ ಬಿಡುಗಡೆ ಮಾಡಿರುವ ಕೇಂದ್ರೀಯ ಸಾಂಖ್ಯಿಕ ಕಚೇರಿಯು (ಸಿಎಸ್‌ಒ), ಫೆಬ್ರುವರಿ ತಿಂಗಳಲ್ಲಿಯೇ ಹಿಂದಿನ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರವನ್ನು ಈ ಮೊದಲಿನ ಶೇ 7.2ರಿಂದ ಶೇ 7ಕ್ಕೆ ಪರಿಷ್ಕರಿಸಿತ್ತು.

ಸರಕು ಮತ್ತು ಸೇವೆಗಳ ಖಾಸಗಿ ಉಪಭೋಗ ಕಡಿಮೆಯಾಗಿರುವುದು, ಸ್ಥಿರ ಹೂಡಿಕೆ ಮತ್ತು ರಫ್ತು ವಹಿವಾಟಿನಲ್ಲಿ ಸಾಧಾರಣ ಹೆಚ್ಚಳ ಕಂಡು ಬಂದಿರುವುದರಿಂದ ವೃದ್ಧಿ ದರ ಕಡಿಮೆಯಾಗಲಿದೆ ಎಂದು ಮಾರ್ಚ್‌ನ ಆರ್ಥಿಕ ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ಭಾರತದ ವೃದ್ಧಿ ದರ ಶೇ 7ರಷ್ಟು ದಾಖಲಾದರೂ, ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಬೆಳವಣಿಗೆ ದಾಖಲಿಸುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಎನ್ನುವ ಹೆಗ್ಗಳಿಕೆ ಮುಂದುವರಿಯಲಿದೆ. ಮುಂಬರುವ ವರ್ಷಗಳಲ್ಲಿ ಈ ವೃದ್ಧಿ ದರ ತ್ವರಿತಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ವೃದ್ಧಿ ದರ ಕುಂಠಿತಕ್ಕೆ ಕಾರಣವಾದ ಸಂಗತಿಗಳನ್ನು ಬಗೆಹರಿಸಲು ಹಣಕಾಸು ಸಚಿವಾಲಯ ಉದ್ದೇಶಿಸಿದೆ. ಕೃಷಿ ಕ್ಷೇತ್ರದ ಬೆಳವಣಿಗೆ ದರ ಹೆಚ್ಚಿಸುವ ಅಗತ್ಯ ಇದೆ ಎಂದು ಪ್ರತಿಪಾದಿಸಿದೆ.

ಜಿಡಿಪಿ ಮತ್ತು ಚಾಲ್ತಿ ಖಾತೆ ಕೊರತೆಯ ಅನುಪಾತವು ಜನವರಿ – ಮಾರ್ಚ್‌ ತಿಂಗಳ ನಾಲ್ಕನೆ ತ್ರೈಮಾಸಿಕದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಆರ್ಥಿಕ ಪ್ರಗತಿಯ ವೇಗಕ್ಕೆ ಅಡ್ಡಿಯಾಗಿರುವ ಸಂಗತಿಗಳಿಗೆ ತಡೆ ಬೀಳಲಿದೆ. ಕೇಂದ್ರವು ತನ್ನ ವಿತ್ತೀಯ ಕೊರತೆ ಕಡಿಮೆ ಮಾಡುತ್ತಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಜಿಡಿಪಿ ದರ ಶೇ 7.3ಕ್ಕೆ ಇಳಿಕೆ?

ನವದೆಹಲಿ: 2019–20ನೆ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರವು ಶೇ 7.3ರ ಮಟ್ಟಕ್ಕೆ ಇಳಿಯಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ ಸಂಸ್ಥೆ ಅಂದಾಜಿಸಿದೆ.

ಕೈಗಾರಿಕಾ ಉತ್ಪಾದನೆ ಅದರಲ್ಲೂ ವಿಶೇಷವಾಗಿ ತಯಾರಿಕೆ ಮತ್ತು ವಿದ್ಯುತ್‌ ವಲಯದಲ್ಲಿ ನಷ್ಟ ಕಂಡು ಬರಲಿದೆ. ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವ ಅಂದಾಜು ಮಾಡಲಾಗಿರುವುದರಿಂದ ಕೃಷಿ ಕ್ಷೇತ್ರದ ಸಂಕಷ್ಟ ಮುಂದುವರೆಯಲಿದೆ. ಹವಾಮಾನ ಇಲಾಖೆಯು ವಾಡಿಕೆಯ ಮಳೆಯಾಗಲಿದೆ ಎಂದು ಅಂದಾಜಿಸಿದ್ದರೆ, ಖಾಸಗಿ ಸಂಸ್ಥೆ ಸ್ಕಾಯ್‌ಮೆಟ್‌, ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ನಿರೀಕ್ಷಿಸಿದೆ.

ಕೃಷಿ ಕ್ಷೇತ್ರದ ಒಟ್ಟು ಮೌಲ್ಯ ಸೇರ್ಪಡೆ ಬೆಳವಣಿಗೆಯು ಶೇ 2.7ರಿಂದ ಶೇ 2.5ಕ್ಕೆ ಇಳಿಯಲಿದೆ. ಈ ಎಲ್ಲ ಕಾರಣಗಳಿಗಾಗಿ ವೃದ್ಧಿ ದರವು ಕಡಿಮೆ ಮಟ್ಟದಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಫಿಚ್‌ ಗ್ರೂಪ್‌ನ ಅಂಗಸಂಸ್ಥೆಯಾಗಿರುವ ಇಂಡಿಯಾ ರೇಟಿಂಗ್ಸ್‌, ಇದಕ್ಕೂ ಮೊದಲು ಜಿಡಿಪಿ ಬೆಳವಣಿಗೆಯು ಶೇ 7.5ರಷ್ಟು ಇರಲಿದೆ ಎಂದು ಅಂದಾಜಿಸಿತ್ತು.

ದಿವಾಳಿ ಸಂಹಿತೆಯಡಿ (ಐಬಿಸಿ) ಸಾಲ ವಸೂಲಾತಿಗೆ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಗೆ ಶಿಫಾರಾಸು ಮಾಡಲಾಗಿರುವ ಪ್ರಕರಣಗಳಲ್ಲಿನ ನಿಧಾನ ಪ್ರಗತಿ ಕೂಡ ಆರ್ಥಿಕ ಬೆಳವಣಿಗೆ ದರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಉತ್ಪಾದನಾ ವಲಯಕ್ಕೆ ಬಂಡವಾಳ ಹೂಡಿಕೆ ಹೆಚ್ಚಿಸದಿರುವುದೂ ಇಲ್ಲಿ ಪರಿಗಣನೆಗೆ ಬರಲಿದೆ. ಬಂಡವಾಳ ಹೂಡಿಕೆ ವೆಚ್ಚದ ಬೆಳವಣಿಗೆಯನ್ನೂ ಈ ಮೊದಲಿನ ಅಂದಾಜು ಶೇ 10.3 ರಿಂದ ಶೇ 9.2ಕ್ಕೆ ಪರಿಷ್ಕರಿಸಲಾಗಿದೆ. ಚಿಲ್ಲರೆ ಮತ್ತು ಸಗಟು ಹಣದುಬ್ಬರವು ಕ್ರಮವಾಗಿ ಶೇ 4 ಮತ್ತು ಶೇ 3.4ರಷ್ಟು ಇರಲಿದೆ ಎಂದೂ ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.